ನಾವೂ ಮನುಷ್ಯರೇ, ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ: ಪೌರ ಕಾರ್ಮಿಕರು

Date:

Advertisements
ಬೆಂಗಳೂರಿನಲ್ಲಿ ಪ್ರತಿ ನಿತ್ಯ 5,200 ಟನ್ ತ್ಯಾಜ್ಯ (ಕಸ) ಉತ್ಪಾದನೆಯಾಗುತ್ತದೆ. ಈ ಪೈಕಿ 3,600 ಟನ್ ಅಂದರೆ, 55% ಹಸಿ ತ್ಯಾಜ್ಯ ಸಂಗ್ರಹವಾದರೆ, 25% ಒಣ ತ್ಯಾಜ್ಯ ಸಂಗ್ರಹವಾಗುತ್ತದೆ. ಇನ್ನುಳಿದ 25% ಹಸಿ ಕಸ – ಒಣ ಕಸವೆಂದು ಬೇರ್ಪಡಿಸದೆ, ಮಿಶ್ರಣಗೊಂಡ ತ್ಯಾಜ್ಯವಾಗಿದೆ

ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಐಟಿ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಮಹಾನಗರಿ ಕಸ, ಕೊಳಚೆ, ಅವ್ಯವಸ್ಥೆಗಳಿಂದಲೂ ಬಳಲುತ್ತಿದೆ. ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರು ಮುಂಜಾನೆಯಿಂದ ರಾತ್ರಿಯವರೆಗೂ ದುಡಿದರೂ, ಅಪ್ರಬುದ್ಧ ನಾಗರಿಕರ ಬೇಜವ್ದಾರಿತನದಿಂದಾಗಿ ನಗರವು ಕಸಮಯವಾಗಿಯೇ ಉಳಿಯುತ್ತಿದೆ.

ದಿನನಿತ್ಯ ಪೌರ ಕಾರ್ಮಿಕರು ಚಳಿ, ಮಳೆ ಎನ್ನದೆ ಬೀದಿಗಿಳಿದು ಕಸ ತೆಗೆಯುತ್ತಾರೆ. ನಗರದ ರಸ್ತೆ ಬದಿಗಳಲ್ಲಿ (ಬ್ಲಾಕ್‌ಸ್ಪಾಟ್) ತುಂಬಿರುವ ರಾಶಿ, ಕೊಳೆಯನ್ನು ಶುಚಿ ಮಾಡುತ್ತಾರೆ. ಆದರೂ, ಮಾರನೆಯ ದಿನ ಇಡೀ ನಗರ ಕಸದಲ್ಲಿ ಮಿಂದೇಳುತ್ತಿರುತ್ತದೆ. ಪೌರ ಕಾರ್ಮಿಕರ ಶ್ರಮವನ್ನು ಅರ್ಥ ಮಾಡಿಕೊಳ್ಳದ ನಗರದ ನಾಗರಿಕರು ಸ್ವಚ್ಛತೆಗೂ ತಮಗೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ವರ್ತಿಸುವುದು, ಎಲ್ಲೆಂದರಲ್ಲಿ ಕಸ ಎಸೆಯುವುದೇ ಖಂಡಿತ ನಾಗರಿಕ ಲಕ್ಷಣವಲ್ಲ.

ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಶಾಲಾ ಶಿಕ್ಷಣದಿಂದ ಪ್ರಾರಂಭವಾಗಿ ಹಲವಾರು ಅಭಿಯಾನಗಳನ್ನು ಆಗಾಗ್ಗೆ ಸರ್ಕಾರಗಳು ನಡೆಸುತ್ತಲೇ ಇವೆ. 2014ರಲ್ಲಿ ಅಧಿಕಾರಿಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ‘ಸ್ವಚ್ಛ ಭಾರತ್ ಅಭಿಯಾನ’ ಭಾರೀ ಪ್ರಚಾರ ಪಡೆದುಕೊಂಡಿತು. ಆದರೂ, ಜನರಲ್ಲಿ ಸ್ವಚ್ಛತೆ ತಮ್ಮೆಲ್ಲರ ಹೊಣೆ ಎಂಬುದನ್ನು ಅರಿತುಕೊಳ್ಳುವಂತೆ ಮಾಡುವಲ್ಲಿ ಅದೂ ವಿಫಲವಾಯಿತು. ಪರಿಣಾಮ, ಐಟಿ-ಬಿಟಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಂದಿಗೆ, ಕಸವೂ ಒಂದು ಸಮಸ್ಯೆ ಎಂಬುದು ಇದೂವರೆಗೂ ಅರಿವಿಗೆ ಬಂದಿಲ್ಲ.

