ಬೀದರ್ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳ ದಾಖಲಾತಿ, ತನಿಖೆ, ಸಂತ್ರಸ್ತರಿಗೆ ರಕ್ಷಣೆ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ ಬೌದ್ಧ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖಾಂತರ ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಒಕ್ಕೂಟದ ಪ್ರಮುಖರು ಮಾತನಾಡಿದರು.
ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ರಾಜ್ಯದ ಗೃಹ ಸಚಿವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು.
ಜಿಲ್ಲಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಮೇಲಿನ ಹಲ್ಲೆ, ಜಾತಿ ನಿಂದನೆ, ಕೊಲೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭೂಮಿ ಹಕ್ಕುಗಳ ಸಮಸ್ಯೆ ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ದಲಿತ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಭಾಲ್ಕಿ ತಾಲ್ಲೂಕಿನ ಜಿರ್ಗ್ಯಾಳ ಗ್ರಾಮದಲ್ಲಿ 2026ರ ಆ.13ರಂದು ರಾಜಕುಮಾರ್ ಶಿಂಧೆ ಹತ್ಯೆ ಸೇರಿದಂತೆ ಈ ಹಿಂದೆ ಕಮಲನಗರ ತಾಲ್ಲೂಕಿನ ಬೆಳಕುಣಿ (ಭೋ) ಗ್ರಾಮದಲ್ಲಿ 16 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಹುಮನಾಬಾದ್‌ನಲ್ಲಿ ದಲಿತ ವಿದ್ಯಾರ್ಥಿಯ ಮೇಲಿನ ಹಲ್ಲೆ, ಮಳಚಾಪುರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅಡ್ಡಿಪಡಿಸಿ ಕಲ್ಲುತೂರಾಟ ನಡೆಸಿದ ಘಟನೆ, ವಿಲಾಸಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಪ್ರಕರಣ, ತಳವಾಡದಲ್ಲಿ ಜಾತಿ ನಿಂದನೆ, ಚಳಕಾಪುರದಲ್ಲಿ ದಲಿತ ಕಾಲೋನಿಗೆ ನುಗ್ಗಿ ಹಲ್ಲೆ, ರಾಚಪ್ಪಗೌಡಗಾಂವ್‌ನಲ್ಲಿ ದಲಿತ ವೃದ್ಧೆಯ ಮೇಲಿನ ಹಲ್ಲೆ ಹಾಗೂ ಔರಾದ ತಾಲ್ಲೂಕಿನ ರಕ್ಷ್ಯಾಳ (ಕೆ) ಗ್ರಾಮದಲ್ಲಿ ಸುಮಿತಕುಮಾರ್ ಮೇಲಿನ ಹಲ್ಲೆ ಮತ್ತು ನಂತರದ ಸಾವು ಸೇರಿದಂತೆ ಹಲವು ಪ್ರಕರಣಗಳನ್ನು ಮರುಪರಿಶೀಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಏ.21, 2025ರಂದು ಬೀದರ್‌ನಲ್ಲಿ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿರುವ ಸಂಘಟನೆ, ಈ ಪ್ರಕರಣದಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ನಂತರ ತೆಗೆದುಹಾಕಿ, ರವಿ ಭೂಸಂಡೆ ಅವರ ವಿರುದ್ಧವೇ ಪ್ರತಿದೂರು ದಾಖಲಿಸಿರುವುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಏ.29, 2025ರಂದು ಖುದಾವಂದಾಪುರದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ ಮತ್ತು ಹಲ್ಲೆ ನಡೆದಿದ್ದು, ಈ ಪ್ರಕರಣದಲ್ಲಿ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿರುವುದನ್ನು ಪರಿಶೀಲಿಸಬೇಕು. ಇದೇ ರೀತಿ ಬೆಳಕುಣಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನೂ ಮರುಪರಿಶೀಲಿಸಿ, ಸುಳ್ಳು ಪ್ರಕರಣಗಳಾಗಿದ್ದರೆ ಕಾನೂನುಬದ್ಧವಾಗಿ ಹಿಂಪಡೆಯಬೇಕು. 2015ರಲ್ಲಿ ಭಾಲ್ಕಿ ಪಟ್ಟಣದ ಕೆರೆಯಲ್ಲಿದ್ದ ಬುದ್ಧನ ಮೂರ್ತಿಯನ್ನು ತೆರವುಗೊಳಿಸಿದ ಘಟನೆ ಹಾಗೂ ಈ ಕುರಿತು ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು.
