ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಭವಿ ಪತ್ರಕರ್ತ ಭುವನೇಂದ್ರ ಪುದುವೆಟ್ಟು (42) ಅವರು ಅನಾರೋಗ್ಯದಿಂದ ನ.19ರಂದು ನಿಧನರಾದರು.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪುದುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರ ಭುವನೇಂದ್ರ ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ಎರಡು ದಿನಗಳ ಹಿಂದೆ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದಾಗಿ ತಿಳಿದುಬಂದಿತ್ತು. ಬಳಿಕ ಅವರನ್ನು ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನ.19ರಂದು ಮೃತಪಟ್ಟಿದ್ದಾರೆ.
ಅನುಭವಿ ಪತ್ರಕರ್ತರಾಗಿದ್ದ ಭುವನೇಂದ್ರ ಅವರು ಈ ಹಿಂದೆ ಕರಾವಳಿ ಅಲೆ, ವೆಬ್ ದುನಿಯಾ, ಕಸ್ತೂರಿ ಚಾನೆಲ್ ಮತ್ತು ವಿಜಯವಾಣಿಯಲ್ಲಿ ಕೆಲಸ ಮಾಡಿದ್ದರು. ಅವರು 2024 ರಲ್ಲಿ ಸುದ್ಧಿ ಬಿಡುಗಡೆಯ ದೀಪಾವಳಿ ವಿಶೇಷ ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ತಂದೆ ನಾರಾಯಣ ಪೂಜಾರಿ ಮತ್ತು ತಾಯಿ ಮೋಹಿನಿ ಅವರನ್ನು ಅಗಲಿದ್ದಾರೆ. ಪತ್ನಿ ಸುಜಾತಾ, ಇಬ್ಬರು ಮಕ್ಕಳು ಸೇರಿದಂತೆ ಹಲವು ಬಂಧುಮಿತ್ರರನ್ನು ಅಗಲಿದ್ದಾರೆ. ಭುವನೇಂದ್ರ ಪುದುವೆಟ್ಟು ಅವರ ನಿಧನಕ್ಕೆ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.
ಇದನ್ನು ಓದಿದ್ದೀರಾ? ಕನಕಪುರ | ಭ್ರೂಣ ಪತ್ತೆ ಪ್ರಕರಣ: ಆರೋಪಿ ಡಾ. ದಾಕ್ಷಾಯಿಣಿ ಮತ್ತೆ ನಿಯೋಜನೆಗೆ ಪ್ರಗತಿಪರ ಸಂಘಟನೆಗಳ ವಿರೋಧ
ಅಂತಿಮ ವಿಧಿಗಳನ್ನು ನವೆಂಬರ್ 19ರಂದು ಮಧ್ಯಾಹ್ನ ಪುದುವೆಟ್ಟುನಲ್ಲಿರುವ ಅವರ ನಿವಾಸದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
