ಜಗತ್ತಿಗೆ ಸಮಾನತೆ ತತ್ವ, ಸಾಮರಸ್ಯದ ಸುಸ್ಥಿರ ಸಮಾಜವನ್ನು ನಿರ್ಮಿಸುವ ಮಾರ್ಗದರ್ಶನ ನೀಡುವ ವಚನ ಸಾಹಿತ್ಯವನ್ನು ರಕ್ಷಿಸಿ ಯುವ ಪೀಳಿಗೆಗೆ ನೀಡಿರುವ ಶ್ರೇಯಸ್ಸು ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ನಾಗನಾಥ ಚಿಟ್ಮೆ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲೆ ಔರಾದ್ ಘಟಕದ ವತಿಯಿಂದ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಡಾ. ಫ. ಗು.ಹಳಕಟ್ಟಿ ಅವರ ಜಯಂತಿಯ ಪ್ರಯುಕ್ತ ಆಯೋಜಿಸಿದ “ಕನ್ನಡದ ಕಂಪು” ಕಾರ್ಯಕ್ರಮದಲ್ಲಿ ಮಾತನಾಡಿದರು.
“ತನ್ನ ಬದುಕಿನ ಸರ್ವಸ್ವವನ್ನು ತ್ಯಾಗ ಮಾಡಿ ವಚನ ಸಾಹಿತ್ಯವನ್ನು ರಕ್ಷಿಸಿದರು. ಬಸವಾದಿ ಶರಣರ ವಚನಗಳು ಇಂದಿಗೂ ಜೀವಂತವಾಗಿರಲು ಹಳಕಟ್ಟಿ ಅವರ ಅವಿರತ ಶ್ರಮವೇ ಕಾರಣ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕಸಾಪ ಅಧ್ಯಕ್ಷ ಡಾ ಶಾಲಿವಾನ ಉದಗಿರೆ ಮಾತನಾಡಿ, “ವಚನ ಸಾಹಿತ್ಯ ಸಂಶೋಧನೆಗೆ ನೂರು ವರ್ಷಗಳು ಪೂರೈಸಿದ್ದು, ಸರ್ಕಾರದಿಂದಲೇ ಡಾ.ಫ.ಗು ಹಳಕಟ್ಟಿಯವರ ಜನ್ಮದಿನಾಚರಣೆ ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಆಚರಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯ
ಕಸಾಪ ಮಾಧ್ಯಮ ಪ್ರತಿನಿಧಿ ಮಲ್ಲಪ್ಪಗೌಡ, ಬಸವೇಶ್ವರ ಡಿ.ಇಡ್ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ನೌಬಾದೆ, ಮಹದೇವ ಚಿಟಗಿರೆ, ಪ್ರವೀಣಕುಮಾರ ಕೋಳೆಕರ, ಪ್ರಕಾಶ ಬರದಾಪುರೆ, ಶಿವಕುಮಾರ ಪಾಟೀಲ, ಶಮಶೋದ್ದೀನ ಮುಲ್ಲಾ ಮತ್ತು ನೂರಾರು ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.