ಮಾರಣಾಂತಿಕ ಚರ್ಮಗಂಟು ರೋಗ (ಎಲ್ಎಸ್‌ಡಿ) ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಜಾನುವಾರುಗಳಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾದ್ಯಂತ ಜಾನುವಾರು ಮಾರುಕಟ್ಟೆಗಳನ್ನು ನಿರ್ಬಂಧಿಸಿದೆ.
ಜಿಲ್ಲೆಯ ಗೋಕಾಕ್, ಮೂಡಲಗಿ ಮತ್ತು ಬೈಲಹೊಂಗಲ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಒಟ್ಟು 10 ದೊಡ್ಡ ಪ್ರಮಾಣದ ಜಾನುವಾರು ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಜಾನುವಾರುಗಳಲ್ಲಿ ಚರ್ಮರೋಗ ಪತ್ತೆಯಾಗಿರುವುದರಿಂದ ರೋಗವು ಒಂದು ಪ್ರಾಣಿಯಿಂದ ಇನ್ನೊಂದಕ್ಕೆ ಹರಡುವ ಸಾಧ್ಯತೆಗಳಿರುವುದರಿಂದ ಜಾನುವಾರು ಮಾರುಕಟ್ಟೆಗಳನ್ನು ನಿಷೇಧಿಸಲಾಗಿದೆ.
“ಮೊದಲ ಹಂತದಲ್ಲಿ 30,000ಕ್ಕೂ ಹೆಚ್ಚು ಜಾನುವಾರುಗಳು ಚರ್ಮಗಂಟು ರೋಗದಿಂದ ಬಾಧಿತವಾಗಿವೆ. 8,000 ಜಾನುವಾರುಗಳು ಮೃತಪಟ್ಟಿವೆ. ಸುಮಾರು 6,700 ಜಾನುವಾರುಗಳ ಮಾಲೀಕರಿಗೆ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಉಳಿದ ಪ್ರಾಣಿಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ಹೊಸ ಪ್ರಕರಣಗಳು ಪತ್ತೆಯಾದ ಬಳಿಕ, ನಾವು ಜಿಲ್ಲೆಯಲ್ಲಿ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದೇವೆ. ಚರ್ಮಗಂಟು ರೋಗವನ್ನು ಹೇಗೆ ತಡೆಗಟ್ಟುವುದು ಎಂಬುದರ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಸ್ಯಾನಿಟೈಸೇಶನ್‌ನ ಭಾಗವಾಗಿ ಹಳ್ಳಿಗಳಲ್ಲಿ ಫಾಗಿಂಗ್ ತೆಗೆದುಕೊಳ್ಳಲಾಗುತ್ತಿದೆ” ಎಂದು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಕೋಲೇರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ನಿಫಾ ಭೀತಿ; ಕೇರಳದಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ
“ಇಲಾಖೆಯು ಜಿಲ್ಲೆಯ ನಾನಾ ಪ್ರದೇಶಗಳಿಂದ ಜಾನುವಾರುಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸುತ್ತಿದೆ. ಎಲ್ಲ ಸಿಬ್ಬಂದಿಗಳು ಜಾಗರೂಕರಾಗಿದ್ದು, ಚರ್ಮಗಂಟುರೋಗ ಪ್ರಕರಣಗಳ ತನಿಖೆ ನಡೆಸುತ್ತಿದ್ದೇವೆ. ಚರ್ಮಗಂಟು ರೋಗ ಕೋಣಗಳಲ್ಲಿ ವೇಗವಾಗಿ ಹರಡುತ್ತದೆ. ಈ ಪ್ರಾಣಿಗಳನ್ನು ಹೊಂದಿರುವ ರೈತರು ಹೆಚ್ಚು ಜಾಗರೂಕರಾಗಿರಬೇಕು” ಎಂದು ಎಚ್ಚರಿಕೆ ನೀಡಿದರು.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಹಿರಿಯ ವಿಜ್ಞಾನಿ ಮಂಜುನಾಥ್ ರೆಡ್ಡಿ ಅವರು ತಮ್ಮ ತಂಡದೊಂದಿಗೆ ಗೋಕಾಕ್ ತಾಲ್ಲೂಕಿನ ರಾಜಾಪುರ, ಬಳೋಬಾಳ, ತುಕ್ಕನಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪ್ರಾಣಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು.