ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಕೋಮು ಗಲಭೆಗಳನ್ನು ಮಾಡಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ಮಧ್ಯೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಂಗ ಸಂಸ್ಥೆಯಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್‌ಆರ್‌ಎಸ್) ಬಡ ಹಿಂದೂ ಕುಟುಂಬಕ್ಕೆ ಹಿಂದೂ ಕುಟುಂಬದ ಮನೆ ನಿರ್ಮಾಣಕ್ಕೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿಯ ಸಾಯಿ ನಗರದ ನಿವಾಸಿ ಗೀತಾ ಅವರಿಗೆ ಮನೆ ನಿರ್ಮಿಸಿಕೊಳ್ಳಲು ಒಂದು ಲಕ್ಷ ರೂಪಾಯಿಗಳ ಧನ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮೆರೆದಿದೆ.
ಬೆಳಗಾವಿಯ ಸಾಯಿ ನಗರದಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ನೀರು ನುಗ್ಗಿ ಇಲ್ಲಿನ ಜನತೆ ಪರದಾಡುವಂತಾಗಿತ್ತು ಈ ಸಂದರ್ಭದಲ್ಲಿ ಇವರ ಸಹಾಯಕ್ಕೆ ಬಂದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯು ಆಹಾರದ ದಿನಸಿ ಕಿಟ್ ಮತ್ತು ಟಾರ್ಪಲ್ ನೀಡಿ ಸಹಾಯ ಮಾಡಿತ್ತು.
ದಿನ ನಿತ್ಯ ನಾಲ್ಕೈದು ಮನೆಗಳಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ ಅವರು ಒಂದು ಸಣ್ಣ ಕೊಠಡಿಯಲ್ಲಿ ಕುಟುಂಬದ ಐದು ಜನರು ವಾಸ ಮಾಡುತ್ತಿದ್ದರು. ಈ ಮನೆಯ ತುಂಬೆಲ್ಲಾ ನೀರು ನುಗ್ಗಿ ಪರದಾಡುವುದನ್ನು ಕಂಡ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯು ಮನೆ ನಿರ್ಮಾಣಕ್ಕೆ ಸಹಾಯ ಮಾಡುವ ಭರವಸೆ ನೀಡಿತ್ತು.
ನಂತರದಲ್ಲಿ ಕೊಳಗೇರಿ ನಿವಾಸಿಗಳಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಳ್ಳುವ ಯೋಜನೆಗೆ ಒಂದು ಲಕ್ಷ ರೂಪಾಯಿಗಳ ಡಿ.ಡಿ ಹಣವನ್ನು ನೀಡಿದರೆ ಮನೆ ನಿರ್ಮಾಣ ಮಾಡಿಕೊಡುವ ಯೋಜನೆಯ ಕುರಿತು ಸ್ಲಂ ಬೋರ್ಡ್ ಅಧಿಕಾರಿಗಳ ಜೊತೆ ಚರ್ಚಿಸಿ ಆ ಒಂದು ಲಕ್ಷ ರೂಪಾಯಿಗಳ ಡಿ.ಡಿ ಹಣವನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಂಘಟನೆಯ ಅಂಗ ಸಂಸ್ಥೆಯಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯು ಈ ಬಡ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದೆ. ಗೀತಾ ಅವರ ಮನೆಯ ಪಕ್ಕದಲ್ಲಿ ಸಣ್ಣ ಶೆಡ್ ಒಂದರಲ್ಲಿ ವಾಸವಿದ್ದ ಜೈನು ಸನದಿ ಎಂಬುವವರ ಕುಟುಂಬಕ್ಕೂ ಸಹ ಒಂದು ಲಕ್ಷ ರೂಪಾಯಿಗಳ ಡಿ.ಡಿ ಹಣವನ್ನು ನೀಡಿದೆ.
ಈ ಕುರಿತು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಜಮಾಅತೆ ಇಸ್ಲಾಮೀ ಸಂಘಟನೆಯ ಮುಖಂಡರಾದ ಯಾಸೀನ್ ಮಖಾನದಾರ್, “ನೆರೆ ಪ್ರವಾಹ ಬಂದಾಗ ನಾವು ಸಮೀಕ್ಷೆ ಮಾಡಿದ್ದೆವು. ಆ ಸಂದರ್ಭದಲ್ಲಿ ಗೀತಾ ಅವರ ಮನೆ ಸಂಪೂರ್ಣವಾಗಿ ಮನೆ ನೀರಿನಲ್ಲಿ ಮುಳುಗಿತ್ತು. ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯು ರಾಜ್ಯಾದ್ಯಂತ ಬಡವರ ಪರವಾಗಿ ಸಹಾಯ ಮಾಡುವ ಸಂಸ್ಥೆ. ಸದ್ಯ ಗೀತಾ ಅವರ ಕುಟುಂಬಕ್ಕೆ ಸ್ಲಂ ಬೋರ್ಡ್ ಮನೆ ನಿರ್ಮಾಣಕ್ಕೆ ಬೇಕಾಗಿರುವ ಡಿಡಿ ಹಣವನ್ನು ಚೆಕ್ ಮೂಲಕ ನೀಡುತ್ತಿದ್ದೇವೆ. ಕಷ್ಟ ಎಲ್ಲರಿಗೂ ಒಂದೇ. ಹಾಗಾಗಿ, ಯಾವುದೇ ಜಾತಿ-ಧರ್ಮಗಳ ಭೇದವಿಲ್ಲದೆ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ಏಕಾಏಕಿ ಪ್ರವೇಶಾತಿ ಶುಲ್ಕ ಹೆಚ್ಚಳ : ಕಾನೂನು ಪದವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ನೆರವು ಪಡೆದುಕೊಂಡ ಫಲಾನುಭವಿ ಗೀತಾ ಅವರು ಧನ್ಯವಾದ ಸಲ್ಲಿಸಿದರು. ಸ್ಥಳೀಯ ನಿವಾಸಿಗಳಾದ ಜನಶಕ್ತಿ ಸಂಘಟನೆಯ ರವಿ ಪಾಟೀಲ್ ಮಾತನಾಡಿ, ಪ್ರತಿ ವರ್ಷವೂ ಮಳೆಗಾಲದಿಂದ ಜನರು ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಬಗ್ಗೆ ಯಾಸೀನ್ ಮಖಾನದಾರ್ ಅವರಲ್ಲಿ ತಿಳಿಸಿದ್ದೆವು. ಕಷ್ಟಕ್ಕೆ ಸ್ಪಂದಿಸಿ ಅವರ ಸಂಸ್ಥೆಯಿಂದ ಇಲ್ಲಿಯ ಎರಡು ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ನಿವಾಸಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ” ಎಂದು ತಿಳಿಸಿದರು.
