ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆಗೆ ಸಚಿವ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರತ್ಯೇಕ ರಾಜ್ಯ ರಚನೆಗೆ ತಮ್ಮ ಸಹಮತವಿಲ್ಲ. ಅಖಂಡ ಕರ್ನಾಟಕ ಉಳಿಯಬೇಕು ಎಂಬುದೇ ತಮ್ಮ ಆಶಯ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಗಳ ರಚನೆ ಮಾಡುವ ವಿಚಾರಕ್ಕೆ ತಮ್ಮ ಸಹಮತವಿದೆ. ಆದರೆ, ಕರ್ನಾಟಕವನ್ನು ವಿಭಜಿಸಿ ಪ್ರತ್ಯೇಕ ರಾಜ್ಯ ರಚಿಸುವ ವಿಚಾರದಲ್ಲಿ ತಮ್ಮ ನಿಲುವು ಭಿನ್ನವಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಚರ್ಚೆಯ ನಡುವೆಯೇ ಸತೀಶ ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಜಿಲ್ಲೆ ವಿಭಜನೆ ಮತ್ತು ರಾಜ್ಯ ವಿಭಜನೆಯ ವಿಚಾರದಲ್ಲಿ ತಮ್ಮ ನಿಲುವನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸಿದ್ದಾರೆ.



