ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆದು ಎರಡು ವರ್ಷಗಳು ಕಳೆದಿವೆ. ಹಿಂದಿನ ಬಿಜೆಪಿ ಸರ್ಕಾರ ಗ್ರೇಟರ್ ಬೆಂಗಳೂರು ಮಾಡುವುದಾಗಿ ತಿಳಿಸಿತ್ತು. ಅದರಂತೆ, ನಾಲ್ಕೈದು ಪಾಲಿಕೆಗಳನ್ನು ವಿಂಗಡಿಸಲು ನಿರ್ಧಾರ ಮಾಡಿತ್ತು. ಕೊರೊನಾ ಬಂದ ಬಳಿಕ ನಿರ್ಧಾರ ಕೈಬಿಡಲಾಗಿತ್ತು. ಇನ್ನೂ ಬಿಬಿಎಂಪಿ ಚುನಾವಣೆ ಯಾವಾಗ ನಡೆಯಲಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್ ಅವರು ಸರ್ಕಾರಕ್ಕೆ ಪ್ರಶ್ನಿಸಿದರು.
“ಬಿಬಿಎಂಪಿ ಮರುವಿಂಗಡಣೆಗೆ ಮುಂದಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲೇ, ಸಾರ್ವಜನಿಕ ವಲಯ ಹಾಗೂ ನಾನಾ ಸಂಘಟನೆಗಳಿಂದ ವಾರ್ಡ್ಗಳ ವಿಂಗಡಣೆ ಸಮರ್ಪಕವಾಗಿ ಆಗಿಲ್ಲವೆಂದು 3,200ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದ್ದವು. ಆದರೆ, ನಗರಾಭಿವೃದ್ಧಿ ಇಲಾಖೆ ಈ ಆಕ್ಷೇಪಣೆಗಳನ್ನು ಯಾವುದೇ ರೀತಿ ಪರಿಶೀಲನೆ ಮಾಡದೆ, ಮೂರು ದಿನಗಳಲ್ಲೇ 243 ವಾರ್ಡ್ ಮರುವಿಂಗಡಣೆ ಮಾಡಿ ಆದೇಶ ಹೊರಡಿಸಿದೆ” ಎಂದರು.
“ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ, ಕೋರ್ಟ್ 12 ವಾರಗಳ ಗಡುವು ನೀಡಿತ್ತು. ಸೆಪ್ಟೆಂಬರ್ 18ಕ್ಕೆ ಕೋರ್ಟ್ ನೀಡಿರುವ ಈ ಗಡುವು ಮುಕ್ತಾಯವಾಗಲಿದೆ. ಇದೀಗ, ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ 243 ವಾರ್ಡ್ಗಳ ಬದಲಿಗೆ 225ಕ್ಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈಗಲೂ ವಾರ್ಡ್ ಮರುವಿಂಗಡಣೆಗೆ 3,300 ಆಕ್ಷೇಪಣೆಗಳು ಬಂದಿವೆ. ಆದರೂ, 3,300 ಆಕ್ಷೇಪಣೆಗಳಿಗೆ ಸರ್ಕಾರ ಏನು ಉತ್ತರ ನೀಡಿದೆ” ಎಂದು ಪ್ರಶ್ನಿಸಿದರು.
ಎಲ್ಲಿಂದ ಎಷ್ಟು ದೂರು?
ಯಶವಂತಪುರ-1878, ಚೌಡೇಶ್ವರಿ ವಾರ್ಡ್ (ಯಲಹಂಕ)- 525, ಕಲ್ಕೆರೆ (ಕೆ.ಆರ್ ಪುರಂ) – 311, ಶಿವಾಜಿನಗರ- 109 ಆಕ್ಷೇಪಣೆಗಳು ಬಂದಿವೆ.
ಬ್ರ್ಯಾಂಡ್ ಬೆಂಗಳೂರಲ್ಲ, ಬೆಸ್ಟ್ ಬೆಂಗಳೂರು ಮಾಡಿ
“2 ವರ್ಷಗಳಿಂದ ಬಿಬಿಎಂಪಿ ಚುನಾವಣೆಯಾಗಿಲ್ಲ, ಕಾರ್ಪೋರೇಟರ್‌ಗಳೂ ಇಲ್ಲ. ಆದರೂ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. 3 ವರ್ಷ ಆದ್ರೂ ಚುನಾವಣೆ ನಿರ್ಧಾರವಾಗಿಲ್ಲ. ವಾರ್ಡ್ ಪಟ್ಟಿಗಳ ಅಂತಿಮಗೊಂಡಿಲ್ಲ. ಮೀಸಲಾತಿಯ ಓಬಿಸಿ ಪಟ್ಟಿ ಅಂತಿಮವಾಗಿಲ್ಲ. ಆಗಲೇ ಬ್ರ್ಯಾಂಡ್ ಬೆಂಗಳೂರು ಸಮಾವೇಶಕ್ಕೆ ತಯಾರಿ ಮಾಡಿಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನಾವರಣ
“70 ಸಾವಿರ ಸಲಹೆಗಳನ್ನು ಬೆಂಗಳೂರಿಗರು ಸರ್ಕಾರಕ್ಕೆ ಕೊಟ್ಟಿದ್ದಾರೆ. ಸಲಹೆಗಳನ್ನು ಹೇಗೆ ವರ್ಗೀಕರಿಸಿದ್ದೀರಿ. 10-15 ದಿನಗಳಲ್ಲಿ ಸಲಹೆಗಳನ್ನು ವರ್ಗೀಕರಿಸಲು ಹೇಗೆ ಸಾಧ್ಯ. ಇದು ಕಣ್ಣೊರೆಸುವ ತಂತ್ರ. ಬ್ರ್ಯಾಂಡ್ ಬೆಂಗಳೂರಲ್ಲ, ಮೊದಲು ಬೆಸ್ಟ್ ಬೆಂಗಳೂರು ಮಾಡಿ. ರಸ್ತೆಗುಂಡಿ, ಚರಂಡಿ ಸರಿ ಮಾಡಿಸಿ, ಈಗಿರುವ ಬೆಂಗಳೂರನ್ನು ಬೆಸ್ಟ್ ಮಾಡಿ ಸಾಕು. ಕ್ರಮೇಣ ಈ ಬೆಸ್ಟ್ ಬೆಂಗಳೂರು ತಾನಾಗಿಯೇ ಬ್ರ್ಯಾಂಡ್ ಬೆಂಗಳೂರು ಆಗುತ್ತದೆ. ನಿಮಗೆ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಅಷ್ಟೊಂದು ಇಚ್ಛಾಶಕ್ತಿ ಇದ್ರೆ, ಬದ್ಧತೆ ಇದ್ರೆ, ಈ ಕೂಡಲೇ ಬಿಬಿಎಂಪಿ ಚುನಾವಣೆಗಿರುವ ಅಡೆತಡೆ, ಸಮಸ್ಯೆ, ನೂನ್ಯತೆಗಳನ್ನ ನಿವಾರಿಸಿ. ಆದಷ್ಟು ಬೇಗ ಚುನಾಯಿತ ಪ್ರತಿನಿಧಿಗಳನ್ನು ನೇಮಿಸಿ” ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅಲ್ಲದೆ, ಆದಷ್ಟು ಬೇಗ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸದಿದ್ರೆ ವಿನೂತನ ಪ್ರತಿಭಟನೆ ಮಾಡುವುದಾಗಿ ಆಪ್ ಪಕ್ಷ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಟಿಜಿ ಮತ್ತು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಇದ್ದರು.