2025ರ ಜ.16ರಂದು ಬೀದರ್‌ನ ಎಸ್‌ಬಿಐ ಎಟಿಎಂ ಸಮೀಪ ನಡೆದ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನದ ಬಳಿಕ ಮೃತಪಟ್ಟ ಎಸ್‌ಬಿಐ ಸಿಬ್ಬಂದಿಯ ಘಟನಾ ಸ್ಥಳದಲ್ಲಿ ಪೊಲೀಸರು ಸಂಭ್ರಮಾಚರಣೆ ನಡೆಸಿದ್ದಾರೆಂಬ ಆರೋಪದ ಬಗ್ಗೆಯೂ ಸ್ವತಂತ್ರ ಪರಿಶೀಲನೆ ನಡೆಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಎಸಿಪಿ ಮತ್ತು ಡಿವೈಎಸ್‌ಪಿ ನೇತೃತ್ವದಲ್ಲಿ ರಾಜ್ಯಮಟ್ಟದ ತನಿಖಾ ಸಮಿತಿ ರಚಿಸಿ, ಕಳೆದ ಐದು ವರ್ಷಗಳ ಪ್ರಮುಖ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳು, ಕೊಲೆ, ಹಲ್ಲೆ, ಜಾತಿ ನಿಂದನೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭೂಮಿ ವಿವಾದಗಳು ಹಾಗೂ ಮೂಲ ಪ್ರಕರಣಗಳ ಜೊತೆಗೆ ದಾಖಲಾಗಿರುವ ಪ್ರತಿಪ್ರಕರಣಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.
ಇಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರ ಕಾರ್ಯವೈಖರಿ, ಸಂಬಂಧಪಟ್ಟ ಪಿಎಸ್‌ಐ, ಎಎಸ್‌ಐ ಹಾಗೂ ಭಾಲ್ಕಿ ಪೊಲೀಸ್ ವೃತ್ತದ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆಯೂ ತನಿಖೆ ನಡೆಸಬೇಕು. ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾದರೆ ಅಮಾನತು ಸೇರಿದಂತೆ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತರು ಮತ್ತು ಸಾಕ್ಷಿಗಳಿಗೆ ವಿಶೇಷ ರಕ್ಷಣೆ ಒದಗಿಸಬೇಕು, ದೌರ್ಜನ್ಯ ಪೀಡಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರ ಕೈಗೊಂಡ ಕ್ರಮಗಳ ಕುರಿತು 30 ದಿನಗಳೊಳಗೆ ಲಿಖಿತ ಕ್ರಿಯಾ ವರದಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ : ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ
ಪ್ರತಿಭಟನೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ರಾಜಕುಮಾರ ಮೂಲಭಾರತಿ, ಅಧ್ಯಕ್ಷ ವಿನೋದ ರತ್ನಾಕರ್ ಸೇರಿದಂತೆ ಪ್ರಮುಖರಾದ ಅಂಕುಶ ಗೋಖಲೆ, ವೈಜಿನಾಥ ಸೂರ್ಯವಂಶಿ, ಕಪಿಲ್ ಗೋಡಬೋಲೆ, ರವಿಕುಮಾರ ವಾಘಮಾರೆ, ಗೌತಮ ಚವ್ಹಾಣ, ಪ್ರದೀಪ ಭಾವಿಕಟ್ಟಿ, ರಾಜಕುಮಾರ ಸಿಂಧೆ, ಜ್ಞಾನೇಶ್ವರ ಸಿಂಗಾರೆ, ರಾಹುಲ ಖಂದಾರೆ, ರಾಹುಲ ದಲಾಲೆ, ಅಂಬಾದಾಸ ಚಕ್ರವರ್ತಿ, ಶಕ್ತಿಕಾಂತ ಭಾವಿದೊಡ್ಡಿ, ಮಹೇಶ ಭೋಲಾ, ರವಿ ಭೂಸಂಡೆ, ರಾಜಕುಮಾರ ಗುನಳ್ಳಿ, ಪ್ರದೀಪ ಹೆಗಡೆ, ಅಂಬರೀಶ ಕುದರೆ, ಮಾರುತಿ ಸೂರ್ಯವಂಶಿ, ಅಭಿ ಕಾಳೆ, ಸಂತೋಷ ಎಣಕೂರ, ಪ್ರಕಾಶ ಹಳ್ಳಿಖೇಡ, ಮಲ್ಲಿಕಾರ್ಜುನ ಕೌಠಾ, ಹರ್ಷಿತ ದಾಂಡೇಕರ್, ಜಗನ್ನಾಥ ಹೊನ್ನಾ, ವಿಲಾಸ ಎ. ಮೋರೆ, ಪ್ರವೀಣ ಕರಂಜೆ, ವೈಜಿನಾಥ ಸಿಂಧೆ, ಪ್ರಕಾಶ ರಾವಣ , ದಿಲೀಪ ವರ್ಮಾ ಹಾಗೂ ಗೌತಮ ಕಾಂಬಳೆಮ ಗೌತಮ ಬಗದಲ್, ಅಂಬಾದಾಸ ಸೋನಿ, ಸ್ವಾಮಿದಾಸ ಕೆಂಪೇನೋರ್, ರಜನೀಶ ಮದಾಳೆ, ಸಿದ್ಧಾರ್ಥ ಬಾನೆ, ಬಸವರಾಜ ಮೇತ್ರೆ, ಗೌತಮ ಡಾಕುಳಗಿ, ಅಜಯ ದೀನೆ ಸೇರಿದಂತೆ ಒಕ್ಕೂಟದ ನೂರಾರು ಮಹಿಳೆಯರು, ಯುವಕರು ಪ್ರಮುಖರು ಭಾಗವಹಿಸಿದ್ದರು.





