ಸೈಬರ್ ಕ್ರೈಮ್ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಮೂರು ವಾರಗಳಲ್ಲಿ ವಂಚಕರು ಬೆಂಗಳೂರಿನ ನಿವಾಸಿಗಳನ್ನು ವಂಚಿಸಲು ಬಳಸುತ್ತಿದ್ದ 15,000 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಗರ ಪೊಲೀಸರು ಗುರುತಿಸಿ ಬ್ಲಾಕ್ ಮಾಡಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಸೈಬರ್ ಕ್ರೈಮ್ ಘಟನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಆಗಸ್ಟ್ 16 ರಂದು ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕ್ರಮದ ಭಾಗವಾಗಿ ಪೊಲೀಸರು ಆ.16 ರಿಂದ ಸೆ.7 ರವರೆಗೆ 15,378 ಸಿಮ್ ಕಾರ್ಡ್‌ಗಳನ್ನು ಗುರುತಿಸಿ ಬ್ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಿಮ್ ಕಾರ್ಡ್‌ಗಳಲ್ಲಿ ಹೆಚ್ಚಿನವು ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಂಚಕರು ಬೆಂಗಳೂರಿನ ನಿವಾಸಿಗಳನ್ನು ನಾನಾ ವಿಧಾನಗಳ ಮೂಲಕ ವಂಚಿಸಲು ಬಳಸುತ್ತಿದ್ದರು.
“ಈ ವರ್ಷದ ಜನವರಿಯಿಂದ ಸೈಬರ್ ಕ್ರೈಮ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚನೆಗೆ ಒಳಗಾದವರಿಂದ ಈಗಾಗಲೇ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ. ನಾನಾ ವಿಧಾನಗಳ ಮೂಲಕ ವಂಚಕರು ಅವರನ್ನು ಸಂಪರ್ಕಿಸಿ, ವಂಚಿಸಿದ್ದಾರೆ. ವಂಚನೆಗೆ ಒಳಗಾದವರನ್ನು ಗುರುತಿಸಲಾಗಿದೆ. ಈ ಸಂಖ್ಯೆಗಳನ್ನು ಗುರುತಿಸಿ, ಪರಿಶೀಲಿಸಲಾಗಿದೆ. ಅವುಗಳನ್ನು ತಕ್ಷಣವೇ ನಿರ್ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಉಪ ಪೊಲೀಸ್ ಆಯುಕ್ತ (ಕಮಾಂಡ್ ಸೆಂಟರ್) ರವೀಂದ್ರ ಗಡಾಡಿ ಮಾತನಾಡಿ, “ಒಂದೇ ಸಿಮ್ ಕಾರ್ಡ್ ಬಳಸಿ ಅನೇಕ ಅಮಾಯಕರನ್ನು ವಂಚಿಸಬಹುದು. ಆದ್ದರಿಂದ, ಆ ಸಿಂಗಲ್ ಸಿಮ್ ಕಾರ್ಡ್ ತಕ್ಷಣವೇ ಬ್ಲಾಕ್ ಆಗಿದ್ದರೂ, ಇತರ ಬಲಿಪಶುಗಳನ್ನು ಗುರಿಯಾಗಿಸಲು ಅದೇ ಸಿಮ್ ಅನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆ ಮಧ್ಯೆ ನಿಂತ ಹೆಲಿಕಾಪ್ಟರ್: ಮತ್ತಷ್ಟು ಹೆಚ್ಚಾದ ಸಂಚಾರ ದಟ್ಟಣೆ
“ಈ ರೀತಿಯಾಗಿ ವಂಚನೆಗೆ ಒಳಗಾಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ” ಎಂದು ತಿಳಿಸಿದರು.
ವಂಚನೆಯ ಚಟುವಟಿಕೆಗಳಿಗೆ ಬಳಸಲಾದ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ಗುರುತಿಸಲು ಪೊಲೀಸರು ಹಿಂದಿನ ವರ್ಷಗಳ ಪ್ರಕರಣದ ಫೈಲ್‌ಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅದೇ ಉದ್ದೇಶಕ್ಕಾಗಿ ಇನ್ನೂ ಅದೇ ಸಿಮ್ ಕಾರ್ಡ್‌ಗಳನ್ನು ಬಳಸಿದರೆ ಅವುಗಳನ್ನು ನಿರ್ಬಂಧಿಸಬಹುದು ಎಂದು ತಿಳಿದುಬಂದಿದೆ.