ವಚನ ಕಲ್ಯಾಣ | ಕೊಲ್ಲದಿರ್ಪುದೆ ಧರ್ಮ

Date:

ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ. ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ, ದೇವರಾಯ ಸೊಡ್ಡಳಾ.”

- Advertisement -

12ನೇ ಶತಮಾನದ ಶರಣ ಚಳವಳಿಯ 770 ಅಮರ ಗಣಂಗಳಲ್ಲಿ ವಚನಕಾರ ಸೊಡ್ಡಳ ಪ್ರಮುಖರು. ಅನುಭವ ಮಂಟಪದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುತ್ತಿದ್ದ ಸೊಡ್ಡಳ ಬಸವಣ್ಣನವರ ಸಮಕಾಲೀನವರು. ಸತ್ಯ, ದಯೆ, ಅಹಿಂಸೆ, ನಿಷ್ಠೆ ಮತ್ತು ಮಾನವೀಯತೆ ಹೃದಯದ ವಚನಕಾರ. ನೀತಿಬೋಧನೆ, ಜೀವನ ನಿಷ್ಠೆ, ಭಕ್ತಿ ಹಾಗೂ ಕಾಯಕ ಕುರಿತಾದ ಈತನ 108 ವಚನಗಳು ಲಭ್ಯವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಬಸವಣ್ಣನವರ ನೇತ್ರತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಕಾಯಕ ಚಳವಳಿ ಪ್ರಭಾವ ದೇಶ-ವಿದೇಶಗಳಿಗೂ ವ್ಯಾಪಿಸಿತು. ಸಮ ಸಮಾಜ ಕಟ್ಟುವ ಶರಣರ ಕರೆಗೆ ಜಗತ್ತಿನ ಎಲ್ಲ ಮಾರ್ಗಗಳು ಕಲ್ಯಾಣದಲ್ಲಿ ಒಗ್ಗೂಡಿದ್ದು ಐತಿಹಾಸಿಕ ದಾಖಲೆಯೇ ಸರಿ. ಶರಣ ಸೊಡ್ಡಳ ಬಾಚರಸನು ಸೌರಾಷ್ಟ್ರ ಸೋಮೇಶ್ವರನ ಭಕ್ತನಾಗಿದ್ದನು. ಬಿಜ್ಜಳ ದೊರೆಯ ಅರಮನೆಯಲ್ಲಿ ಧಾನ್ಯ ಅಳೆದುಕೊಡುವ ಹಾಗೂ ಲೆಕ್ಕ ಬರೆದಿಡುವ ಕಾಯಕ ಮಾಡುತ್ತಿದ್ದ ಬಾಚರಸ ಬಸವಣ್ಣನವರ ಆಪ್ತರಾಗಿದ್ದರು.

ಸೊಡ್ಡಳ ಬಾಚರಸನು ಸೃಷ್ಟಿಯ ಮೂಲತತ್ತ್ವವನ್ನು ಲಿಂಗದ ಮುಖಾಂತರ ವಿವರಿಸುತ್ತಾನೆ. ಈ ಜಗತ್ತಿನ ಸಕಲ ಜೀವಜಾಲಕ್ಕೂ ಒಬ್ಬ ಸೃಷ್ಟಿಕರ್ತ ಇದ್ದೇ ಇರುತ್ತಾನೆ. ಆದರೆ ಆ ಸೃಷ್ಟಿಕರ್ತ ಲಿಂಗದೇವನ ರೂಪದಲ್ಲಿದ್ದಾನೆ ಎಂಬುದು ಆತನ ಅಭಿಪ್ರಾಯ. ದೇವರ ನಾಮಗಳು ಹಲವು, ಆದರೆ ಪರಮಸತ್ಯ ಒಂದೇ ಆಗಿದೆ. ದೇವರನ್ನು ದೇಹ ಮಂದಿರಕ್ಕೆ ತಂದು ಪೂಜಿಸಿಕೊಳ್ಳುವಂತೆ ಹೇಳುವುದು ಶರಣ ತತ್ವವಾಗಿದೆ.

