ನುಡಿನಮನ | ಘರ್ಜನೆ ನಿಲ್ಲಿಸಿದ ʼಜನನಾಟ್ಯ ಮಂಡಳಿʼಯ ಜನ ಗಾಯಕ ಗದ್ದರ್

ಜಮೀನ್ದಾರಿಕೆ, ದಮನಿತರ ಮೇಲಿನ ದೌರ್ಜನ್ಯ, ಫ್ಯಾಸಿಸಂ, ಬಂಡವಾಳಶಾಹಿಗಳ ವಿರುದ್ಧ ಮತ್ತು ತಮ್ಮ ಹೋರಾಟದ ಪ್ರತಿಫಲವಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ವಿರುದ್ದ ನಿರಂತರ ಜಗಳಕ್ಕೆ ಬಿದ್ದ ಗದ್ದರ್, 2010ರ ನಂತರ ಹೆಚ್ಚಾಗಿ ಅಂಬೇಡ್ಕರ್ ವಿಚಾರಗಳೆಡೆ ವಾಲಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಭಾರತದ ಸಂವಿಧಾನ ಗ್ರಂಥವನ್ನು ಎದೆಗವಚಿಕೊಂಡು ಅವರು ಎಲ್ಲಡೆ ತೆರಳುತ್ತಿದ್ದರು

“ತುಪಾಕಿ ರಾಜ್ಯದಲ್ಲಿ ಅಣ್ಣ, ನೀವು ತೂಪಾನ್ ಆಗಿ ಏಳಬೇಕು”; ಇದು ಶೋಷಕ ವ್ಯವಸ್ಥೆಯ ವಿರುದ್ಧ ಕ್ರಾಂತಿಕಾರಿ ಗವಿ ಗದ್ದರ್ ಕಟ್ಟಿದ ಹಾಡೊಂದರ ಸಾಲು. ಜಾತಿ ಪದ್ದತಿ, ಜಮೀನ್ದಾರಿ ವ್ಯವಸ್ಥೆ, ಬಂಡವಾಳ ಶಾಹಿಗಳ ಲೂಟಿ, ಸರ್ಕಾರದ ಜನವಿರೋಧಿ ನೀತಿ ಮತ್ತು ಮಾನವ ಹಕ್ಕುಗಳ ದಮನದ ವಿರುದ್ಧ ಸಿಡಿಲಾಗಿ ಘರ್ಜಿಸುತ್ತಿದ್ದ, ಜನನಾಟ್ಯ ಮಂಡಳಿಯ ಜನಗಾಯಕ ಗದ್ದರ್ ಇಹಲೋಕ ತ್ಯಜಿಸಿದ್ದಾರೆ. ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಜನಪರ ಆಕ್ರಂದನವಾಗಿ ಗುಡುಗುತ್ತಿದ್ದ ಗದ್ದರ್‌ ಅವರ ಧ್ವನಿ ಈಗ ತಣ್ಣಗೆ ಮಲಗಿದೆ. ಇದರಿಂದ ಸಾಮಾಜಿಕ ನ್ಯಾಯ, ಪ್ರಜಾಸತ್ತಾತ್ಮಕ ವ್ಯವಸ್ಥೆಗಾಗಿ ಹಾಗೂ ಸಂವಿಧಾನದ ರಕ್ಷಣೆಗಾಗಿ ಬಡಿದಾಡುತ್ತಿದ್ದ ಬಹುದೊಡ್ಡ ಸಾಂಸ್ಕೃತಿಕ ಅಸ್ಮಿತೆಯೊಂದು ಕರಗಿ ಹೋದಂತಾಗಿದೆ.

