ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಬೆಳಗಾವಿ ಜಿಲ್ಲೆಯಲ್ಲಿ 135 ಕಿ.ಮೀ ಮಾನವ ಸರಪಳಿ ಆಯೊಜಿಸಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾನವ ಸರಪಳಿಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು, ಎಲ್ಲ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳು ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ.
ಮಾನವ ಸರಪಳಿಯು ರಾಮದುರ್ಗ ತಾಲೂಕಿನ ಸಾಲಹಳ್ಳಿಯಿಂದ ಪ್ರಾರಂಭವಾಗಿ ಎಮ್ ಚಂದರಗಿ,ಕರಕೊಪ್ಪ ಮಾರ್ಗದಿಂದ ಯರಗಟ್ಟಿ ತಾಲೂಕು ಮತ್ತು ಬೈಲಹೊಂಗಲ ತಾಲೂಕಿಗೆ ಹೋಗಿ ಬೆಳಗಾವಿ ಗ್ರಾಮೀಣ ಭಾಗಕ್ಕೆ ತಲುಪಿ ಕಿತ್ತೂರು ತಾಲೂಕು ಮತ್ತು ಕಿತ್ತೂರು ತಾಲೂಕಿನ ತೇಗೂರವರೆಗೆ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರ ಜನ ಭಾಗಿಯಾಗುವ ವಿಶ್ವಾಸವಿದೆ. 6ನೇಯ ತರಗತಿ ನಂತರದ ತರಗತಿಯ ವಿದ್ಯಾರ್ಥಿಗಳು ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಯಾವುದೇ ಟ್ರಾಫಿಕ್ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಲಿದೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಆರಂಭವಾಗಲಿರುವ ಈ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಮಾನವ ಸರಪಳಿ ಮೂಲಕ ವಿಶ್ವದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದ್ದಾರೆ.
