- ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಬಾರದು
- ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೌನ್ಸೆಲಿಂಗ್ ಆರಂಭಿಸಬೇಕು
ರಾಜ್ಯದಲ್ಲಿ ಉಚಿತವಾಗಿ ಎಲ್ಲರಿಗೂ ಪೂರ್ಣ ಪ್ರಮಾಣದ ಔಷಧ ಲಭ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ಆರೋಗ್ಯ ಕಾಯ್ದೆ ತರಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಬಾರದು ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೌನ್ಸಲಿಂಗ್ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ) ಸರ್ಕಾರಕ್ಕೆ ಒತ್ತಾಯಿಸಿದೆ.
ಬೆಂಗಳೂರಿನ ಕೃಷಿ ತಜ್ಞರ ಕೇಂದ್ರದಲ್ಲಿ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (ಎಸ್‌ಎಎಕೆ) ಸೋಮವಾರ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನಿಶಾ ಮಾತನಾಡಿ, “ಎಸ್‌ಎಎಕೆ ವತಿಯಿಂದ ರ‍್ಯಾಪಿಡ್ ಸರ್ವೇ ನಡೆಸಲಾಗಿದೆ. ಈ ಸರ್ವೇ ಜುಲೈ 1ರಿಂದ ಜುಲೈ 19ರವರೆಗೆ ನಡೆದಿದೆ. ಈ ಸರ್ವೆಯಲ್ಲಿ ಆಸ್ಪತ್ರೆಯ ಹೊರಭಾಗದಲ್ಲಿರುವ ಮೆಡಿಕಲ್ ಶಾಪ್ ಬಳಿ ನಿಂತು ಒಟ್ಟು 600 ರೋಗಿಗಳನ್ನು ಮಾತನಾಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಹೊರಗಡೆ ಮಾತ್ರೆ ತೆಗೆದುಕೊಳ್ಳಲು ಬರೆದುಕೊಡುತ್ತಿದ್ದಾರೆ. 600 ಜನರು ಹೊರಗಡೆ ಮಾತ್ರೆ ತೆಗೆದುಕೊಳ್ಳಲು ಖರ್ಚು ಮಾಡಿದ್ದು ಬರೋಬ್ಬರಿ ₹2.58 ಲಕ್ಷ ರೂಪಾಯಿಗಳು. ಒಬ್ಬೊಬ್ಬ ರೋಗಿಗೆ ಮಾತ್ರೆ ತೆಗೆದುಕೊಳ್ಳಲು 430 ರೂಪಾಯಿ ವೆಚ್ಚವಾಗಿದೆ” ಎಂದರು.
“ಕೋಲಾರ, ಹಾಸನ, ಧಾರವಾಡ, ದಾವಣಗೆರೆ, ವಿಜಯನಗರ, ಬೆಂಗಳೂರು, ಬಳ್ಳಾರಿ, ಬೀದರ್, ಕಲಬುರ್ಗಿ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ ಈ ಸರ್ವೇ ನಡೆಸಲಾಗಿದೆ. ಸಾರ್ವತ್ರಿಕ ಆಂದೋಲನ ಕರ್ನಾಟಕದ ವತಿಯಿಂದ ಸರ್ಕಾರಕ್ಕೆ ಹಲವಾರು ಒತ್ತಾಯಗಳನ್ನು ಮುಂದಿಟ್ಟಿದ್ದೇವೆ. ಮೊದಲಿಗೆ ಸಾರ್ವಜನಿಕರಿಗೆ ಉಚಿತವಾಗಿ ಔಷಧಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆಯ ವೈದ್ಯರು ಸಾರ್ವಜನಿಕರಿಗೆ ಲ್ಯಾಬ್ ಟೆಸ್ಟ್ ಸೇರಿದಂತೆ ಮಾತ್ರೆ ತೆಗೆದುಕೊಳ್ಳಲು ಹೊರಗಡೆ ಬರೆದು ಕೊಡಬಾರದು. ಕೇವಲ ಆಸ್ಪತ್ರೆಯ ವೈದ್ಯರನ್ನು ಮಾತನಾಡಿಸಲು ಬರುವುದು ಹೊರಗಡೆ ಮಾತ್ರೆ ತೆಗೆದುಕೊಂಡರೆ ಸರ್ಕಾರಿ ಆಸ್ಪತ್ರೆ ಇದ್ದು ಏನು ಉಪಯೋಗ” ಎಂದು ಪ್ರಶ್ನಿಸಿದರು.
