ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ 14 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪ ಕೇಳಿ ಬಂದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿ ವೇಳೆ, ನಗರದ ಕೆ.ಆರ್.ಪುರ ತಾಲ್ಲೂಕಿನ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ. ಶ್ರೀನಿವಾಸಮೂರ್ತಿ ಐದು ಮದ್ಯದಂಗಡಿಗಳನ್ನು ಹೊಂದಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಆಗಸ್ಟ್ 22ರಂದು ಬೆಂಗಳೂರು, ತುಮಕೂರು ಸೇರಿ 14 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ವೇಳೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ.
ಬೆಂಗಳೂರಿನ ಕೆ.ಆರ್.ಪುರ ತಾಲೂಕು ಕಚೇರಿಯ ಭೂಮಾಪನ ಇಲಾಖೆ ಅಧೀಕ್ಷಕ ಕೆ.ಟಿ ಶ್ರೀನಿವಾಸಮೂರ್ತಿ ಮನೆಗಳು, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಕೆ.ಟಿ.ಶ್ರೀನಿವಾಸಮೂರ್ತಿ ವಿರುದ್ಧ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಶ್ರೀನಿವಾಸಮೂರ್ತಿ 5ಕ್ಕೂ ಹೆಚ್ಚಿನ ಕಡೆಗಳಲ್ಲಿ ಅಬಕಾರಿ ಲೈಸೆನ್ಸ್ ಹೊಂದಿದ್ದು, ಐದು ಕಡೆ ಮದ್ಯದಂಗಡಿಗಳನ್ನು ಹೊಂದಿದ್ದಾರೆ. ಅಲ್ಲದೇ, ಬೆಂಗಳೂರಿನ ಅಂದ್ರಹಳ್ಳಿ, ಹೆಣ್ಣೂರು, ಕೊತ್ತನೂರು ಸೇರಿದಂತೆ ಹಲವೆಡೆ ನಿವೇಶನ, ಮನೆ ಹೊಂದಿರುವುದು ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | 225 ವಾರ್ಡ್ಗಳ ಕರಡು ನಕ್ಷೆ ವೆಬ್ಸೈಟ್ನಲ್ಲಿ ಪ್ರಕಟ
ಅಂದ್ರಹಳ್ಳಿಯಲ್ಲಿರುವ ನಿವಾಸ, ಹೆಣ್ಣೂರಿನಲ್ಲಿರುವ ಸಹೋದರಿ ನಿವಾಸ, ಪತ್ನಿ ಹೆಸರಿನಲ್ಲಿರುವ ಹೋಟೆಲ್ ಬೋರ್ಡಿಂಗ್ ಹೌಸ್ ಹಾಗೂ ತುಮಕೂರಿನಲ್ಲಿರುವ ಶ್ರೀನಿವಾಸ ಸಹೋದರನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿರುವ ದಾಖಲೆಗಳೂ ಪತ್ತೆಯಾಗಿದೆ. ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 17ರಂದು ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 48 ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದರು. ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ತುಮಕೂರು, ಬೀದರ್, ಧಾರವಾಡ, ದಾವಣಗೆರೆ, ರಾಯಚೂರು, ಮಡಿಕೇರಿಯಲ್ಲಿ 200 ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದು, ಕೊಟ್ಯಂತರ ರೂಪಾಯಿ ಜಪ್ತಿ ಮಾಡಿದ್ದರು. ಇದೀಗ ಲೋಕಾಯುಕ್ತ ಪೊಲೀಸರು ಮತ್ತೆ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರೆಸಿದ್ದು, ಒಂದು ವಾರದಲ್ಲಿ ಇದು ಎರಡನೇ ದಾಳಿಯಾಗಿದೆ.