ಬಳ್ಳಾರಿ ಜಿಲ್ಲೆಯ ಕುರುಗೋಡುನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ ಶಾಲೆಯನ್ನು ಕಳೆದ ಮೂರು ವರ್ಷಗಳಿಂದ ಚಿತ್ರಮಂದಿರದ ಕಟ್ಟಡದಲ್ಲಿ ನಡೆಸಲಾಗುತ್ತಿದೆ.
ಇದು 40 ವರ್ಷಗಳಷ್ಟು ಹಳೆಯ ಚಿತ್ರಮಂದಿರ. ಈ ಮೊದಲು ಶಾಲೆ ಮತ್ತು ವಸತಿನಿಲಯ ನಡೆಯುತ್ತಿದ್ದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸ್ವಂತ ಕಟ್ಟಡ ಇಲ್ಲದ ಕಾರಣ ಹಳೆಯ ಚಿತ್ರಮಂದಿರದ ಕಟ್ಟಡದಲ್ಲೇ ವಸತಿ ಶಾಲೆ ನಡೆಯುತ್ತಿದೆ.
ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗಿನ 226 ವಿದ್ಯಾರ್ಥಿನಿಯರಿದ್ದಾರೆ. ಒಂದೇ ಸಭಾಂಗಣದಲ್ಲಿ ಎರಡರಿಂದ ಮೂರು ತರಗತಿ ನಡೆಸಲಾಗುತ್ತಿದೆ. ಎಲ್ಲರಿಗೂ ಒಂದೆಡೆಯೇ ಪಾಠ ಮಾಡುವುದರಿಂದ ನಮಗೆ ಸರಿಯಾಗಿ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿನಿಯರು.
ಜಿಲ್ಲಾ ಪರಿಷತ್ ಬಾಲಕಿಯರ ಪ್ರೌಢಶಾಲೆ ಹೆಸರಿನಲ್ಲಿ 1996ರಲ್ಲಿ ಈ ಶಾಲೆ ಪ್ರಾರಂಭವಾಗಿದೆ. ನಂತರ ಗಾಂಧಿ ತತ್ವ ಆಧಾರಿತ ಬಾಲಕಿಯರ ವಸತಿ ಶಾಲೆಯಾಗಿ 2011-12ರಲ್ಲಿ ಮೇಲ್ದರ್ಜೆಗೇರಿಸಿ, ಸಮಾಜ ಕಲ್ಯಾಣ ಇಲಾಖೆಗೆ ಸೇರ್ಪಡೆ ಮಾಡಲಾಯಿತು. 2012-13ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುದಾನದೊಂದಿಗೆ, ಕರ್ನಾಟಕ ವಸತಿ ಶಿಕ್ಷಣಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇದೇ ಮಾದರಿಯಲ್ಲಿ ಜಿಲ್ಲೆಯ ಚೆಳ್ಳಗುರ್ಕಿ ಗ್ರಾಮದಲ್ಲೂ ಮತ್ತೊಂದು ಶಾಲೆ ಇದೆ. ಅಲ್ಲಿ ಎರ್ರೀತಾತ ಮಠದ ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ. ಕುರುಗೋಡು ಮತ್ತು ಚೆಳ್ಳಗುರ್ಕಿಯ ಎರಡೂ ಶಾಲೆಗಳಿಗೂ ಸ್ವಂತ ಕಟ್ಟಡಗಳಿಲ್ಲ.
ಕುರುಗೋಡು ವಿವಿಧ ಬಡಾವಣೆಗಳಲ್ಲಿ ಪರಿಶೀಲಿಸಿದರೂ ಸೂಕ್ತ ಕಟ್ಟಡ ಸಿಗಲಿಲ್ಲ. ಆದ್ದರಿಂದ ತಿಂಗಳಿಗೆ ₹1.20 ಲಕ್ಷ ಬಾಡಿಗೆ ಕೊಟ್ಟು ಈ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದು ವಸತಿ ಶಾಲೆಯ ಪ್ರಾಚಾರ್ಯ ವಿಶ್ವನಾಥ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸೌಲಭ್ಯಗಳಿಲ್ಲದ ಹಳೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತದೆ. ಏನಾದರೂ ಅಚಾತುರ್ಯ ಸಂಭವಿಸಿದರೆ ಯಾರು ಹೊಣೆ? ನಮ್ಮ ಮಕ್ಕಳಿಗೆ ಸೂಕ್ತ ಸೌಲಭ್ಯ, ರಕ್ಷಣೆ ಒದಗಿಸಿ ಎಂದು ಮಕ್ಕಳ ಪೋಷಕರು ಆಗ್ರಹಿಸುತ್ತಿದ್ದಾರೆ.