- ಬೆಂಗಳೂರಿಂದ ಮೈಸೂರಿಗೆ ಹೋಗಿ ವಾಪಸ್ ಬರಲು ₹820 ವೆಚ್ಚ
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರೀ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ಲಘು ವಾಹನಕ್ಕೆ ಬರೋಬ್ಬರಿ ₹640 ಟೋಲ್ ಹಣ ಕಟ್ಟಿಸಿಕೊಳ್ಳುತ್ತಿದ್ದು, ಟೋಲ್ ಶುಲ್ಕ ಪರಿಷ್ಕರಿಸುವಂತೆ ಆಮ್ ಆದ್ಮಿ ಪಕ್ಷ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದೆ.
ನಗರದ ಕುಮಾರ್ ಪಾರ್ಕ್ ಬಳಿಯ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಬೆಂಗಳೂರು-ಮೈಸೂರು ನಡುವಿನ ರಸ್ತೆ ನಿರ್ಮಾಣವನ್ನು ಸಂಸದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಎಕ್ಸ್‌ಪ್ರೆಸ್ ವೇ ಎಂದು ಹೇಳಿಕೊಂಡಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೊಂದು ರಾಷ್ಟ್ರೀಯ ಹೆದ್ದಾರಿ ಎಂದು ಸ್ಪಷ್ಟಪಡಿಸಿದೆ. ಹೀಗಿರುವಾಗ ಎರಡೆರಡು ಕಡೆಗಳಲ್ಲಿ ಟೋಲ್ ಕೇಂದ್ರಗಳನ್ನು ನಿರ್ಮಿಸಿಕೊಂಡು ಜನಸಾಮಾನ್ಯರ ದುಡ್ಡನ್ನು ದೋಚುತ್ತಿರುವುದು ಏಕೆ?” ಎಂದು ಪ್ರಶ್ನಿಸಿದರು.
“ಒಂದು ಲಘು ವಾಹನವು ಈ ರಸ್ತೆಯ ಮೂಲಕ ಬೆಂಗಳೂರಿಂದ ಮೈಸೂರಿಗೆ ಹೋಗಿ ವಾಪಸ್ ಬರಲು ₹820 ವೆಚ್ಚ ತಗುಲುತ್ತಿದೆ. ಪ್ರತಿ ಲೀಟರ್ ಡೀಸೆಲ್‌ಗೆ ‘ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್’ ₹9 ಕಟ್ಟಬೇಕು. ಸುಮಾರು 20 ಲೀಟರ್ ಡೀಸೆಲ್ ಖರ್ಚಾದರೆ ಅಲ್ಲೇ ₹180 ಸುಂಕ ಕಟ್ಟಿದಂತಾಗುತ್ತದೆ. ಇನ್ನು ರಾಮನಗರದ ಕಣಮಿಣಿಕೆ ಬಳಿಯಿರುವ ಟೋಲ್ ಕೇಂದ್ರದಲ್ಲಿ ₹165, ಮಂಡ್ಯದ ಶ್ರೀರಂಗಪಟ್ಟಣ ಬಳಿಯ ಗಣಂಗೂರಿನಲ್ಲಿ ₹155 ಟೋಲ್ ಶುಲ್ಕ ಕಟ್ಟಬೇಕಿದೆ. ಒಂದು ರಾಷ್ಟ್ರೀಯ ಹೆದ್ದಾರಿಗೆ ಇಷ್ಟೊಂದು ತೆರಿಗೆ ಯಾಕೆ ಕಟ್ಟಬೇಕು?” ಎಂದು ಮೋಹನ್ ದಾಸರಿ ಕೇಳಿದರು.
ಹೆದ್ದಾರಿ ನಿರ್ಮಾಣದಲ್ಲಿ ಬೃಹತ್ ಭ್ರಷ್ಟಾಚಾರ: ಎಎಪಿ ಆರೋಪ
“ವಾಹನ ಖರೀದಿ ಸಮಯದಲ್ಲೇ ಸುಮಾರು ₹5 ಲಕ್ಷದ ವಾಹನಕ್ಕೆ ₹65,000 ರಸ್ತೆ ತೆರಿಗೆ ಎಂದು ಕಟ್ಟಲಾಗಿರುತ್ತದೆ. ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ ಸೆಸ್ ಕಟ್ಟಲಾಗುತ್ತದೆ. ಇಷ್ಟೆಲ್ಲಾ ಕಟ್ಟಿದ ನಂತರ ಪುನಃ ಟೋಲ್ ರೂಪದಲ್ಲಿ ಸುಂಕ ಕಟ್ಟಬೇಕಿದೆ. ರಸ್ತೆಗಳಾದರೂ ಸುಧಾರಣೆಗೊಂಡಿವೆಯೇ? ರಸ್ತೆಗುಂಡಿಗಳು, ಅವೈಜ್ಞಾನಿಕ ಚರಂಡಿಗಳು, ಸರ್ವಿಸ್ ರಸ್ತೆಗಳೇ ಇಲ್ಲದಿರುವುದು ಹೀಗೆ ನೂರಾರು ಸಮಸ್ಯೆಗಳು ರಸ್ತೆಯುದ್ದಕ್ಕೂ ಬಿದ್ದಿವೆ. ಹಾಗಿದ್ದರೆ ಸುಂಕವೆಂದು ಸಂಗ್ರಹಿಸಲಾಗುತ್ತಿರುವ ಈ ದುಡ್ಡೆಲ್ಲ ಎಲ್ಲಿ ಹೋಗುತ್ತಿದೆ?” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಉದ್ಘಾಟನೆ
“ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿ ಅನಧಿಕೃತವಾಗಿ ₹76 ಕೋಟಿ ಸಂಗ್ರಹಿಸಲಾಗಿದೆ ಎಂದು ಸಿಎಜಿ ವರದಿ ಕೊಟ್ಟಿದೆ. ದ್ವಾರಕಾ ಎಕ್ಸ್‌ಪ್ರೆಸ್ ವೇ ಕುರಿತಾದ ಸಿಎಜಿ ವರದಿಯಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ನಿಗದಿಪಡಿಸಲಾಗಿದ್ದ ₹18 ಕೋಟಿ ಬದಲಿಗೆ ₹250 ಕೋಟಿ ವ್ಯಯಿಸಲಾಗಿದೆ ಎಂದಿದೆ. ಇವೆಲ್ಲವನ್ನೂ ಗಮನಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾರಿ ಪ್ರಮಾಣದ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿದೆ” ಎಂದು ದಾಸರಿ ಆರೋಪಿಸಿದರು.
ಈ ವೇಳೆ ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಡಾ.ಸತೀಶ್ ಕುಮಾರ್ ಹಾಗೂ ಹಿರಿಯ ಮುಖಂಡ ಗುರುಮೂರ್ತಿ ಉಪಸ್ಥಿತರಿದ್ದರು.