ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಬೆಳಗಾವಿಯ ಖಾಸಗಿ ಕೃಷಿ ಮಾರುಕಟ್ಟೆಯ ಕಮಿಷನ್ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಮಠದ ಆವರಣದಲ್ಲಿ ಖಾಸಗಿ ಕೃಷಿ ಮಾರುಕಟ್ಟೆಯನ್ನು ನಡೆಸುತ್ತಿದ್ದು, ದಲ್ಲಾಳಿಗಳು ರೈತರ ಪ್ರತಿ ಮೂಟೆಗೆ 10 ರೂಪಾಯಿ ಹಾಗೂ ಜಕಾತಿ ನೂರಕ್ಕೆ 10 ರೂಪಾಯಿಯಂತೆ ಕಮಿಷನ್ ಪಡೆಯುತ್ತಿರುವುದಲ್ಲದೆ ರೈತರ ಮೇಲೆ ದಬ್ಬಾಳಿಕೆ ಗೂಂಡಾ ವರ್ತನೆ ನಡೆಸುತ್ತಿರುವುದನ್ನು ವಿರೋಧಿಸಿ ತರಕಾರಿ ಖಾಸಗಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸಂಕೇಶ್ವರದಲ್ಲಿ ಎತ್ತಿನ ಬಂಡಿ, ಟ್ಯಾಕ್ಟರ್ ಸೇರಿದಂತೆ ಇನ್ನಿತರ ನೂರಾರು ವಾಹನಗಳ ಮೂಲಕ ಸಾವಿರಾರು ರೈತರು ಸಮಾವೇಶದಲ್ಲಿ ಪಾಲ್ಗೊಂಡು ಹೋರಾಟ ನಡೆಸಲಾಯಿತು.
ಸಂಘಟನೆಯ ರಾಜ್ಯಾಧ್ಯಕ್ಷರಾದ ಚೂನ್ನಪ್ಪಾ ಪೂಜೇರಿ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ಮಾಡಿ ಪ್ರತಿಭಟಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪಾ ಪೂಜೇರಿ ಮಾತನಾಡಿ, 25 ವರ್ಷಗಳಿಂದ ಪಟ್ಟಣದಲ್ಲಿ ಖಾಸಗಿ ಜಾಗದಲ್ಲಿ ಠೋಕ ತರಕಾರಿ ಪೇಟೆ ನಡೆಯುತ್ತಿದ್ದು, ಅಲ್ಲಿನ ವರ್ತಕರು ಸರ್ಕಾರದ ಯಾವುದೇ ಲೈಸೆನ್ಸ್ ಹೊಂದಿಲ್ಲ. ತರಕಾರಿಗಳ ಬಹಿರಂಗ ಲಿಲಾವು ನಡೆಯುತ್ತಿಲ್ಲ. ಎಷ್ಟು ದರಕ್ಕೆ ತಮ್ಮ ತರಕಾರಿ ಮಾರಾಟವಾಗಿದೆ ಎಂಬುದೂ ರೈತರಿಗೆ ಗೊತ್ತಾಗುವುದಿಲ್ಲ. ಖಾಸಗಿ ಮಾರುಕಟ್ಟೆ ಪ್ರವೇಶಿಸುವ ಪ್ರತಿ ರೈತರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿಕ್ರಿ ಮೊತ್ತದ ಮೇಲೆ ಶೇ10 ಕಮಿಷನ್ ರೈತರಿಂದ ಪಡೆಯಲಾಗುತ್ತಿದೆ. ಶೌಚಾಲಯ ಶುಲ್ಕ ₹10 ವಸೂಲಿ ಮಾಡಲಾಗುತ್ತಿದೆ. ಹೀಗೆ ವಿವಿಧ ಸಮಸ್ಯೆಗಳನ್ನು ತರಕಾರಿ ಬೆಳೆಗಾರರು ಎದುರಿಸುತ್ತಿದ್ದರು ಎಂದರು.
ಇದಕ್ಕೂ ಮುಂಚೆ ಹುಕ್ಕೇರಿ, ಸಂಕೇಶ್ವರ, ಗೋಕಾಕ, ಚಿಕ್ಕೋಡಿ ಭಾಗಗಳಿಂದ 150 ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದ ತರಕಾರಿ ಬೆಳೆಗಾರರು ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಿ ಸಂಕೇಶ್ವರದ ಖಾಸಗಿ ತರಕಾರಿ ಪೇಟೆಯನ್ನು ಎ.ಪಿ.ಎಂ.ಸಿ ಗೆ ಸ್ಥಳಾಂತರಿಸಲು ತಹಶೀಲ್ದಾರ್ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘಟನೆಗಳ ಹೋರಾಟದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಂಕೇಶ್ವರ ತಾಲೂಕು ತಹಶೀಲ್ದಾರರು, ಎಪಿಎಂಸಿಯ ಕಾರ್ಯದರ್ಶಿಗಳು, ಖಾಸಗಿ ಮಾರುಕಟ್ಟೆಗೆ ಬೀಗ ಜಡಿದು ಖಾಸಗಿ ಕೃಷಿ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ವರ್ಗಾಯಿಸಲು ಮೌಖಿಕ ಆದೇಶ ನೀಡಿದರು.
20 ವರ್ಷಗಳಿಂದ ರೈತರಿಂದ ಕಮಿಷನ್ ಪಡೆದ ಏಜೆಂಟರ ಮೇಲೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಜಯ ಸಿಕ್ಕತಾಂಗಿದೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ರಾಜು ಪವಾರ, ರಾಜ್ಯ ಉಪಾಧ್ಯಕ್ಷರಾದ ಸುರೇಶ ಪರಗನ್ನವರ್, ರಾಜ್ಯ ಕಾರ್ಯದರ್ಶಿಯವರಾದ ಕಿಶನ್ ನಂದಿ, ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಮರಳಿ ಸುಲ್ತಾನಪುರ, ವಿಜಯಪುರ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಧಾರವಾಡ ಜಿಲ್ಲಾಧ್ಯಕ್ಷರಾದ ಫಾರೂಕ್ ಕೀಲ್ಲೇದಾರ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಅಂಗಡಿ ಸೇರಿದಂತೆ ರಾಜ್ಯದ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, ಮಹಿಳಾ ಅಧ್ಯಕ್ಷರುಗಳು, ತಾಲೂಕ ಪದಾಧಿಕಾರಿಗಳು, ರೈತರು, ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