1949ರಲ್ಲಿ ಆಂಧ್ರ ಪ್ರದೇಶದ ಮೇಡಕ್ ಜಿಲ್ಲೆಯ ತೂಪ್ರಾನ್ ಎಂಬಲ್ಲಿ, ಲಚ್ಚಮ್ಮ ಮತ್ತು ಶೇಷಯ್ಯ ಎನ್ನುವ ದಲಿತ ಕೂಲಿ ಮನೆತನದಲ್ಲಿ ಜನಸಿದ ಗುಮ್ಮಡಿ ವಿಠ್ಠಲರಾವ್, ಬಾಲ್ಯದಿಂದಲೇ ಅಸ್ಪೃಶ್ಯತೆಯ ಕರಾಳತೆ, ಭೂಮಾಲೀಕರ ಅಟ್ಟಹಾಸ, ರಾಜಕಾರಣಿಗಳ ದಗಲ್ಬಾಜಿ ಮತ್ತು ಪೊಲೀಸ್ ವ್ಯವಸ್ಥೆಯ ಕ್ರೌರ್ಯವನ್ನು ಕಂಡು ಬೆಳೆದವರು. ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಮುಗಿಸಿದ ನಂತರ ಸ್ಟೇಟ್‌ಬ್ಯಾಂಕ್‌ ಆಫ್ ಹೈದ್ರಾಬಾದ್‌ನಲ್ಲಿ ದೊರೆತ ಉದ್ಯೋಗದಿಂದ ತೃಪ್ತರಾಗದ ವಿಠ್ಠಲರಾವ್, ಕಾರಂಚೇಡುನಂತಹ ದಲಿತರ ಸಾಮೂಹಿಕ ಕಗ್ಗೊಲೆಗಳಿಂದ ವ್ಯಗ್ರರಾಗಿ 1984ರಲ್ಲಿ ತಮ್ಮ ಬ್ಯಾಂಕ್‌ ಉದ್ಯೋಗಕ್ಕೆ ತಿಲಾಂಜಲಿಯಿತ್ತು ಪಂಜಾಬ್‍ನಲ್ಲಿ ಬ್ರಿಟಿಷ್‌ ವಸಹಾತುಶಾಹಿ ಆಡಳಿತದ ವಿರುದ್ಧ ತೀವ್ರವಾಗಿ ಸಮರ ಸಾರಿದ್ದ ‘ಗದ್ದರ್’ ಪಕ್ಷದ ಹೆಸರನ್ನೇ ತಮ್ಮ ಹೆಸರನ್ನಾಗಿ ಬದಲಾಯಿಸಿಕೊಂಡು. ಗದ್ದರ್ ಎನ್ನುವ ಪರ್ಯಾಯ ಸಾಂಸ್ಕೃತಿಕ ಪ್ರತಿರೋಧವಾಗಿ ಭಾರತದ ಕ್ರಾಂತಿಕಾರಿ ಸಂಸ್ಕೃತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ತೊಡಗಿಸಿಕೊಂಡರು.

ಸಿಪಿಐ (ಮಾಕ್ರ್ಸಿಸ್ಟ್ – ಲೆನಿನಿಸ್ಟ್) ವಿಚಾರಧಾರೆಯೊಂದಿಗೆ ಗುರುತಿಸಿಕೊಂಡಿದ್ದಲ್ಲದೆ, ಜನಸಂಗ್ರಾಮ (ಪೀಪಲ್ಸ್‌ ವಾರ್) ಸಾಂಸ್ಕೃತಿಕ ವಕ್ತಾರರಾಗಿ ವರ್ಗ ಸಂಘರ್ಷದ ಕುರಿತು ಜಾತಿರಹಿತ ಹೋರಾಟದ ಕುರಿತು ತಮ್ಮ ಹಾಡುಗಳ ಮೂಲಕ ಚುಂಬಕಶಕ್ತಿಯಂತೆ ಜನರನ್ನು ಸೆಳೆಯುತ್ತಿದ್ದರು. ಪಟಾ-ಪಟಿ, ಜುಬ್ಬಾ, ಪೈಜಾಮೂ ಧರಿಸಿ, ಅತ್ಯಂತ ಸರಳವಾಗಿ ಮೇಲುದನಿಯಲ್ಲಿ ಕಾಮ್ರೆಡ್‍ಗಳೊಂದಿಗೆ, ವಿದ್ಯಾರ್ಥಿ ಯುವಜನರೊಂದಿಗೆ ಸಮಕಾಲೀನ ಸಮಸ್ಯೆಗಳಲ್ಲಿ ಸೈದ್ದಾಂತಿಕ ಸ್ಪಷ್ಟತೆ ಕೊಡುತ್ತಿದ್ದ ಅವರು ಜನನಾಟ್ಯ ಮಂಡಳಿಯ ವೇದಿಕೆಯ ಮೇಲೆ ಕಂಬಳಿ ಪಂಚೆಯುಟ್ಟು ಬರೀ ಮೈಮೇಲೆ ಕಂಬಳಿ ಹೊದ್ದು, ಕೆಂಪುಶಾಲು ಹಾಕಿಕೊಂಡು ಕೆಂಪು ಜಂಡಾ ಸುತ್ತಿದ್ದ ಬಡಿಗೆ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಾಡಲು ಶುರು ಮಾಡಿದರೆ, ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುವವರು ಕೂಡ ಅವರ ಹಾಡುಗಳ ಮಾಂತ್ರಿಕತೆಗೆ ತಲೆದೂಗುತ್ತಿದ್ದರು. ತೆಲುಗು, ಉರ್ದು, ಹಿಂದಿ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ನಿರರ್ಗಳವಾಗಿ ಶೋಷಕ ವ್ಯವಸ್ಥೆಯನ್ನು ಹಾಗೂ ಶೋಷಿತರ ಬವಣೆಗಳನ್ನು ವಿವರಿಸುತ್ತಾ ಹಾಡುಗಳ ಮೂಲಕ ತುಳಿತಕ್ಕೊಳದವರ ಎದೆಗಳಲ್ಲಿ ಇಳಿದು ಬಿಡುತ್ತಿದ್ದರು. 1990ರಲ್ಲಿ ಹೈದ್ರಾಬಾದಿನ ನಿಜಾಂ ಕಾಲೇಜಿನ ಮೈದಾನದಲ್ಲಿ ನಡೆದ ಜನನಾಟ್ಯ ಮಂಡಳಿಯ 19ನೇ ವಾರ್ಷಿಕೋತ್ಸವದಲ್ಲಿ ಗದ್ದರ್ ಅವರನ್ನು ಕಣ್ತುಂಬಿಕೊಂಡು ಅವರ ಗುಂಡಿಗೆಯಿಂದ ಹೊರಹೊಮ್ಮುವ ಹೋರಾಟದ ಹಾಡುಗಳಿಗೆ ಕಿವಿಯಾಗಲು ಸುಮಾರು 3 ಲಕ್ಷ ಜನ ಸೇರಿದ್ದರೆನ್ನುವುದು ಇಂದಿಗೂ ಪರ್ಯಾಯ ಜನಪರ ಸಾಂಸ್ಕೃತಿಕ ವಲಯದಲ್ಲಿ ದಾಖಲೆಯಾಗಿ ನಿಂತಿದೆ.

