ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಫ್ಲಾಗ್, ಬಂಟಿಂಗ್ಸ್ ಸೇರಿದಂತೆ ಇತ್ಯಾದಿಗಳನ್ನು ನಿಯಮಾನುಸಾರ ತೆರವುಗೊಳಿಸಿ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
“ಬಿಬಿಎಂಪಿ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿ ನೀಡಿ ಈ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ಮೂರು ವಾರಗಳ ಕಾಲಾವಕಾಶ ನೀಡಿದೆ. ನಗರದಲ್ಲಿ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡುಬಂದರೆ ಪಾಲಿಕೆ ಹಾಗೂ ರಾಜ್ಯ ಸರ್ಕಾರ ತಲಾ ₹50,000 ದಂಡ ಕಟ್ಟಬೇಕೆಂದು ನಿರ್ದೇಶನ ನೀಡಿದೆ. ಹಾಗಾಗಿ, ನ್ಯಾಯಾಲಯದ ನಿರ್ದೇಶನದಂತೆ ಕೂಡಲೇ ತುರ್ತು ಕ್ರಮ ಕೈಗೊಂಡು ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್/ಎಲ್.ಇ.ಡಿ. ಇನ್ನಿತರೇ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ತೆರವು ಕೈಗೊಂಡ ಕ್ರಮದ ಬಗ್ಗೆ ಅಂಕಿ ಅಂಶಗಳು, ದಾಖಲೆಗಳ ಸಮೇತ ಅನುಪಾಲನಾ ವರದಿಯನ್ನು ಆ.16ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು” ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
“ಈ ಸೂಚನೆಗೆ ತಪ್ಪಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ, ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದಿಂದ ಮುಂದೆ ಎದುರಾಗುವ ಪರಿಣಾಮಗಳಿಗೆ ಸಂಬಂಧಪಟ್ಟ ಅಪರ ಹಾಗೂ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ವೈಯಕ್ತಿಕ ಜವಾಬ್ದಾರಿಯಾಗುತ್ತಾರೆ” ಎಂದು ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಆ. 15ರಂದು ಲಾಲ್‌ಬಾಗ್‌ನಿಂದ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್: ಬಿಎಂಆರ್‌ಸಿಎಲ್
“ಸಂಬಂಧಪಟ್ಟ ವಲಯ ಆಯುಕ್ತರ ಉಸ್ತುವಾರಿಯಲ್ಲಿ ಕಟ್ಟುನಿಟ್ಟಾಗಿ ಎಲ್ಲ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್, ಎಲ್.ಇ.ಡಿ ಸೇರಿದಂತೆ ಇನ್ನಿತರ ಜಾಹೀರಾತು ಫಲಕ ತೆರವುಗೊಳಿಬೇಕು. ಸಂಬಂಧಪಟ್ಟ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಹೋರ್ಡಿಂಗ್ಸ್ , ಫ್ಲೆಕ್ಸ್, ಬ್ಯಾನರ್, ಎಲ್.ಇ.ಡಿ ತೆರವುಗೊಳಿಸಲು ವಿಫಲರಾದಲ್ಲಿ ಸಂಬಂಧಪಟ್ಟ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ತಲಾ ₹50,000 ಠೇವಣಿಯನ್ನು ಅವರಿಂದ ವಸೂಲಿ ಮಾಡಿ ನ್ಯಾಯಾಲಯದಲ್ಲಿ ಇಡಲಾಗುವುದು” ಎಂದು ತಿಳಿಸಿದೆ.
“ಈ ಕುರಿತು ಪಾಲಿಕೆಯ ಎಲ್ಲ ವಲಯ ಆಯುಕ್ತರರು ತಮ್ಮ ವಲಯ ವ್ಯಾಪ್ತಿಯಲ್ಲಿನ ಜಾಹೀರಾತುಗಳ ತೆರವಿಗೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದೆ.