ಗಣಿನಾಡು ಬಳ್ಳಾರಿಯಲ್ಲಿ ಸುರಿದ ಗಾಳಿ ಸಹಿತ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಮರ ಬಿದ್ದ ಪರಿಣಾಮವಾಗಿ 10ಕ್ಕೂ ಅಧಿಕ ಬೈಕ್‌ಗಳು ಜಖಂಗೊಂಡಿವೆ. ಆಟೋ ಮೇಲೆ ಮರ ಬಿದ್ದು ಮೇಲಿನ ಹೊದಿಕೆ ಕಿತ್ತು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಳ್ಳಾರಿಯ ಪಾರ್ವತಿ ನಗರದ ಮುಖ್ಯ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಕಾರೊಂದು ಸಂಪೂರ್ಣ ಜಖಂ ಆಗಿದೆ. ಜೋರಾದ ಗಾಳಿ ಬೀಸಿದ್ದರಿಂದ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿ ನಿವಾಸಿಗಳು ಪರದಾಡಿದರು.
ಇದೇ ವೇಳೆ ಭಾರೀ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ ಸವಾರರು ಹೈರಾಣಾದರು. ಹಾಗೆಯೇ ಅಂಡರ್‌ಪಾಸ್ ರಸ್ತೆಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ಟ್ರ್ಯಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಹಲವು ಏರಿಯಾದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಕಂಗಾಲಾಗಿದ್ದಾರೆ.
ಇದನ್ನೂ ಓದಿದ್ದೀರಾ? ಅಕಾಲಿಕ ಮಳೆ: ‘ಕೈಗೆ ಬಂದ ತುತ್ತು ಬಾಯಿಗಿಲ್ಲ’; ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ರೈತ ಸ್ಥಿತಿ
ಹೆಚ್ಚಿನ ಸಂಖ್ಯೆಯಲ್ಲಿ ಮರಗಳು, ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ನಡೆಯಿತು. ಜೆಸಿಬಿ ಯಂತ್ರಗಳನ್ನು ಬಳಸಿ, ಜೆಸ್ಕಾಂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಹರಸಾಹಸಪಟ್ಟರು.