ವರ್ಗ ಸಂಘರ್ಷದ ಮೂಲಕ ಶ್ರಮಿಕರ ಸಮಾನತೆಯನ್ನು ಪ್ರತಿಪಾದಿಸುವ ಮಾವೋಯಿಸಂ ಹಾಗೂ ಜಾತಿ ಸಂಘರ್ಷದ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕೆಂಬ ಅಂಬೇಡ್ಕರಿಸಂ, ಈ ಎರಡನ್ನೂ ಸಮೀಕರಿಸಿ ಭಾರತದ ಸಮಾಜೋ-ಆರ್ಥಿಕ ವ್ಯವಸ್ಥೆಯಲ್ಲಿ ಜಾತಿ ವರ್ಗಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಜಾತಿ- ವರ್ಗಗಳ ಆಧಾರದ ಮೇಲೆ ಚಳವಳಿ ಕಟ್ಟಬೇಕಿದೆ ಎಂದು ಗದ್ದರ್ ಪದೇ-ಪದೇ ಹೇಳುತ್ತಿದ್ದರು. ಭಾರತದ ಕಮಿನಿಷ್ಟರು ಜಾತಿ ವ್ಯವಸ್ಥೆಯನ್ನು ಒಪ್ಪಲೇಬೇಕು ಎನ್ನುವುದು ಅವರ ತರ್ಕವಾಗಿತ್ತು.

