ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಚರ್ಚೆ ಇದೀಗ ಪಕ್ಷದ ವಲಯದಲ್ಲಿ ಶುರುವಾಗಿದೆ.
ಬಳ್ಳಾರಿ ಜಿಲ್ಲೆ 1952ರಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, 1999ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, 2000ನೇ ಇಸವಿಯಲ್ಲಿ ಕೋಳೂರು ಬಸವನಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, 2004ರಲ್ಲಿ ಕರುಣಾಕರ ರೆಡ್ಡಿ ಮೂಲಕ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತು. 2019ರಲ್ಲಿ ಜೆ.ಶಾಂತ, 2014ರಲ್ಲಿ ಶ್ರೀರಾಮುಲು ಅವರ ಗೆಲುವಿನೊಂದಿಗೆ ಮುಂದುವರೆದು 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿ ಎಸ್ ಉಗ್ರಪ್ಪ ಅವರು ಗೆಲುವು ಸಾಧಿಸಿದ್ದಾರೆ. ತದನಂತರ 2019ರಲ್ಲಿ ಮತ್ತೆ ದೇವೇಂದ್ರಪ್ಪ ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಲಿದೆ ಎಂಬ ತೀವ್ರ ಕುತೂಹಲ ಮೂಡಿದೆ.
2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹೆಚ್ಚಿನ ನಿರೀಕ್ಷೆಯಲ್ಲಿದೆ. ಅದರಂತೆ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿಗಳಾದ ಕೆ ಸಿ ವೇಣುಗೋಪಾಲ್, ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಲವು ರೀತಿಯಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಬಳ್ಳಾರಿ ಜಿಲ್ಲೆಗೆ ಸಚಿವ ಬಿ ನಾಗೇಂದ್ರ ಮತ್ತು ವಿಜಯನಗರ ಜಿಲ್ಲೆಗೆ ಸಂಸದ ನಾಸಿರ್ ಹುಸೇನ್ ಅವರನ್ನು ಉಸ್ತುವಾರಿಯನ್ನಾಗಿಯೂ ನೇಮಿಸಲಾಗಿದ್ದು, ಸಭೆ ನಡೆಸಿ ಆಕಾಂಕ್ಷಿಗಳಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ.
ಟಿಕೆಟ್‌ಗಾಗಿ ಪೈಪೋಟಿ
ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಿಂದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಸಚಿವ ಬಿ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಅಳಿಯ ಮುರಳಿ ಕೃಷ್ಣ, ವಕೀಲ ಗುಜ್ಜಲ ನಾಗರಾಜ್ ಸೇರಿದಂತೆ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಕಾಂಗ್ರೆಸ್ ವರಿಷ್ಠರ ಬೆಂಬಲದೊಂದಿಗೆ ಟಿಕೆಟ್‌ಗಾಗಿ ತೆರೆ ಮರೆಯಲ್ಲಿ ತೀವ್ರ ಪೈಪೋಟಿ ನಡೆಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳಾದ ಬಳ್ಳಾರಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕ ಬಿ. ನಾಗೇಂದ್ರ, ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ್, ಸಿರುಗುಪ್ಪ ಕ್ಷೇತ್ರದಲ್ಲಿ ಬಿ ಎಂ ನಾಗರಾಜ್, ಸಂಡೂರು ಕ್ಷೇತ್ರದಲ್ಲಿ ತುಕರಾಂ ಅವರು ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಜಯ ಗಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಕ್ಷೇತ್ರದಲ್ಲಿ ಗವಿಯಪ್ಪ, ಕೂಡ್ಲಿಗಿ ಕ್ಷೇತ್ರದಲ್ಲಿ ಡಾ. ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ.
ಹಗರಿ ಬೊಮ್ಮನ ಹಳ್ಳಿ ಕ್ಷೇತ್ರದಲ್ಲಿ ನೇಮಿರಾಜ್ ನಾಯ್ಕ್ ಅವರು ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಹೂವಿನಹಡಗಲಿ ಕ್ಷೇತ್ರದಲ್ಲಿ ಕೃಷ್ಣ ನಾಯ್ಕ್ ಅವರು ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ ಹಾಗೂ ಹರಪನ ಹಳ್ಳಿ ಕ್ಷೇತ್ರದಲ್ಲಿ ಎಂ ಪಿ ಲತಾ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದಾರೆ.
ಲೋಕಸಭಾ ಕ್ಷೇತ್ರದ ಒಟ್ಟು ಅವಳಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ತಲಾ ಒಬ್ಬ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿದ್ದಾರೆ. ಸಿರುಗುಪ್ಪ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ, ಹರಪನಹಳ್ಳಿ ಕ್ಷೇತ್ರ ದಾವಣಗೆರೆ ಕ್ಷೇತ್ರಕ್ಕೆ ಸೇರಿದೆ.
“ಅವಳಿ ಜಿಲ್ಲೆಯ ಬಳ್ಳಾರಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು, ವಿಜಯನಗರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಲೆಕ್ಕಚಾರದಿಂದ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಪಕ್ಷ ಸಂಘಟನೆ, ಹಣಬಲ, ಪಕ್ಷನಿಷ್ಠೆ ಮುಂತಾದವುಗಳನ್ನು ಪರಿಗಣಿಸಿ ಪಕ್ಷ ಟಿಕೆಟ್ ನೀಡಲಿದೆ” ಎಂಬುದು ಜಿಲ್ಲೆಯ ಜನರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಸವಣ್ಣ ʼಸಾಂಸ್ಕೃತಿಕ ನಾಯಕʼನೆಂಬ ಘೋಷಣೆ ಸ್ವಾಗತಾರ್ಹ: ರವಿಕುಮಾರ ಬಿರಾದಾರ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫಿಕ್ ಮಾತನಾಡಿ, “ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಇನ್ನೂ ಅರ್ಜಿ ಆಹ್ವಾನಿಸಲಾಗಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಗೆ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲ್ಲಿ ಎಷ್ಟು ಮಂದಿ ಸ್ಪರ್ಧಾಕಾಂಕ್ಷಿಗಳಿದ್ದಾರೆಂದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ಬಳ್ಳಾರಿ ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಲಾಗುವುದು ಮತ್ತು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು” ಎಂದು
ಬಳ್ಳಾರಿ ಜಿಲ್ಲಾ ಉಸುವಾರಿ ಸಚಿವ ಹಾಗೂ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.
ಸಿಟಿಜನ್ ಜರ್ನಲಿಸ್ಟ್ : ರಾಧಾಕೃಷ್ಣ