Advertisements

ಪೌರ ಕಾರ್ಮಿಕರು

ನಗರದಲ್ಲಿ ಸೃಷ್ಠಿಯಾಗುತ್ತದೆ ಸಾವಿರಾರು ಟನ್ ಕಸ

ಬೆಂಗಳೂರಿನಲ್ಲಿ ಪ್ರತಿ ನಿತ್ಯ 5,200 ಟನ್ ತ್ಯಾಜ್ಯ (ಕಸ) ಉತ್ಪಾದನೆಯಾಗುತ್ತದೆ. ಈ ಪೈಕಿ 3,600 ಟನ್ ಅಂದರೆ, 55% ಹಸಿ ತ್ಯಾಜ್ಯ ಸಂಗ್ರಹವಾದರೆ, 25% ಒಣ ತ್ಯಾಜ್ಯ ಸಂಗ್ರಹವಾಗುತ್ತದೆ. ಇನ್ನುಳಿದ 25% ಹಸಿ ಕಸ – ಒಣ ಕಸವೆಂದು ಬೇರ್ಪಡಿಸದೆ, ಮಿಶ್ರಣಗೊಂಡ ತ್ಯಾಜ್ಯವಾಗಿದೆ.

ಮೊದಲಿಗೆ ಬೆಂಗಳೂರಿನಲ್ಲಿ ಕದ್ದು ಕಸ ಹಾಕುವ 1,200 ಬ್ಲಾಕ್‌ಸ್ಪಾಟ್‌ಗಳು ಇದ್ದವು. ಇದೀಗ ಈ ಸಂಖ್ಯೆ ಇಳಿಮುಖ ಕಂಡಿದೆ. ಆದರೂ, ಇನ್ನೂ 800ಕ್ಕೂ ಹೆಚ್ಚು ಬ್ಲಾಕ್‌ಸ್ಪಾಟ್‌ಗಳು ನಗರದಲ್ಲಿವೆ. ಬಿಬಿಎಂಪಿ ಹಾಗೂ ಕೆಲವು ಎನ್‌ಜಿಒಗಳು ಸೇರಿ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಿವೆ. ಜೊತೆಗೆ, ಹಲವು ಜಾಗೃತಿ ಕಾರ್ಯಕ್ರಮ ಕೈಗೊಂಡು 400 ಬ್ಲಾಕ್‌ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಿವೆ.

ಹಸಿ ಕಸ, ಒಣ ಕಸವನ್ನು ಬೇರ್ಪಡಿಸದವರು, ಕಸದ ಡಬ್ಬಿ ಇಟ್ಟುಕೊಳ್ಳದವರು ಬ್ಲಾಕ್‌ಸ್ಪಾಟ್‌ಗಳಲ್ಲಿ ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ಕಸ ಹಾಕುತ್ತಾರೆ. ಹಾಗಾಗಿ, ಕಸ ಹಾಕುವವರನ್ನು ಹಿಡಿದು ದಂಡ ಹಾಕಲು ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿದೆ. ಪಾಳಿಯಲ್ಲಿ ಮಾರ್ಷಲ್‌ಗಳು ಕಸ ಹಾಕುವುದನ್ನು ತಡೆಯಲು ಕಾರ್ಯನಿರ್ವಹಿಸುತ್ತಾರೆ. ದಂಡ ವಿಧಿಸುವುದರ ಜೊತೆಗೆ, ಕಸ ಹಾಕಲು ಬಂದ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪೌರ ಕಾರ್ಮಿಕರು

ಈ ಕಸದ ಜೊತೆಗೆ ಬಿಬಿಎಂಪಿ ಅನಧಿಕೃತ ಪ್ಲಾಸ್ಟಿಕ್ ಬಳಕೆಗೂ ಕಡಿವಾಣ ಹಾಕಲಾಗುತ್ತಿದೆ. ಆದರೂ, ಈ ಪ್ಲಾಸ್ಟಿಕ್ ಬಳಕೆಗೆ ಸಂಬಂಧಿಸಿದಂತೆ 2019 ರಿಂದ ಜೂನ್ 2022ರವರೆಗೆ ಒಟ್ಟು 53,000 ಪ್ರಕರಣಗಳು ದಾಖಲಾಗಿವೆ. ಒಟ್ಟು ₹2.46 ಕೋಟಿ ದಂಡ ಸಂಗ್ರಹವಾಗಿದೆ. 73 ಟನ್ ಪ್ಲಾಸ್ಟಿಕ್ ಅನ್ನು ಬಿಬಿಎಂಪಿ ವಶಪಡಿಸಿಕೊಂಡಿದೆ. ಬ್ಲಾಕ್‌ಸ್ಪಾಟ್‌ನಲ್ಲಿ ಕಸ ಹಾಕುವವರಿಂದ, ಅನಧಿಕೃತ ಪ್ಲಾಸ್ಟಿಕ್ ಬಳಸುವವರಿಂದ ಕಳೆದ ಐದು ವರ್ಷಗಳಲ್ಲಿ ₹10 ಕೋಟಿ ದಂಡ ಸಂಗ್ರಹವಾಗಿದೆ.