ಮಧ್ಯಪ್ರದೇಶ, ಒಡಿಶಾ, ಛತ್ತಿಸಗಡ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಸಂಚರಿಸುತ್ತಾ, ಜನನಾಟ್ಯ ಮಂಡಳಿ ಮತ್ತು ಅಖಿಲಭಾರತ ಕ್ರಾಂತಿಕಾರಿ ಸಾಂಸ್ಕೃತಿಕ ಒಕ್ಕೂಟದ ಮೂಲಕ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ, ಭೂಮಿ ಒಡೆತನಕ್ಕಾಗಿ ಜನ ಸಂಘಟನೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದ ಗದ್ದರ್, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಘೋಷಣೆ ಮೊಳಗಿಸಿದ್ದ ತೆಲಂಗಾಣ ಪ್ರಜಾ ಫ್ರಂಟ್ ಎನ್ನುವ ರಾಜಕೀಯ ಚಳವಳಿಯ ಅಧ್ಯಕ್ಷರಾಗಿಯೂ 2010ರಿಂದ 2012ರ ವರೆಗೆ ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಜೈ ಬೋಲೊ ತೆಲಂಗಾಣ ಎನ್ನುವ ಸಿನಿಮಾದಲ್ಲಿ ನಟಿಸಿ ಹಾಡುವುದರ ಮೂಲಕ ಪ್ರತ್ಯೇಕ ತೆಲಂಗಾಣದ ಹೋರಾಟಕ್ಕೆ ಶಕ್ತಿ ತುಂಬಿದರು, ಜೂನ್ 2, 2014 ರಂದು ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಮನ್ನಣೆ ಪಡೆಯಲು ಗದ್ದರ್ ಎನ್ನುವ ಹೋರಾಟದ ಸರದಾರನ ಕೊಡುಗೆ ಚಿರಸ್ಮರಣಿಯವಾದದ್ದು, ಗದ್ದರ್‌ರಂತಹ ಮಗನನ್ನು ಹೆತ್ತ ತೆಲಂಗಾಣ ತಲ್ಲಿ ನಿಜಕ್ಕೂ ಧನ್ಯಳು.

ತಮ್ಮ ಹೋರಾಟದ ಮೂಲಕ ಶೋಷಿತ ಸಮುದಾಯಗಳ ಸಾಂಸ್ಕೃತಿಕ ರಾಯಭಾರಿಯಾಗಿ ಹೊರಹೊಮ್ಮಿದ ಗದ್ದರ್ ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಅಣ್ಣನಾಗಿ ದಕ್ಕಿದ್ದರು. ಅವರ ಈ ಇಮೇಜ್ ಎಷ್ಟೊಂದು ಜನಪ್ರಿಯವಾಯಿತೆಂದರೆ, ತೆಲುಗಿನ ಮತ್ತು ಇತರ ಭಾಷೆಯ ಎಷ್ಟೊ ಸಿನಿಮಾಗಳಲ್ಲಿ ಅವರ ಹಾವಭಾವ ಹೊಲುವ, ಕ್ರಾಂತಿಕಾರಿ ಹಾಡುಗಳನ್ನು ಹಾಡುವ, ಶೋಷಕ ವ್ಯವಸ್ಥೆಯ ವಿರುದ್ದ ಸಿಡಿದೇಳುವ ಅನೇಕ ಸಿನಿಮಾಗಳು ತಯಾರಾಗಿ, ಗಲ್ಲಾ ಪೆಟ್ಟಿಗೆಯನ್ನು ಸೂರೆ ಹೊಡೆದವು. ಸ್ವತಃ ಗದ್ದರ್ ಅವರೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1979ರ ಮಾ ಭೂಮಿ, 1983ರ ರಂಗುಲಕುಲ, 1995ರಲ್ಲಿ ಒರೇಯ್ ರಿಕ್ಷಾ, 2011ರಲ್ಲಿ ಜೈ ಬೋಲೋ ತೆಲಂಗಾಣಾ, 2016ರಲ್ಲಿ ದಂಡಕಾರಣ್ಯಮು ಮತ್ತು 2022ರಲ್ಲಿ ಗಾಡ್‍ಫಾದರ್, ಇವು ಅವರ ನಟಿಸಿದ ಪ್ರಮುಖ ಹಾಗೂ ಪ್ರಭಾವಶಾಲಿ ಸಿನಿಮಾಗಳು. ಗದ್ದರ್ ಘರ್ಜನೆ, ಗದ್ದರ್ ಗುಂಡೆ ಚಪ್ಪಳ್ಲು ಮುಂತಾದ ಕ್ಯಾಸೆಟ್ ಹಾಡುಗಳು 1980-90ರ ದಶಕದಲ್ಲಿ ಮನೆಮಾತಾಗಿದ್ದವು. ಅವರ ಹಾಡುಗಳ ಆಲ್ಬಮ್‍ಗಳಿಗೆ ಇಂದಿಗೂ ಅಪಾರ ಬೇಡಿಕೆಯಿದೆ.

