ಕಳಸಾ-ಬಂಡೂರಿ ನಾಲಾ ಯೋಜನೆಯ ಅನುಷ್ಠಾನವು ಪರಿಸರಕ್ಕೆ ಮಾರಕವಾಗಲಿದೆ ಎಂದು ಪರಿಸರವಾದಿಗಳು ತಿಳಿಸಿದ್ದು, ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪರ್ಯಾವರಣಿ, ಪರಿಸರಕ್ಕಾಗಿ ನಾವು, ಪರಿವರ್ತನಾ, ಗ್ರಾಕೂಸ್ ಹಾಗೂ ಜಾಗೃತ ಮಹಿಳಾ ಒಕ್ಕೂಟದ ಸಂಘಟನೆಗಳ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದು, ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಸರ ಹೋರಾಟಗಾರರಾದ ನಿತಿನ್ ಧೋಂಡ ಮಾತನಾಡಿ, “ನ್ಯಾಯಾಧೀಕರಣದ ತೀರ್ಪಿನ ಪ್ರಕಾರ, ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಮಲಪ್ರಭಾ ನದಿಗೆ ಸುಮಾರು 3.94 ಟಿಎಂಸಿ ಅಡಿ ನೀರನ್ನು ತಿರುಗಿಸಲಾಗುತ್ತದೆ. ಆದರೆ, ಈ ಯೋಜನೆಯಿಂದ ಅಣೆಕಟ್ಟು ಮತ್ತು ಕಾಲುವೆಗಳ ನಿರ್ಮಾಣದಿಂದ ಅರಣ್ಯಕ್ಕೆ ಹಾನಿಯಾಗಲಿದೆ. 2 ಲಕ್ಷಕ್ಕೂ ಹೆಚ್ಚು ಮರಗಳು ಹುಲಿ ಕಾರಿಡಾರ್ ಸೇರಿದಂತೆ ಪಶ್ಚಿಮ ಘಟ್ಟದ ಅಭಯಾರಣ್ಯಗಳಿಗೆ ತೊಂದರೆಯಾಗಲಿದೆ” ಎಂದರು.
ನ್ಯಾಯಾಧೀಕರಣದ ವಿಚಾರಣೆ ವೇಳೆ, ನಮ್ಮ ಅಭಿಪ್ರಾಯ ತಿಳಿಸಲು ಪ್ರಯತ್ನಿಸಿದರೂ ಅವರು ಕೇಳಲಿಲ್ಲ. ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಂಡರೆ ಉತ್ತರ ಕರ್ನಾಟಕಕ್ಕೆ ಮಳೆಯ ಮೂಲವಾಗಿರುವ ಪಶ್ಚಿಮಘಟ್ಟ ಪ್ರದೇಶ ವಿನಾಶವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದಿಲೀಪ್ ಕಾಮತ್ ಮಾತನಾಡಿ, “1980ರಲ್ಲಿ ದೇಶದಲ್ಲಿ ಪರಿಸರ ಕುರಿತ ಚರ್ಚೆ ಪ್ರಾರಂಭವಾಗಿದೆ. ಪಶ್ಚಿಮ ಘಟ್ಟಗಳ ಉಳಿವಿಗಾಗಿ 1989ರಲ್ಲಿ 3000 ಕೀ .ಮಿ ಪಾದ ಯಾತ್ರೆ ಮಾಡಿದ್ದೆವು. ಆ ಸಂದರ್ಭದಲ್ಲಿ ಶಿವರಾಮ ಕಾರಂತರು ಸಹ ಆಶಿರ್ವಾದ ಮಾಡಿದ್ದರು. ಎಸ್ ಆರ್ ಹಿರೇಮಠ್ ಮತ್ತು ನಾವು ಒಂದು ಬುಲೆಟಿನ್ ಮಾಡಿದ್ದೆವು. ಕೇರಳ, ಕರ್ನಾಟಕ, ಗುಜರಾತ್, ಗೋವಾ, ಮಹಾರಾಷ್ಟ್ರ ಐದು ರಾಜ್ಯಗಳ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಮಾಧವ್ ಗಾಡ್ಗೀಳ್ ಕೈಲಾಸ್ ಅವರು ಭಾಗವಹಿಸಿದ್ದರು. 100 ಜನ ಕನ್ಯಾಕುಮಾರಿಯಿಂದ ಗೋವಾದವರೆಗೆ ಪಾದಯಾತ್ರೆ ಪೂರ್ಣಗೊಳಿಸಿದ್ದರು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ವಿಜಯನಗರ | ಮಳೆಯ ಆಶ್ರಯಕ್ಕೆ ಮರದಡಿಯಲ್ಲಿ ನಿಂತಿದ್ದ ವೇಳೆ ಬಡಿದ ಸಿಡಿಲು: ಇಬ್ಬರ ಸಾವು
ಪಶ್ಚಿಮ ಘಟ ಉಳಿದರೆ ನಾವು ಉಳಿಯುತ್ತೇವೆ. ನಿಜವಾದ ಅರ್ಥದಲ್ಲಿ ನಾನು ಪರಿಸರವಾದಿ ಅಲ್ಲ. ಪರಿಸರವಾದಿಗಳ ಜೊತೆಗೆ ನಿಕಟ ಸಂಬಂಧವಿದೆ. ನಾನು ಜನವಾದಿ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿರುವೆ. ಪಶ್ಚಿಮಘಟ್ಟಗಳು ಉಳಿಸಬೇಕು, ದಕ್ಷಿಣ ಭಾರತ ಉಳಿಯಬೇಕು ಅಂದರೆ ಪಶ್ಚಿಮ ಘಟ್ಟ ಉಳಿಯಬೇಕು ಎಂದು ದಿಲೀಪ್ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾರದಾ ಗೋಪಾಲ್, ನೈಲಾ ಕೊಹೆಲೊ, ಶಿವಾಜಿ ಕಾಗಣಿಕರ್ ಉಪಸ್ಥಿತರಿದ್ದರು.
