12ನೇ ಶತಮಾನದಲ್ಲೇ ಈ ನೆಲದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಬಸವ ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಹೇಳಿದರು.
ಪತ್ರಿಕಾ ಪ್ರಕಟಣೆ ಬಿಡಗುಡೆ ಮಾಡಿರುವ ಅವರು, “ಸ್ತ್ರೀ ಸ್ವಾತಂತ್ರ್ಯ, ಜಾತಿ ಪದ್ಧತಿ ಹೋಗಲಾಡಿಸುವುದು, ಸಮಸಮಾಜದ ಕನಸು ಸೇರಿದಂತೆ ವಿಶ್ವಕ್ಕೆ ಮೊದಲ ಪ್ರಜಾಪ್ರಭುತ್ವ ಕೊಟ್ಟ ಹೆಮ್ಮೆ ನಮ್ಮ ಬಸವಣ್ಣನವರದ್ದು. ವಚನ ಸಾಹಿತ್ಯದ ಮೂಲಕ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಮಾನತೆಯನ್ನು ಕಟ್ಟಕಡೆಯ ಮನುಷ್ಯನಿಗೂ ತಲುಪಿಸಿದ್ದು ಅಪ್ಪ ಬಸವಣ್ಣನವರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗುರಿ ಇಲ್ಲದ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ: ಗೌತಮ್ ರೆಡ್ಡಿ
“ಸೂಳೆಯನ್ನು ಶರಣೆಯನ್ನಾಗಿ ಮಾಡಿದ್ದು, ಅಸ್ಪೃಶ್ಯರಿಗೆ ಕೈಗೆಟುಕದ ಗುಡಿಯಲ್ಲಿದ್ದ ದೇವರನ್ನು ಇಷ್ಟಲಿಂಗದ ಮೂಲಕ ಅಂಗೈಗೆ ತಂದಿಟ್ಟ ಮಹಾತ್ಮ ಬಸವಣ್ಣನವರು. ಬಸವಮಾರ್ಗದಲ್ಲಿ ರಾಜ್ಯವನ್ನು ಆಳುತ್ತಿರುವ ಸಿದ್ದರಾಮಯ್ಯನವರು ಈ ಘೋಷಣೆ ಮಾಡಿದ್ದು, ಇಡೀ ಕನ್ನಡಿಗರಿಗೆ ಹೆಮ್ಮೆ ಹಾಗೂ ಗೌರವ ತಂದು ಕೊಟ್ಟಿದೆ” ಎಂದರು.