ಬೆಳಗಾವಿಯ ಮೂಲಕ ಹಾದುಹೋಗುತ್ತಿದ್ದ ವಾಸ್ಕೋ-ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಸಾಮಾನ್ಯ(ಜನರಲ್) ಬೋಗಿಯಲ್ಲಿ ಎಂಟು ಪ್ರಯಾಣಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಎಂಟು ಮಂದಿ ಪ್ರಯಾಣಿಕರು ಗೋವಾದಿಂದ ದೆಹಲಿ ಬಳಿಯ ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಅವರನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರನ್ನು ಕೆಎಲ್ಇಎಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ತಿಳಿಸಿರುವ ಪ್ರಕಾರ ಎಂಟು ಮಂದಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅವರಲ್ಲಿ ಆರು ಮಂದಿ ಇನ್ನೂ ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ. ಕಳ್ಳತನಕ್ಕಾಗಿ ಅಪರಿಚಿತರು ಅವರಿಗೆ ವಿಷ ಬೆರೆಸಿದ ಆಹಾರವನ್ನು ನೀಡಿರುವ ಸಾಧ್ಯತೆಯಿದೆ. ಆದರೂ ಅವರ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿವೆ” ಎಂದು ಪೊಲೀಸರು ಶಂಕಿಸಿದ್ದಾರೆ.
ಇವರೆಲ್ಲರೂ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕೂಲಿ ಕಾರ್ಮಿಕರಾಗಿದ್ದು, ಗೋವಾದಲ್ಲಿ ಕೂಲಿ ಮಾಡಿ, ಬಳಿಕ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದು, ಗೋವಾದ ವಾಸ್ಕೋದಿಂದ ರೈಲಿನಲ್ಲಿ ಹೊರಟಿದ್ದಾರೆ. ರೈಲಿನಲ್ಲಿ ಅಪರಿಚಿತ ಸಹ ಪ್ರಯಾಣಿಕರು ಅವರಿಗೆ ವಿಷಹಾರ ಚಾಕೊಲೇಟ್ ಮತ್ತು ತಿಂಡಿಗಳನ್ನು ತಿನ್ನಲು ನೀಡಿದ್ದರೆಂದು ತಿಳಿದುಬಂದಿದೆ.
“ತಿಂಡಿ ಸೇವಿಸಿದ ಬಳಿಕ ಅವರೆಲ್ಲರೂ ಮಲಗಿದ್ದು, ಸಹ ಪ್ರಯಾಣಿಕರು ಅವರನ್ನು ಪದೇ ಪದೆ ಎಬ್ಬಿಸಲು ಪ್ರಯತ್ನಿಸಿದರೂ ಎಚ್ಚರಗೊಳ್ಳಲಿಲ್ಲ. ಏನೋ ತಪ್ಪಾಗಿದೆ ಎಂದು ಶಂಕಿಸಿದ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲು ರಾತ್ರಿ 8.30ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಿದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಯಾಣಿಕರನ್ನು ಆಂಬುಲೆನ್ಸ್ ಮೂಲಕ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರ ಸ್ಥಿತಿ ಗಂಭೀರವಾಗಿರಬಹುದು ಎಂದು ತಿಳಿದು ಎಂಟು ಮಂದಿಯನ್ನೂ ಕೆಎಲ್ಇಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು” ಎಂದು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.
“ಬೋಗಿಯು ಪ್ರಯಾಣಿಕರಿಂದ ತುಂಬಿತ್ತು. ಎಂಟು ಜನರೊಂದಿಗೆ ಒಂದೇ ಬೋಗಿಯಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರಲ್ಲಿ ಅವರಿಗೆ ಚಾಕೊಲೇಟ್ ಮತ್ತು ತಿಂಡಿಗಳನ್ನು ಯಾರು ನೀಡಿದರು ಎಂಬುದನ್ನು ಗಮನಿಸಲಾಗಲಿಲ್ಲ. ನಾವು ವಾಸ್ಕೋದಲ್ಲಿನ ನಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಅಲ್ಲಿ ಸ್ಥಾಪಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸೋರುತ್ತಿದೆ ಸರ್ಕಾರಿ ಶಾಲಾ ಮಾಳಿಗೆ; ಆತಂಕದಲ್ಲಿ ಮಕ್ಕಳು
“ಸಂತ್ರಸ್ತರು ಚೇತರಿಸಿಕೊಂಡ ನಂತರ ಘಟನೆಯ ವಿವರಗಳನ್ನು ಸಂಗ್ರಹಿಸಲಾಗುವುದು. ಅವರಿಂದ ಮಾಹಿತಿ ಪಡೆಯಲು ನಾವು ಪೊಲೀಸರ ಅನುಮತಿಗಾಗಿ ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.
“ಎಂಟು ಮಂದಿ ಸಂತ್ರಸ್ತರ ಸ್ಥಿತಿ ಗಂಭೀರವಾಗಿದೆ. ಕಲುಷಿತ ಆಹಾರ ಸೇವನೆಯಿಂದ ಪ್ರಜ್ಞೆ ತಪ್ಪಿದ್ದಿದ್ದರೆ ವಾಂತಿ ಮತ್ತು ಭೇದಿ ಕಾಣಿಸಿಕೊಳ್ಳುತ್ತಿತ್ತು. ಆದರೆ ವಿಷಪೂರಿತ ಆಹಾರ ಸೇವಿಸಿರುವುದರಿಂದ ಅವರು ಬಹಳ ಸಮಯದವರೆಗೆ ಪ್ರಜ್ಞಾಹೀನರಾಗಿದ್ದರು” ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.