ಅವಿಭಜಿತ ಆಂಧ್ರಪ್ರದೇಶದೊಂದಿಗೆ ಬೆಸೆದುಕೊಂಡಿರುವ ಕರ್ನಾಟಕಕ್ಕೂ ಗದ್ದರ್ ಅವರಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಮುಖ್ಯವಾಗಿ ರಾಯಚೂರು, ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಅವರ ಅಪಾರ ಸಂಖ್ಯೆಯ ಹೋರಾಟದ ಸಂಗಾತಿಗಳು, ಕಲಾವಿದರು ಮತ್ತು ಸಾಹಿತಿಗಳಿದ್ದಾರೆ. ಅವರಿಗೆ 2003ರಲ್ಲಿ ಚಿತ್ರದುರ್ಗದ ಮುರಘಾಮಠ ಬಸವ ಪ್ರಶಸ್ತಿ ಘೋಷಣೆ ಮಾಡಿದಾಗ ಸಂಘಪರಿವಾರದಿಂದ ಆಕ್ಷೇಪ ವ್ಯಕ್ತವಾಗಿತ್ತು. ಬಾಬಾ ಬುಡನ್‌ಗಿರಿ ರಕ್ಷಿಸುವ ಹೋರಾಟದಲ್ಲಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಅವರ ಬಹುತೇಕ ತೆಲುಗಿನ ಹೋರಾಟದ ಹಾಡುಗಳು ಕನ್ನಡಕ್ಕೆ ಅನುವಾದಗೊಂಡು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ.

ಸದಾಕಾಲ ಪ್ರಭುತ್ವದ ದೌರ್ಜನ್ಯಗಳಿಗೆ ಪ್ರತಿಸವಾಲು ಹಾಕುತ್ತಾ ಬಂದ ಗದ್ದರ್, ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದವರು. 1997ರಲ್ಲಿ ಪೊಲೀಸ್ ಎನ್‍ಕೌಂಟರ್ ಮೂಲಕ ಅವರ ದನಿಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಯಿತು. ಗಟ್ಟಿಗುಂಡಿಗೆಯ ಗದ್ದರ್ ಆ ಗುಂಡುಗಳಿಗೆ ಜಗ್ಗಲಿಲ್ಲ. ದೇಹ ಹೊಕ್ಕ ಮೂರು ಗುಂಡುಗಳಲ್ಲಿ ಎರಡನ್ನು ಹೊರ ತೆಗೆಯಲಾಯಿತಾದರೂ, ಒಂದು ಮಾತ್ರ ಬೆನ್ನು ಹುರಿಯಲ್ಲಿಯೇ ಹೂತುಹೋಯಿತು. ಹೋರಾಟದ ಸಮರದಲ್ಲಿ ಸಹಸ್ರಾರು ಕಾಮ್ರೇಡ್‌ಗಳು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದನ್ನು ಕಂಡಿದ್ದ ಅವರಿಗೆ ತಮ್ಮ ಮೇಲಿನ ದಾಳಿ ನಿತ್ರಾಣ ಮಾಡಲಿಲ್ಲ. ಬುಲೆಟ್ ಗುಂಡಿನೊಂದಿಗೇ ತಮ್ಮ ಬದುಕಿನ ಪ್ರಯಾಣ ಮುಂದುವರೆಸಿಕೊಂಡು ಹೋದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಜುಲೈ ೨ರಂದು ತೆಲಂಗಾಣದಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದ ಗದ್ದರ್‌

ಜಮೀನ್ದಾರಿಕೆ ವಿರುದ್ದ, ದಮನಿತರ ಮೇಲಿನ ದೌರ್ಜನ್ಯ, ಫ್ಯಾಸಿಸಂ, ಬಂಡವಾಳಶಾಹಿಗಳ ವಿರುದ್ಧ ಮತ್ತು ತಮ್ಮ ಹೋರಾಟದ ಪ್ರತಿಫಲವಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ವಿರುದ್ದ ನಿರಂತರ ಜಗಳಕ್ಕೆ ಬಿದ್ದ ಗದ್ದರ್, 2010ರ ನಂತರ ಹೆಚ್ಚಾಗಿ ಅಂಬೇಡ್ಕರ್ ವಿಚಾರಗಳೆಡೆ ವಾಲಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಭಾರತದ ಸಂವಿಧಾನ ಗ್ರಂಥವನ್ನು ಎದೆಗವಚಿಕೊಂಡು ಅವರು ಎಲ್ಲಡೆ ತೆರಳುತ್ತಿದ್ದರು. ಶಿಕ್ಷಣ ಒಂದೇ ಸಮಾನತೆ ಸಾಧಿಸುವ ಪ್ರಮುಖ ಆಯುಧವೆಂದು ನಂಬಿದ್ದ ಅವರು, ಸಿಕಂದರಾಬಾದ್‍ನಲ್ಲಿ ಮಹಾಬೋಧಿ ಶಾಲೆಯನ್ನು ತೆರೆದು ಶೋಷಿತ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಶಾಲಾಪೂರ್ವ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತವಾಗಿ ತೆಲಂಗಾಣದ ಎಲ್ಲಾ ಮಕ್ಕಳಿಗೆ ಶಿಕ್ಷಣ ಒದಗಿಸುವಂತೆ ಅಲ್ಲಿನ ಮುಖ್ಯಮಂತ್ರಿಗೆ ತಾಕೀತು ಮಾಡಿದ್ದರು. ಅದು ಸಾಧ್ಯವಾಗದ ಕಾರಣ ಕೆ.ಸಿ.ಆರ್ ಸರ್ಕಾರವನ್ನೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೊಗೆಯುವ ಶಪಥ ಮಾಡಿದ್ದರು.

