ಬಡವರಿಗೆ ಉಚಿತ ಆರೋಗ್ಯ ತಪಾಸಣೆ ನೀಡಬೇಕೆನ್ನುವ ಉದ್ದೇಶದೊಂದಿಗೆ ಆರೋಗ್ಯ ಸೇವಾ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಜು.1 ರಂದು ಪ್ರತಿಯೊಬ್ಬ ವೈದ್ಯನೂ ಸ್ವಯಂ ಸೇವಕ ಎಂಬ ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸೇವಾ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ದಯಾಪ್ರಸಾದ್ ಕುಲಕರ್ಣಿ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಆರೋಗ್ಯ ಸೇವಾ ಸಂಸ್ಥೆಯ ವತಿಯಿಂದ ಜು.1 ರಂದು ಅಂತಾರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ‘ಪ್ರತಿಯೊಬ್ಬ ವೈದ್ಯನೂ ಸ್ವಯಂ ಸೇವಕ’ ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಅಭಿಯಾನವನ್ನು ರಾಜ್ಯದಲ್ಲಿ ಚಾಲನೆ ಮಾಡುತ್ತಿದ್ದೇವೆ. ದೇಶದಲ್ಲಿ 13 ಲಕ್ಷ ಜನ ಅಲೋಪತಿ ಮತ್ತು 5 ಆಯುಷ್ ವೈದ್ಯರು ಇದ್ದಾರೆ. ಅಂದು ಪ್ರತಿಯೊಬ್ಬ ಡಾಕ್ಟರ್ ತಿಂಗಳಲ್ಲಿ ಇಬ್ಬರ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುತ್ತೇವೆಂದು ಅಭಿಯಾನದಲ್ಲಿ ಸಹಿ ಹಾಕಿದರೆ, ಪ್ರತಿ ತಿಂಗಳು 3 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಪ್ರತಿಯೊಬ್ಬ ವೈದ್ಯರೂ ಸ್ವಯಂ ಸೇವಕರಾಗಿ ಎಷ್ಟು ಸಾಧ್ಯವಾಗುತ್ತದೋ, ಅಷ್ಟು ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಿ ಎಂದು ಅವರು ಕರೆ ನೀಡಿದರು.
ಆರೋಗ್ಯ ಸೇವಾ ಸಂಸ್ಥೆಯು ಹತ್ತು ವರ್ಷಗಳಿಂದ ಭಾರತದ ಹಲವು ರಾಜ್ಯಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ಸೇವೆ ಒದಗಿಸಿದೆ. ಅಮೆರಿಕ, ನೇಪಾಳ, ರುವಾಂಡಾ, ಮೆಕ್ಸಿಕೊ ಸೇರಿದಂತೆ ಇತರೆ ದೇಶಗಳಲ್ಲಿ ಬಡಸಮುದಾಯದ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಐಪಿಎಲ್‌ಗೆ ಇಂದು ಹೊಸ ಚಾಂಪಿಯನ್: ಟ್ರೋಫಿಗೆ ಮುತ್ತಿಕ್ಕಲಿರುವ 8ನೇ ತಂಡ – ಆರ್‌ಸಿಬಿ?
ಎಲ್ಲ ಬಡವರಿಗೂ ಆರೋಗ್ಯ ತಪಾಸಣೆ ಸಿಗಬೇಕೆನ್ನುವುದೇ ನಮ್ಮ ಗುರಿ. ಜನರು ಈ ಸೇವೆಯನ್ನು ಪಡೆದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ‘ಸೇವಾ ಗ್ಲೋಬಲ್ ಆಪ್’ ಡೌನ್‌ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು ಅಥವಾ ಆರೋಗ್ಯ ಸೇವಾ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ನಮ್ಮ ಸಂಸ್ಥೆ ವತಿಯಿಂದ ವೈದ್ಯರನ್ನು ಸಂಪರ್ಕಿಸಿಕೊಡಲಾಗುವುದು ದಯಾಪ್ರಸಾದ್ ಕುಲಕರ್ಣಿ ಮಾಹಿತಿ ನೀಡಿದರು.