“ಆರೋಗ್ಯವೆಂಬುದು ವ್ಯಾಪಾರವಾಗಿ ಬಿಟ್ಟಿದೆ. ಅದು ನಮ್ಮ ಹಕ್ಕು ಎಂದಾಗಬೇಕು. ಎಲ್ಲರಿಗೂ ತಮಿಳುನಾಡಿನಲ್ಲಿ ಉಚಿತವಾಗಿ ಹೇಗೆ ಎಲ್ಲ ರೀತಿಯ ಮಾತ್ರೆ ಸಿಗುತ್ತಿದೆಯೋ ಹಾಗೆಯೇ, ನಮ್ಮ ಕರ್ನಾಟಕದಲ್ಲಿಯೂ ಸಿಗಬೇಕು. ಜನಔಷಧಿ ಕೇಂದ್ರಗಳಲ್ಲಿ ಬೇಕಾದಂತಹ ಮಾತ್ರೆ ಸಿಗುತ್ತಿಲ್ಲ. ಚರ್ಮ, ಕಣ್ಣು, ಹಲ್ಲು ಸೇರಿದಂತೆ ಬೇರೆ ಯಾವುದೇ ರೀತಿಯ ಅನಾರೋಗ್ಯಗಳಿಗೆ ಮಾತ್ರೆಗಳು ಸಿಗುವುದಿಲ್ಲ” ಎಂದರು.
“ದುಡಿಯುವ ವರ್ಗ ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸಕ್ಕೆ ಹೋಗುತ್ತಾರೆ. ಅವರು ಮನೆಗೆ ಬರುವುದೇ ಸಾಯಂಕಾಲದ ವೇಳೆಗೆ ಹೀಗಾದರೆ ಅವರಿಗೆ ಆರೋಗ್ಯ ಸೇವೆ ದೊರುಕುವುದು ಯಾವಾಗ? ಹಾಗಾಗಿ, ಸಾಯಂಕಾಲ 6ರಿಂದ ರಾತ್ರಿ 10 ಗಂಟೆಯವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಪ್ರತಿ ಸರ್ಕಾರಿ ಆಸ್ಪತ್ರೆಗಳು ತೆರೆದಿರಬೇಕು” ಎಂದು ತಿಳಿಸಿದರು.
“ಎಪಿಎಲ್, ಬಿಪಿಎಲ್ ಎಂದು ವಿಂಗಡಣೆ ಮಾಡದೆ ಎಲ್ಲರಿಗೂ ಆರೋಗ್ಯದ ಹಕ್ಕು ಒಂದೇ ರೀತಿಯಾಗಿ ಸಿಗಬೇಕು. ಬಡವರು ಶ್ರೀಮಂತರು ಎಲ್ಲರೂ ಒಂದೇ ವ್ಯವಸ್ಥೆಗೆ ಬರಬೇಕು ಎಂಬುದು ಮುಖ್ಯವಾದ ಧ್ಯೇಯ. ಎಲ್ಲರಿಗೂ ಒಂದೇ ವ್ಯವಸ್ಥೆ ಅದಕ್ಕೆ ಆರೋಗ್ಯ ಹಕ್ಕು ಬುನಾದಿ. 35% ಉದ್ಯೋಗ ಖಾಲಿ ಇದ್ದು, ಸಿಬ್ಬಂದಿ ನೇಮಕಾತಿ ಮಾಡಬೇಕು. ರೋಗಿಗಳ ಜತೆಗೆ ಸಿಬ್ಬಂದಿ ನಡೆದುಕೊಳ್ಳುವ ಸ್ವಭಾವವನ್ನು ಬದಲಾಯಿಸಬೇಕು” ಎಂದು ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೇಣಿಗೆ ಶರಣಾದ ಕಾನೂನು ವಿದ್ಯಾರ್ಥಿ
“ಸಾರ್ವತ್ರಿಕವಾಗಿ ಎಲ್ಲರಿಗೂ ಆರೋಗ್ಯ ಸಿಗಬೇಕು ಎಂದು ಈ ಆಂದೋಲನ ಪ್ರಾರಂಭಿಸಿದ್ದೇವೆ. ಆರೋಗ್ಯದ ಹಕ್ಕು ಎಲ್ಲರಿಗೂ ಸಿಗಬೇಕು. ಮಹಿಳೆಯರು, ಬೀದಿ ವ್ಯಾಪಾರಿಗಳು, ದಲಿತರು, ಆದಿವಾಸಿಗಳು, ಅಂಗವಿಕಲರು, ಮಂಗಳಮುಖಿಯರು ಸೇರಿದಂತೆ ಬೇರೆ ಬೇರೆ ಸಮುದಾಯಗಳಿಗೋಸ್ಕರ ಕೆಲಸ ಮಾಡುತ್ತಿದ್ದೇವೆ” ಎಂದರು.