ಸ್ವಚ್ಛತೆಯ ಬಗ್ಗೆ ನಾಗರಿಕರಿಗಿಲ್ಲ ಅರಿವು

ನಗರದ ಸ್ವಚ್ಛತೆಗಾಗಿ ದುಡಿಯುವ ಪೌರ ಕಾರ್ಮಿಕರು, ನಗರವನ್ನು ಶುಚಿಗೊಳಿಸುತ್ತಾರೆ. ಆದರೆ, ಅತೀ ಹೆಚ್ಚು ಓದಿಕೊಂಡು, ಟೈ ಕಟ್ಟಿಕೊಂಡು, ಬೂಟು ಹಾಕಿಕೊಂಡು ಬೃಹತ್ ಕಟ್ಟಡಗಳಲ್ಲಿ ಆರಾಮವಾಗಿ ಕೆಲಸ ಮಾಡುವ ಅಕ್ಷರಸ್ಥರೇ ನಗರವನ್ನು ಕಸಮಯಗೊಳಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಬಿಸಾಕುವುದು, ಹಸಿ ಕಸ, ಒಣ ಕಸಗಳನ್ನು ವಿಂಗಡಣೆ ಮಾಡದೇ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಿ, ರಸ್ತೆಬದಿ ಎಸೆಯುತ್ತಿರುವವರಲ್ಲಿ ಈ ಜನರೇ ಹೆಚ್ಚಾಗಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿ ವರ್ಷ ಸುಮಾರು ಒಂದೂವರೆ ಸಾವಿರ ಕೋಟಿ ಹಣವನ್ನು ನಗರದ ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ವೆಚ್ಚ ಮಾಡುತ್ತಿದೆ. ಕಸ ವಿಂಗಡಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನಾನಾ ರೀತಿಯಲ್ಲಿ ಅರಿವು ಮೂಡಿಸುತ್ತಿದೆ. ನಗರದಲ್ಲಿರುವ ಬ್ಲಾಕ್‌ಸ್ಪಾಟ್‌ಗಳ ಬಳಿ ಸಿಸಿ ಕ್ಯಾಮರಾ ಅಳವಡಿಕೆ, ರಂಗೋಲಿ ಹಾಕುವುದು ಸೇರಿದಂತೆ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೂ, ಜನರು ಬ್ಲಾಕ್‌ಸ್ಪಾಟ್‌ಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಿಲ್ಲ.

ಪೌರ ಕಾರ್ಮಿಕರ ಶ್ರಮಕ್ಕಾದರೂ ಬೆಲೆ ಬೇಡವೇ?

ನಗರದಲ್ಲಿ ಎಲೆಮರೆ ಕಾಯಿಯಂತೆ ದುಡಿಯುವ ಪೌರ ಕಾರ್ಮಿಕರೇ ನಗರದ ಮುಖ್ಯ ಜೀವನಾಡಿಗಳು. ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಅನಾರೋಗ್ಯ ಮುಕ್ತ ಸಮಾಜ ನಿರ್ಮಾಣಕ್ಕೂ ಇವರೇ ಕಾರಣಕರ್ತರು. ನಗರದ ಮಂದಿ ಬೆಚ್ಚಗೆ ಮಲಗಿರುವ ಹೊತ್ತಿನಲ್ಲೇ ಎದ್ದು, ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಛಲ ಬಿಡದೆ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ.

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ಸಾರ್ವಜನಿಕರು ರಸ್ತೆಯ ಬದಿ ಎಲ್ಲೆಂದರಲ್ಲಿ ಕಸ ಎಸೆಯುವ ಮೊದಲು ಕಸ ಸ್ವಚ್ಛಮಾಡುವವರ ಪರಿಸ್ಥಿತಿ, ಆರೋಗ್ಯ ಸ್ಥಿತಿಯನ್ನು ಅರಿತುಕೊಳ್ಳಬೇಕು. ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಹಾಕುತ್ತಿರುವ ಶ್ರಮವನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರ ಶ್ರಮವನ್ನು ಅರಿತರೆ, ನಗರವು ತಾನಾಗಿಯೇ ಸ್ವಚ್ಚವಾಗುತ್ತದೆ.

ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಬಗ್ಗೆ ಅಧಿಕಾರಿಗಳು ಏನೆನ್ನುತ್ತಾರೆ?

ಕಸದ ಸಮಸ್ಯೆ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್, “ಮನೆ ಮನೆಗೆ ಹೋಗಿ ಕಸ ಸಂಗ್ರಹ ಮಾಡಲಾಗುತ್ತಿದೆ. ಕಸ ವಿಂಗಡಣೆ ಮಾಡದೆ ಇರುವವರು ಬ್ಲಾಕ್‌ಸ್ಪಾಟ್‌ಗಳಲ್ಲಿ ಬಿಸಾಕುತ್ತಿದ್ದಾರೆ. ಪೌರಕಾರ್ಮಿಕರು ಬೆಳಗ್ಗೆ 8 ಗಂಟೆ ಒಳಗೆ ಬ್ಲಾಕ್‌ಸ್ಪಾಟ್‌ಗಳಲ್ಲಿ ಬಿದ್ದ ಎಲ್ಲ ಕಸವನ್ನು ತೆಗೆಯುತ್ತಾರೆ. ಬ್ಲಾಕ್‌ಸ್ಪಾಟ್‌ಗಳಲ್ಲಿ ಕಸ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಹಲವಾರು ಕಾರ್ಯಕ್ರಮಗಳನ್ನು ತಂದಿದೆ. ಇನ್ನೂ ಜನರು ಈ ಬಗ್ಗೆ ಅರಿತು ಸಹಕಾರ ನೀಡಬೇಕು” ಎಂದರು.

ಪೌರ ಕಾರ್ಮಿಕರು

ಬಿಬಿಎಂಪಿ ಕಸದ ಗುತ್ತಿಗೆದಾರ ಪರಮೇಶ ಈ ದಿನ.ಕಾಮ್ ಜತೆಗೆ ಮಾತನಾಡಿ, “ಜನರು ಬ್ಲಾಕ್‌ಸ್ಪಾಟ್‌ಗಳಲ್ಲಿ ಕಸ ಹಾಕುವ ಬಗ್ಗೆ ಹಲವಾರು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದಾಗಿ ಕಸದ ಗಾಡಿ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕಸ ವಿಂಗಡಣೆ ಮಾಡಲಾಗುವುದಿಲ್ಲ ಎನ್ನುತ್ತಾರೆ. ಜನರಲ್ಲಿ ಕಸ ಹಾಕುವ ಬಗ್ಗೆ ಜಾಗೃತಿ ಮೂಡಿಸಬೇಕು. ಸಿನಿಮಾ, ಸಿರಿಯಲ್‌ಗಳ ಮಧ್ಯೆ ಗುಟ್ಕಾ ಸೇರಿದಂತೆ ಇನ್ನಿತರ ಜಾಹೀರಾತುಗಳು ಬರುವ ರೀತಿ ಕಸ ವಿಂಗಡಣೆ ಮಾಡುವ ಬಗ್ಗೆ ಜಾಹೀರಾತು ನೀಡಬೇಕು. ಆಗ ಜನರ ಮನಸ್ಥಿತಿ ಬದಲಾಗಬಹುದು” ಎಂದು ತಿಳಿಸಿದರು.

ಪೌರಕಾರ್ಮಿಕರು ಹೇಳುವುದೇನು?

