ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ ಸರ್ಕಾರದ ಏಕೈಕ ಅತಿ ದೊಡ್ಡ ತುರ್ತು ಚಿಕಿತ್ಸಾ ಕೇಂದ್ರ ಅಂದರೆ ಬಳ್ಳಾರಿಯಲ್ಲಿನ ಟ್ರಾಮಾ ಕೇರ್ ಸೆಂಟರ್. ಗಂಭೀರವಾದ ಅಪಘಾತದಲ್ಲಿನ ಗಾಯಾಳುಗಳಿಗೆ ಮತ್ತು ಗಂಭೀರವಾದ ಕಾಯಿಲೆ ಇರುವವರಿಗೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಬಳ್ಳಾರಿ ನಗರದ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆಯಲ್ಲಿ ನ್ಯೂರೊ ಸರ್ಜರಿ, ಆರ್ಥೋಪೆಡಿಕ್, ರಿ-ಕನ್ಸ್‌ಸ್ಟ್ರಕ್ಟಿವ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಅನಸ್ತೇಶಿಯಾಲಜಿ ಮುಂತಾದ ಸೌಲಭ್ಯಗಳು ಸಿಗುತ್ತವೆ. ಟ್ರಾಮಾ ಕೇರ್ ಸೆಂಟರ್‌ಗೆ ಬಳ್ಳಾರಿ ಜಿಲ್ಲೆ ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಾದ ವಿಜಯನಗರ, ರಾಯಚೂರು, ಕೊಪ್ಪಳ, ಕಲ್ಯಾಣ ಕರ್ನಾಟಕ ಪ್ರದೇಶದಿಂದ ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ.
ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಶಿವು ನಾಯ್ಕ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪ್ರತಿ ತಿಂಗಳು ಸುಮಾರು 250ರಿಂದ 300ಕೇಸ್‌ಗಳು ಬರುತ್ತವೆ. ಆಸ್ಪತ್ರೆ ಆರಂಭವಾದ ದಿನದಿಂದಲೂ 4,000ಕ್ಕೂ ಹೆಚ್ಚಿನ ಮೇಜರ್ ಅಪರೇಷನ್ ಮಾಡಲಾಗಿದೆ. ಟ್ರಾಮಾ ಕೇರ್ ಸೆಂಟರ್‌ಗೆ ಹೆಡ್ ಇಂಜುರಿ, ಸ್ಪೈನ್ ಇಂಜುರಿ, ಪ್ಲಾಸ್ಟಿಕ್ ಸರ್ಜರಿ, ಪಾಲಿಟ್ರಾನ್ ಕೇಸ್‌ಗಳು ಹೆಚ್ಚಾಗಿ ಬರುತ್ತವೆ” ಎಂದು ತಿಳಿಸಿದರು.
“ಪಿಎಂಎಸ್‌ಎಸ್‌ವೈ ಯೋಜನೆ ಅಡಿಯಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದ್ದು, 2022 ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಲಾಗಿದೆ. ಗಂಭೀರವಾದ ಕಾಯಿಲೆ ಇರುವವರಿಗೆ ಶಸ್ತ್ರ ಚಿಕಿತ್ಸೆ ಮತ್ತು ರಸ್ತೆ ಅಪಘಾತ, ಬೆಂಕಿ ಅವಘಡ ಮುಂತಾದ ಅಪಘಾತಗಳಾದರೆ ಬಳ್ಳಾರಿಯಲ್ಲಿನ ಟ್ರಾಮಾ ಕೇರ್ ಸೆಂಟರ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ” ಎಂದು ಅವರು ತಿಳಿಸಿದರು.
ಆಸ್ಪತ್ರೆಯ ವಿಶೇಷತೆಗಳು
ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಸುಮಾರು 200 ಐಸಿಯು ಬೆಡ್‌ಗಳಿವೆ. 8 ಅಪರೇಷನ್ ಥಿಯೇಟರ್‌ಗಳಿವೆ, ಸೆಂಟ್ರಲ್ ಲ್ಯಾಬ್, ಫಿಜಿಯೋಥೇರಪಿ ಸೌಲಭ್ಯಗಳಿವೆ. ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ವೈದ್ಯರು, ನರ್ಸ್‌ಗಳು ಸೇರಿದಂತೆ ಸುಮಾರು 400 ಮಂದಿ ಕೆಲಸ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪದವಿ ಪೂರ್ವ ಶಿಕ್ಷಣ ಇಲಾಖೆಯ ನೂತನ ಆದೇಶ; ಸಮಸ್ಯೆಯಲ್ಲಿ ಸಿಲುಕಿದ ವಿದ್ಯಾರ್ಥಿಗಳು
ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರದ ಟ್ರಾಮಾ ಕೇರ್ ಸೆಂಟರ್‌ನಲ್ಲಿ ನುರಿತ ವೈದ್ಯರ ತಂಡವಿದ್ದು, ರೋಗಿಗಳಿಗೆ ದಿನದ 24 ಗಂಟೆಯೂ ಚಿಕಿತ್ಸೆ ನೀಡಲಾಗುತ್ತದೆ.