ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಣೆ ವೇಳೆ ವಿದ್ಯುತ್ ತಂತಿ ತಗುಲಿ ದಂಪತಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಮೃತ ದಂಪತಿ ಅಮಿತ್ ದೇಸಾಯಿ-ಲತಾ ಕುಟುಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಸಾಂತ್ವನ ಹೇಳಿದರು.
ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಅಮಿತ್ ದೇಸಾಯಿ-ಲತಾ ದೇಸಾಯಿ ಆಗಸ್ಟ್ 6ರ ಭಾನುವಾರ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಳಿಯ ಮತ್ತು ಮಗಳನ್ನು ಕಳೆದುಕೊಂಡು ಆಘಾತಕ್ಕಗೊಳಗಾಗಿರುವ ತಾಯಿ ಚಂದ್ರಮಾಲಾ ದೇಸಾಯಿ ಅವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಸಂತೈಸಿದರು.

ಇದೇ ವೇಳೆ, ʼಲಕ್ಷ್ಮೀತಾಯಿ ಫೌಂಡೇಷನ್ʼ ವತಿಯಿಂದ ಆರ್ಥಿಕ ಸಹಾಯ ನೀಡಿ, ಸರ್ಕಾರದಿಂದಲೂ ಪರಿಹಾರ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪಬ್ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿ; ಮನನೊಂದು ಆತ್ಮಹತ್ಯೆ
ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ದಂಪತಿಗೆ ಅನನ್ಯ ಎಂಬ 2 ವರ್ಷದ ಹೆಣ್ಣು ಮಗು ಇದ್ದು, ಈಗ ಅನಾಥವಾಗಿದೆ. ಈ ಮಗುವನ್ನು ಕಂಡು ಮರುಗಿದ ಲಕ್ಷ್ಮೀ ಹೆಬ್ಬಾಳ್ಕರ್, “ಆ ಮಗುವಿನ ಮುಖ ನೋಡಿದರೆ ಕರುಳು ಕಿತ್ತು ಬಂದಂತಿದೆ. ವಿಧಿ ನಿಜಕ್ಕೂ ಕ್ರೂರಿ. ತಂದೆ ತಾಯಿಯನ್ನು ಕಳೆದುಕೊಂಡ ನೋವು ಯಾವ ಮಗುವಿಗೂ ಬಾರದಿರಲಿ” ಎಂದರು.
ಗ್ರಾಮದ ಹಿರಿಯರು, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಆರ್‌ಐ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.