“ಕಳೆದ ಆರು ವರ್ಷದಿಂದ ನಾನು ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ. ಕಸ ವಿಂಗಡಣೆ ಮಾಡಿ ಹಾಕುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ಬೆಳಗ್ಗೆ ಕಸದ ಗಾಡಿ ಮನೆ ಮುಂದೆ ಹೋದಾಗ ಹಲವಾರು ಜನ ಕಸ ತೆಗೆದುಕೊಂಡು ಬರುವುದಿಲ್ಲ. ಕಾರಣ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಣೆ ಮಾಡಬೇಕಾಗುತ್ತದೆ ಎಂದು ಗಾಡಿಗೆ ಕಸ ಹಾಕಲು ಬರುವುದಿಲ್ಲ. ಮನೆಗೆ ಹೋಗಿ ಬಾಗಿಲು ಬಡಿದು ಕಸ ಹಾಕಿ ಎಂದು ಕೇಳಿದ್ದೇವೆ. ಆದರೂ ಕೆಲವೆಡೆ ಬ್ಲಾಕ್‌ಸ್ಪಾಟ್‌ಗಳಲ್ಲಿ ರಾತ್ರಿ ವೇಳೆ ಕಸ ತಂದು ಸುರಿಯುತ್ತಾರೆ. ಜನರು ನಮ್ಮ ಸಮಸ್ಯೆ ಅರ್ಥಮಾಡಿಕೊಳ್ಳಬೇಕು. ನಾವು ಅವರ ಹಾಗೇ ಮನುಷ್ಯರೇ, ತಿಳಿದವರೇ ರಸ್ತೆಗೆ ತಂದು ಕಸ ಸುರಿಯುತ್ತಾರೆ” ಎಂದು ಈ ದಿನ.ಕಾಮ್‌ಗೆ ಪೌರ ಕಾರ್ಮಿಕ ಬೀರಲಿಂಗೆಗೌಡ ಹೇಳಿದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ರಾಜಮ್ಮ, “ರಸ್ತೆಯಲ್ಲಿ ಹಾಕಿದ ಕಸವನ್ನೆಲ್ಲ ಸ್ವಚ್ಛ ಮಾಡಿ ಮನೆಗೆ ತೆರಳುತ್ತೇವೆ. ಮರುದಿನ ಬೆಳಗ್ಗೆ ಬಂದು ನೋಡಿದರೆ ಅಷ್ಟೇ ಕಸದ ರಾಶಿ ತುಂಬಿರುತ್ತದೆ. ನಾವೂ ಮನುಷ್ಯರೇ ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ. ಪೌರ ಕಾರ್ಮಿಕರು ಎಂದ ತಕ್ಷಣ. ನಾವು ನಿಮ್ಮ ಅಡಿಯಾಳಲ್ಲ. ನಾವು ನಗರವನ್ನು ಸ್ವಚ್ಛವಾಗಿಟ್ಟು ನಿಮ್ಮೆಲ್ಲರ ಆರೋಗ್ಯ ರಕ್ಷಣೆ ಮಾಡುವವರು. ಸಾಧ್ಯವಾದರೆ, ನಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿಸಿ ರಸ್ತೆಬದಿಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಿ” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಬರಲಿರುವ ಮಾನ್ಸೂನ್‌ ಮಳೆಗೆ ಬೇಕಾದ ಸಿದ್ಧತೆಯನ್ನು ಬಿಬಿಎಂಪಿ ಮಾಡಿಕೊಂಡಿದೆಯೇ?

ನಗರವಾಸಿಗಳಿಗೆ ಈ ದಿನ.ಕಾಮ್ ಕಿವಿ ಮಾತು

ಸ್ವಚ್ಛತೆಯನ್ನು ಕಾಪಾಡುವುದು ನಗರವಾಸಿಗಳಾದ ಎಲ್ಲರ ಕರ್ತವ್ಯ. ಎಲ್ಲರೂ ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ವಿಂಗಡಿಸಬೇಕು. ಆ ಕಸವನ್ನು ಮನೆ ಮುಂದೆ ಬರುವ ಕಸದ ಗಾಡಿಗೆ ಕೊಡಬೇಕು. ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕಬಾರದು.

ಮಾತ್ರವಲ್ಲ, ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ. ಕೊರೊನಾ, ಮಳೆ, ಚಳಿ, ಗಾಳಿ, ಗಲೀಜು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಎಲ್ಲರೂ ಗೌರವಿಸಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಾವೇನು ಮಾಡಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು.

ಹನಿ ಹನಿ ಸೇರಿದರೆ ಹಳ್ಳ. ಹಾಗೇಯೇ ಎಲ್ಲರೂ ಒಗ್ಗೂಡಿದರೆ ಮಾತ್ರ ಈ ಕಸದ ಸಮಸ್ಯೆ ಬಗೆಹರಿಸಲು ಸಾಧ್ಯ. ಎಲ್ಲೆಂದರಲ್ಲಿ ಕಸವನ್ನು ಬಿಸಾಡುವುದರಿಂದ ಸಮಾಜದಲ್ಲಿ ಆರೋಗ್ಯ ಕಣ್ಮರೆಯಾಗುತ್ತದೆ. ಹೀಗಾಗಿ, ನಮ್ಮ, ನಮ್ಮೆಲ್ಲರ ಆರೋಗ್ಯಕ್ಕಾಗಿ ನಗರವನ್ನು ಶುಚಿಯಾಗಿಟ್ಟುಕೊಳ್ಳಲು ಇಂದೇ ಪಣ ತೊಡೋಣ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X