“ಹಿಂದಿನ ಸರ್ಕಾರ ನೀತಿ ಆಯೋಗದ ವರದಿ ತೆಗೆದುಕೊಂಡು 9 ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿತ್ತು. ಅದನ್ನು ನಾವು ವಿರೋಧಿಸಿದ್ದೇವೆ. ಕರ್ನಾಟಕದಲ್ಲಿ ಇಂತಹ ಒಂದು ಮಾಡಲ್ ಈಗಾಗಲೇ ಬಂದು ಹಾಳಾಗಿದೆ ಎಂಬುದು ಸರ್ಕಾರಕ್ಕೂ ತಿಳಿದಿದೆ. ಈ ಹಿಂದೆ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಲಾಗಿತ್ತು. ಆದರೆ, ಅವರು ಬಿಟ್ಟುಹೋಗುವಾಗ ಆಸ್ಪತ್ರೆಯನ್ನು ಸಂಪೂರ್ಣ ಹಾಳು ಮಾಡಿದ ಉದಾಹರಣೆಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಖಂಡಿತವಾಗಿ ಸಮಸ್ಯೆಗಳಿವೆ. ಸಿಬ್ಬಂದಿ ಕೊರತೆ, ಚಿಕಿತ್ಸೆ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಸಾಮಾಜಿಕ ಹೋರಾಟಗಾರ ಕರಿಬಸಪ್ಪ ಹೇಳಿದರು.
“ಆರೋಗ್ಯ ವ್ಯವಸ್ಥೆಯಲ್ಲಿ ಈಗೀಗ ಒಂದು ವ್ಯವಸ್ಥೆ ಪ್ರಾರಂಭವಾಗಿದೆ. ಎಲ್ಲರಿಗೂ ಈ ಆರೋಗ್ಯದ ವ್ಯವಸ್ಥೆ ಸಿಗಬೇಕು. ಈ ಎಪಿಎಲ್, ಬಿಪಿಎಲ್ ಹಾಗೂ ಆಧಾರ್ ಕಾರ್ಡ್ ಪಡೆದು ಚಿಕಿತ್ಸೆ ನೀಡುವಂತಾಗಬಾರದು. ಇದನ್ನು ನಾವು ಸಂಪೂರ್ಣ ವಿರೋಧಿಸುತ್ತೇವೆ” ಎಂದರು.
“ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ವೇತನ ಸರಿಯಾಗಿ ನೀಡುತ್ತಿಲ್ಲ. ಅವರಿಗೆಲ್ಲ ಕನಿಷ್ಠ ವೇತನ ನೀಡಲಾಗುತ್ತಿದೆ. ಕೋವೀಡ್ ನಂತರ ಜನರು ಮಾನಸಿಕವಾಗಿ ನೊಂದಿದ್ದಾರೆ. ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ, ಪ್ರತಿ ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೌನ್ಸಲಿಂಗ್ ಆರಂಭಿಸಬೇಕು” ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಶಾಂತಮ್ಮ ತಿಳಿಸಿದರು.