ಬೆಳಗಾವಿಯಿಂದ 15 ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ಕಳೆದ ವರ್ಷದಿಂದ ಟೈಗರ್ ಸಫಾರಿ ಪ್ರಾರಂಭವಾಗಿದ್ದು, ಜನರಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಗ್ರಾಮ ಪಂಚಾಯತಿಯಿಂದ 2020-2021 ಹಾಗೂ 2021-2022ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯವನ್ನು ಅಭಿವೃದ್ಧಿಪಡಿಸಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವಾಗಿದೆ.
125 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಮೃಗಾಲಯವು, ಈ ಹಿಂದೆ ಚುಕ್ಕೆ ಜಿಂಕೆಗಳ ವಾಸಸ್ಥಾನವಾಗಿತ್ತು. ಹಾಗಾಗಿ, ಅದಕ್ಕೆ ಸ್ಥಳೀಯರು ‘ಚಿಗರಿ ಮಾಳ’ ಎಂದು ಕರೆಯುತ್ತಿದ್ದರು. ಆ ಬಳಿಕ ಇಲ್ಲಿ 1989ರಲ್ಲಿ ನಿಸರ್ಗಧಾಮ ನಿರ್ಮಿಸಲಾಯಿತು. 2018ರಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಆರಂಭಿಸಲಾಗಿದೆ.
ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ₹27 ಲಕ್ಷ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 3 ಹೊಸ ಕೆರೆಗಳ ನಿರ್ಮಾಣ ಮಾಡಲಾಗಿದೆ. ₹27 ಲಕ್ಷದಲ್ಲಿ ನೀರಾವರಿ ಕಾಲುವೆ, ಸಿಂಹದ ಪಂಜರದ ಬಳಿ ₹19 ಲಕ್ಷಗಳಲ್ಲಿ ಕೆರೆ ನಿರ್ಮಾಣ, 67 ಲಕ್ಷ ರೂಗಳಲ್ಲಿ ಚರಂಡಿ ನಿರ್ಮಾಣ, ರಸ್ತಗಳಿಗೆ ಫೇವರ್ಸ್ ಅಳವಡಿಕೆ 114 ಲಕ್ಷ ರೂಗಳಲ್ಲಿ, ಹುಲಿ ಸಫಾರಿ ರಸ್ತೆ ನಿರ್ಮಾಣ, ಮೃಗಾಯದಲ್ಲಿ ಸಿಸಿ ರಸ್ತಗಳ ನಿರ್ಮಾಣ ಸೇರಿದಂತೆ 760 ಲಕ್ಷ ರೂಗಳಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಲಾಭವನ್ನು ಸದುಪಯೋಗ ಮಾಡಿಕೊಂಡಿರುವುದು ಈ ಮೃಗಾಲಯದ ವಿಶೇಷವಾಗಿದೆ.

ಮೃಗಾಲಯದಲ್ಲಿ 2 ಸಿಂಹಗಳು, 3 ಹುಲಿಗಳು, 3 ಚಿರತೆಗಳು, 2 ಕರಡಿಗಳು ಇವೆ. 13 ನರಿ, 16 ಜಿಂಕೆ, 26 ಕೃಷ್ಣಮೃಗ,ಬ್ಲ್ಯಾಕ್ ಬಕ್ 4 ಕತ್ತೆಕಿರುಬ, 6 ನವಿಲು, ಮೊಸಳೆ, ಕಡವೆ, ಎಮು, ಗುಲಾಬಿ ಕೊರಳಿನ ಗಿಳಿ, ಕೆಂದಲೆ ಗಿಳಿ ಸೇರಿದಂತೆ 25 ಪ್ರಭೇದಗಳ ಒಟ್ಟು 215 ಪ್ರಾಣಿ–ಪಕ್ಷಿಗಳನ್ನು ಇಲ್ಲಿ ನೋಡಬಹುದು.

ಈ ಕುರಿತು ವಲಯ ಅರಣ್ಯಾಧಿಕಾರಿ ಪವನ್ ಮಾತನಾಡಿ, “ಈ ಮೃಗಾಲಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಿಸಿ ರಸ್ತೆ, ಕೆರೆ, ಚರಂಡಿಗಳು ಸೇರಿದಂತೆ ಅನೇಕ ಅಭಿವೃದ್ಧಿಗಳಾಗಿದ್ದು, ಮೃಗಾಲಯದಲ್ಲಿ 27 ವಿಧದ 215 ಪ್ರಾಣಿ ಪಕ್ಷಿಗಳಿವೆ. ನಿತ್ಯ 800ರಿಂದ 1000 ಜನ ಬರುತ್ತಾರೆ. ಶನಿವಾರ ಮತ್ತು ಭಾನುವಾರ 3000ದವರೆಗೆ ಪ್ರವಾಸಿಗರು ಬರುತ್ತಾರೆ. ಪಶು ವೈದ್ಯಾಧಿಕಾರಿಗಳು ಹಾಗೂ 30 ಜನರು ಕೆಲಸಗಾರು ಇದ್ದಾರೆ” ಎಂದು ತಿಳಿಸಿದರು.

ಧಾರವಾಡದಿಂದ ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿಗರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಇಲ್ಲಿ ಸಿಂಹ, ಕರಡಿ, ಜಿಂಕೆ, ಚಿರತೆ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ಇದ್ದು, ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುವುದು ಒಳ್ಳೆಯದು ಹಾಗೂ ಸರ್ಕಾರವು ಇನ್ನೂ ಹೆಚ್ಚು ಪ್ರಾಣಿ-ಪಕ್ಷಿಗಳನ್ನು ಮೃಗಾಲಯಕ್ಕೆ ತರಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಆಫ್ರಿಕನ್ ಹಂದಿ ಜ್ವರ ಪತ್ತೆ; ಹಂದಿ ಕೃಷಿ ಉದ್ಯಮ ಧ್ವಂಸ
ಈ ಕುರಿತು ಈ ದಿನ.ಕಾಮ್ ಜತೆ ಸಾವಿತ್ರಿ ಮಾತನಾಡಿ, “ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳಿವೆ. ನಾವು 4 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆವು. ಈಗ ಮತ್ತೊಮ್ಮೆ ಬಂದಿದ್ದೇವೆ. ಈಗ ಸ್ವಲ್ಪಮಟ್ಟಿಗೆ ಅಭಿವೃದ್ಧಿಯಾಗಿದೆ. ಮಕ್ಕಳಿಗೂ ಆಟ ಆಡಲು ಅನುಕೂಲವಿದೆ” ಎಂದು ತಿಳಿಸಿದರು.
ಮನರೇಗಾ ಯೋಜನೆಯಡಿಯಲ್ಲಿ ಅಭಿವೃದ್ಧಿ ಹೊಂದಿರುವ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದು ಯೋಜನೆಯೊಂದನ್ನು ಸದ್ಬಳಕೆ ಮಾಡಿಕೊಂಡರೆ ಹೆಚ್ಚಿನ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು