- ಸಂಪೂರ್ಣ ಸರ್ವೀಸ್ ರಸ್ತೆ ಸಂಚಾರ ಮುಖ್ಯ ರಸ್ತೆಯೊಂದಿಗೆ ವಿಲೀನ
- ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ರ್ಯಾಂಪ್ ನಿರ್ಮಾಣ
ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ನಗರದ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ್ಯಾಂಪ್ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದ್ದು, ಜುಲೈ 15ರವರೆಗೆ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ಸಂಚಾರ ಪೊಲೀಸ್, “ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ್ಯಾಂಪ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೆಬ್ಬಾಳ ಪೊಲೀಸ್ ಠಾಣೆಯಿಂದ ನಗರದ ಕಡೆಗೆ ಹೋಗುವ ಸರ್ವೀಸ್ ರಸ್ತೆ ಬಂದ್ ಆಗಿದೆ. ಸಂಪೂರ್ಣ ಸರ್ವಿಸ್ ರಸ್ತೆ ಸಂಚಾರವನ್ನು ಮುಖ್ಯ ರಸ್ತೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಆದ್ದರಿಂದ ನಗರದ ಕಡೆಗೆ ನಿಧಾನ ಸಂಚಾರವಿದೆ” ಎಂದು ಹೇಳಿದೆ.
ಸಂಚಾರ ದಟ್ಟಣೆಗೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಲು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಸಾರ್ವಜನಿಕರು ಸಹಕರಿಸಲು ಕೋರಿದೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಒಂದಾಗಿರುವ ಹೆಬ್ಬಾಳದಲ್ಲಿ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ರ್ಯಾಂಪ್ ನಿರ್ಮಾಣ ಮಾಡುವ ಕಾರ್ಯ ಇದೀಗ ಆರಂಭವಾಗಿದೆ. ₹87 ಕೋಟಿ ವೆಚ್ಚದಲ್ಲಿ 700 ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ.
ಹೆಚ್ಚುವರಿ ರ್ಯಾಂಪ್ ನಿರ್ಮಿಸುವ ಕಾಮಗಾರಿ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯನ್ನು ಮೊದಲು 2015 ರಲ್ಲಿ ಯೋಜಿಸಲಾಗಿತ್ತು, ಆದರೆ ಹಲವಾರು ಕಾರಣಗಳಿಂದ ಯೋಜನೆ ಜಾರಿಗೆ ಬರಲು ವಿಳಂಬವಾಯಿತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಲೀಕರ ಮನೆಗೆ ಕನ್ನ ಹಾಕಿದ ಲಿವಿಂಗ್ ಟುಗೆದರ್ ಜೋಡಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವಾರದ ಆರಂಭದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ನಿರ್ಮಾಣ ಕಾರ್ಯವು ಎಸ್ಟೀಮ್ ಮಾಲ್ನಿಂದ ಪ್ರಾರಂಭಗೊಂಡಿದ್ದು, ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಕೊನೆಗೊಳಿಸಲಿದೆ.
ಈ ಹೆಚ್ಚುವರಿ ರ್ಯಾಂಪ್ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬರುವ ಪ್ರಯಾಣಿಕರಿಗೆ ಸಹಾಯವಾಗಲಿದೆ.