ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಟೀಕಿಸಿದ್ದಾರೆ. ಯುದ್ಧ ನಿಲ್ಲಿಸುವವರಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯೋಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ಪರೀಕ್ಷೆಯ ದೋಷಗಳ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿ ಹೊರಬೇಕು ಎಂದು ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜೂನ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ಒಂದು ದಿನದ ಬಳಿಕ ಭಾನುವಾರ ಛತ್ರಪತಿ ಸಂಭಾಜಿನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀಪ್ಕೆ, ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.
ಇದನ್ನು ಓದಿದ್ದೀರಾ? ದೀಪ್ಕೆ, ಇತರ ಸಿಜೆಪಿ ಸದಸ್ಯರ ಬಂಧಿಸಿದರೆ 42 ದಿನ ಉಪವಾಸ ಕೂರುತ್ತೇನೆ: ಸೋನಮ್ ವಾಂಗ್‌ಚುಕ್ ಎಚ್ಚರಿಕೆ
ಜಂತರ್ ಮಂತರ್ ಆಂದೋಲನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪ್ಕೆ, “ಪರೀಕ್ಷೆಯ ಅಧ್ವಾನಗಳ ನಡುವೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡುವಂತೆ ನೋಡಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಯವರ ಜವಾಬ್ದಾರಿ” ಎಂದು ಹೇಳಿದರು.
ಹಾಗೆಯೇ, “ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ತಡೆಯಲು ಪ್ರಧಾನಿ ಮೋದಿ ಅವರಿಗೆ ಸಾಧ್ಯವಾಗುವುದಾದರೆ ಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಿಲ್ಲವೇ” ಎಂದು ಪ್ರಶ್ನಿಸಿದರು.
“ಯುವಜನರು ಧ್ವನಿ ಎತ್ತಿದಾಗ ಮಾತ್ರ ಈ ವ್ಯವಸ್ಥೆಯು ಸರಿಯಾಗಿರುತ್ತದೆ. ಐದು ವರ್ಷಗಳಿಗೊಮ್ಮೆ ಮತ ಚಲಾಯಿಸುವುದು ರಾಜಕೀಯವಲ್ಲ. ಜನರು ತಾವು ಯಾರಿಗೆ ಮತ ಹಾಕಿದ್ದರೋ ಅವರನ್ನು ಪ್ರಶ್ನಿಸಬೇಕು. ಪ್ರಶ್ನೆಗಳನ್ನು ಕೇಳದ ಕಾರಣ, ಪ್ರಶ್ನೆಪತ್ರಿಕೆ ಸೋರಿಕೆ ನಡೆಯುತ್ತಲೇ ಇದೆ” ಎಂದು ಹೇಳಿದರು.
“ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಅಥವಾ ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲವಾದ್ದರಿಂದ ಅವರು ಬದುಕೇ ನಾಶವಾಗುತ್ತಿದೆ. ಹೀಗಾಗಿ ಪ್ರಧಾನ್ ರಾಜೀನಾಮೆ ನೀಡುವವರೆಗೂ ಆಂದೋಲನ ಮುಂದುವರಿಯುತ್ತದೆ” ಎಂದರು.
ಈ ವೇಳೆಯೇ ಸಿಜೆಪಿಯ ಚಳವಳಿ ಕೇವಲ 15 ದಿನಗಳಷ್ಟು ಹಳೆಯದಾಗಿರುವುದರಿಂದ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವ ಸಮಯ ಇದಲ್ಲ ಎಂದು ದೀಪ್ಕೆ ಈ ಸಂದರ್ಭದಲ್ಲೇ ಹೇಳಿದರು.





