- 15 ದಿನದೊಳಗೆ ಹೊಸ ಪಡಿತರ ಚೀಟಿ ಅರ್ಜಿದಾರನಿಗೆ ಸೇರಲಿವೆ
- ರೇಷನ್ ಕಾರ್ಡ್ ಒಂದು ಪ್ರಮುಖ ಸರ್ಕಾರಿ ದಾಖಲೆಯಾಗಿದೆ
2023ನೇ ಸಾಲಿನ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ರೇಷನ್ ಕಾರ್ಡ್ ಅರ್ಜಿ ಸ್ವೀಕರಿಸುವುದನ್ನು ಆಹಾರ ಇಲಾಖೆ ಸ್ಥಗಿತಗೊಳಿಸಿತ್ತು. ಇದೀಗ, ಮತ್ತೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಮುಖ್ಯವಾಗಿದೆ. ಕಳೆದ ಬಾರಿ ಬಿಪಿಎಲ್ ಕಾರ್ಡ್‌ಗೆ 3 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇನ್ನೂ ಈ ಕಾರ್ಡ್‌ಗಳ ವಿಲೇವಾರಿ ಬಾಕಿ ಉಳಿದಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಹೊಸ ವೆಬ್‌ಸೈಟ್ ಡೆವಲಪ್ ಮಾಡಬೇಕು. ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಬಡ ಜನತೆಗೆ ಸರ್ಕಾರ ಕಡಿಮೆ ದರ ಇಲ್ಲವೇ ಉಚಿತವಾಗಿ ನೀಡುವ ಆಹಾರ ಧಾನ್ಯಗಳನ್ನು (ಪಡಿತರ) ಪಡೆಯಲು ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳನ್ನು ವಿತರಿಸುತ್ತದೆ. ಆಗಾಗ ಪಡಿತರ ಚೀಟಿಗಾಗಿ ಆಹಾರ ಇಲಾಖೆ ಅರ್ಜಿ ಆಹ್ವಾನ ಮಾಡುತ್ತದೆ. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ (ahara.kar.nic.in) ಅರ್ಜಿ ಸಲ್ಲಿಸಬಹುದು.
ರೇಷನ್ ಕಾರ್ಡ್ ಅನುಕೂಲಗಳೇನು?
- ರೇಷನ್ ಕಾರ್ಡ್ ಒಂದು ಪ್ರಮುಖ ಸರ್ಕಾರಿ ದಾಖಲೆಯಾಗಿದೆ.
- ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ಪಡಿತರ ಚೀಟಿ ಹೊಂದಿರುವುದು ಕಡ್ಡಾಯ.
- ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಚಾಲಕರ ಪರವಾನಗಿ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ.
ಪಡಿತರ ಚೀಟಿ ಪಡೆಯಲು ಅಗತ್ಯ ದಾಖಲೆಗಳು
- ಪಡಿತರ ಚೀಟಿ ಪಡೆಯುವ ವ್ಯಕ್ತಿ ರಾಜ್ಯದ ನಿವಾಸಿಯಾಗಿರಬೇಕು
- ಈಗಾಗಲೇ ಪಡಿತರ ಚೀಟಿ ಹೊಂದಿರಬಾರದು
- ಹೊಸದಾಗಿ ಮದುವೆಯಾದವರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು
- ಪಡಿತರ ಚೀಟಿ ಅವಧಿ ಮುಗಿದ ಅರ್ಹರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು
- ಹೊಸ ಪಡಿತರ ಚೀಟಿ ನೀಡುವುದು ಮನೆಯ ಆದಾಯ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿ ಆಧರಿಸಿದೆ
ಹೊಸ ರೇಷನ್ ಕಾರ್ಡ್ ಪಡೆಯಲು ಅಗತ್ಯ ದಾಖಲೆಗಳು
- ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ (ಸ್ಕ್ಯಾನ್ ಮಾಡಿದ ಪ್ರತಿ) ನಂತಹ ವಾಸಸ್ಥಳದ ಪುರಾವೆ
- ವಯಸ್ಸಿನ ಪ್ರಮಾಣಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
- ಕುಟುಂಬದ ಆದಾಯ ಪ್ರಮಾಣ ಪತ್ರ (ಸ್ಕ್ಯಾನ್ ಮಾಡಿದ ಪ್ರತಿ)
- ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ / ಇ-ಮೇಲ್ ಐಡಿ
- ವಾರ್ಡ್ ಕೌನ್ಸಿಲರ್/ ಪ್ರಧಾನ್ ನೀಡಿದ ಸ್ವಯಂ ಘೋಷಣೆ ಮತ್ತು ಪ್ರಮಾಣಪತ್ರ
- ಬಾಡಿಗೆ ಒಪ್ಪಂದ (ಅನ್ವಯಿಸಿದರೆ)
ಅರ್ಜಿ ಶುಲ್ಕ
ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು 2016ರಲ್ಲಿ ಆಹಾರ ಇಲಾಖೆ ನಿಗದಿ ಮಾಡಿದ ಮಾನದಂಡಗಳು
- ಎಲ್ಲ ಸರ್ಕಾರಿ, ಅರೆ ಸರ್ಕಾರಿ ಖಾಯಂ ನೌಕರರಾಗಿರಬಾರದು
- ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರಾಗಿರಬಾರದು
- ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರಬಾರದು
- ನಗರದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು
- ಟ್ರ್ಯಾಕ್ಟರ್, ಕ್ಯಾಬ್, ಟ್ಯಾಕ್ಸಿ ಹೊರತಾಗಿ ವೈಟ್ ಬೋರ್ಡ್ ಕಾರು ಹೊಂದಿರಬಾರದು
- ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬವಾಗಿರಬಾರದು
ಈ ಸುದ್ದಿ ಓದಿದ್ದೀರಾ? ನಟ ವಿಜಯ ರಾಘವೇಂದ್ರ ಪತ್ನಿ ಹೃದಯಾಘಾತದಿಂದ ನಿಧನ
ಪಡಿತರ ಚೀಟಿಗಾಗಿ ಸಲ್ಲಿಸಿದ ಎಲ್ಲ ದಾಖಲೆಗಳ ಪರಿಶೀಲನೆ ಬಳಿಕ 15 ದಿನದೊಳಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಸಂಪೂರ್ಣ ದಾಖಲಾತಿಗಳು ಇದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಬದಲಾಗಿ ಯಾವುದೇ ದಾಖಲೆ ಇಲ್ಲದಿದ್ದರೂ ಅರ್ಜಿ ಸಲ್ಲಿಕ ಮಾಡಿದರೆ ರದ್ದಾಗಲಿವೆ.