ಇದನ್ನು ಓದಿ ನೆನಪು | ತೆಲುಗು ಜಾನಪದ ಕೋಗಿಲೆ ಗದ್ದರ್

ತಮ್ಮ ಅಧ್ಯಕ್ಷತೆಯಲ್ಲಿ ಗದ್ದರ್ ಪ್ರಜಾಪಾರ್ಟಿ ಸ್ಥಾಪಿಸುವ ಮೂಲಕ ಕಾಂಗ್ರೆಸ್ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ರಣನೀತಿಯನ್ನು ರೂಪಿಸುತ್ತಿದ್ದರು. ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರವನ್ನು ಮತ್ತು ಕೆ.ಸಿ.ಆರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಪಕ್ಷವನ್ನು ತಲ್ಲಿ ತೆಲಂಗಾಣದಲ್ಲಿ ಮಣಿಸುವ ಅಖಾಡ ಸಿದ್ಧಪಡಿಸಲು ಇದೇ ಜುಲೈ2, 2023ರಂದು ಕಮ್ಮಮ್‍ನಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಭಾಗವಹಿಸಿ ರಾಹುಲ್‍ಗಾಂಧಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಇಂತಹ ನಿರ್ಣಾಯಕ ಮತ್ತು ಐತಿಹಾಸಿಕ ಸಂದರ್ಭದಲ್ಲಿ, ತೀವ್ರ ಅನಾರೋಗ್ಯದಿಂದಾಗಿ 77 ವರ್ಷದ ಅವರ ದೇಹ ವಿರಮಿಸಿದೆ. ಶೋಷಿತರ ಪರ ಘರ್ಜಿಸುತ್ತಿದ್ದ ಧ್ವನಿ ಇಲ್ಲವಾಗಿದೆ. ಹೋರಾಟದಲ್ಲಿ ಮಡಿದ ಕಾಮ್ರೇಡ್‍ಗಳನ್ನು ನೆನೆದು, ಅವರ ನೆನಪುಗಳನ್ನು ಕೂಸಿನಂತೆ ಎದೆಗಪ್ಪಿಕೊಂಡು, ಕಣ್ಣೀರಿನ ಹಾಡಿನಿಂದ ಸಂತೈಸುತ್ತಿದ್ದ ಆ ತಾಯಿ ಹೃದಯ ಸ್ತಬ್ದವಾಗಿದೆ. ಅವರ ಪತ್ನಿ ವಿಮಲಾ ಗದ್ದರ್, ಮಗ ಸೂರ್ಯ ಮತ್ತು ಮಗಳು ವೆನ್ನಿಲಾ ಒಳಗೊಂಡಂತೆ, ಕೋಟ್ಯಂತರ ಶೋಷಿತರ ಕಣ್ಣಾಲಿಗಳು ತುಂಬಿವೆ. ಅಳು ಮುಕ್ಕಳಿಸಿ ಬರುತ್ತಿದೆ. ದುಃಖಿತರನ್ನು ಸಂತೈಸಲು ತಲ್ಲಿ ತೆಲಂಗಾಣ ಬಿಡ್ಡ ಇನ್ನಿಲ್ಲ. ಆದರೆ ಅವರ ಕೆಚ್ಚೆದೆಯ ಹೋರಾಟದ ಹಾದಿ ಇದೆ ಮತ್ತು ಹೋರಾಟದ ಹಾಡುಗಳ ಘರ್ಜನೆ ಮಾರ್ಧನಿಸುತ್ತಲೇ ಇರುತ್ತದೆ.

ವೈ ಮರಿಸ್ವಾಮಿ
ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

 

LEAVE A REPLY

Please enter your comment!
Please enter your name here