ಬಸವಣ್ಣನವರು ʼಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ ಎಂಬ ತತ್ವದಲ್ಲಿ ಸಮಾಜದ ಪರಿಕಲ್ಪನೆ ಇದೆ. ಇಲ್ಲಿ ಜಂಗಮ ಎಂಬುದು ಸಮಾಜ, ಅರಿವು, ಜೀವಪರ ಎಂಬರ್ಥ. ಶರಣ ಚಿಂತನೆಯಲ್ಲಿ ಸ್ಥಾವರ ಸ್ಥಾಪನೆಗಿಂತ ತತ್ವ ಆಚರಣೆಗೆ ಹೆಚ್ಚು ಮಹತ್ವವಿದೆ. ಗುರು, ಲಿಂಗ ಹಾಗೂ ಜಂಗಮದಲ್ಲಿ ನಿಷ್ಠೆ ಮತ್ತು ಭಕ್ತಿ ಹೊಂದಿರುವವನೇ ನಿಜವಾದ ಭಕ್ತ. ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದರಿಂದ ಶ್ರೇಷ್ಠತೆ ಬರುವುದಿಲ್ಲ, ಭಕ್ತಿ, ನಿಷ್ಠೆಯು ಬದುಕಿನ ನಡೆ-ನುಡಿ ಸಿದ್ಧಾಂತದಲ್ಲಿ ಪ್ರತಿಫಲಿಸಬೇಕು ಎಂಬುದನ್ನು ಶರಣರು ಸಾರಿ ಹೇಳಿದ್ದಾರೆ.

ಈ ಮೇಲಿನ ವಚನದಲ್ಲಿ ‘ಕೊಲ್ಲದಿರ್ಪುದೆ ಧರ್ಮ’ ಎಂಬುದು ಅತ್ಯಂತ ಮಹತ್ವದ ಸಂದೇಶ. ಶರಣರದು ಮಾನವೀತೆಯ ಹೃದಯ, ಅವರ ದೃಷ್ಟಿಯಲ್ಲಿ ಧರ್ಮ ಎಂದರೆ ಮನುಷ್ಯತ್ವ ಎಂದಾಗಿದೆ. ಜಾತಿ, ಮತ, ಭೇದ ಸೇರಿದಂತೆ ವರ್ಗ, ವರ್ಣ, ಲಿಂಗ ತಾರತಮ್ಯ ಹೊಂದಿರುವ ಧರ್ಮದಲ್ಲಿ ಮಾನವೀಯತೆ ನಿರೀಕ್ಷಿಸಲು ಸಾಧ್ಯವೇ ಎಂದು ಶರಣರು ಪ್ರಶ್ನಿಸುತ್ತಾರೆ. ಸಮಾನತೆ ಎಂದರೆ ಎಲ್ಲ ಮನುಷ್ಯರನ್ನು ಅಂತಃಕರಣದಿಂದ ಗೌರವಿಸಿ, ಪ್ರೀತಿಸುವುದು ಎಂದಾಗಿದೆ.

ಧರ್ಮಕ್ಕಿಂತ ಮನುಷ್ಯತ್ವ ಮೊದಲು, ಒಂದು ಜೀವ ಇನ್ನೊಂದು ಜೀವಕ್ಕೆ ಹಿಂಸೆ, ಕೊಲೆ, ದಬ್ಬಾಳಿಕೆ ಮಾಡುವುದು ಅಧರ್ಮಕ್ಕೆ ಸಮ. ಧರ್ಮದ ಹೆಸರಿನಲ್ಲಿ ಪ್ರಾಣ ಹಿಂಸೆಗೆ ಅವಕಾಶ ನೀಡಬಾರದು. ಈ ವಿಚಾರದಲ್ಲಿ ಶರಣರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮವೆಂದರೆ ಕೇವಲ ಮನುಷ್ಯರನ್ನು ಒಳಿತು ಬಯಸು, ಗೌರವಿಸಿ, ಪ್ರೀತಿಸು ಎಂದಷ್ಟೇ ಹೇಳಲಿಲ್ಲ. ಜಗತ್ತಿನ ಸಕಲ ಜೀವರಾಶಿಯನ್ನು ಲೇಸು ಬಯಸು ಎಂಬುದು ಅವರ ಮನುಷ್ಯತ್ವ, ಸಾಮಾಜಿಕ ಕಾಳಜಿ. ಇದೇ ನೈಜ ಧರ್ಮ ಎಂದು ಶರಣರು ಮಾರ್ಮಿಕವಾಗಿ ತಿಳಿಸಿದ್ದಾರೆ.

ಬಸವಾದಿ ಶರಣರ ಚಿಂತನೆಯ ಕೇಂದ್ರದಲ್ಲಿದ್ದದ್ದು ಜೀವಪರ, ಜನಪರ ಕಾಳಜಿ. ಸಕಲರಿಗೂ ಒಳಿತನ್ನೇ ಬಯಸುವ ಮನೋಭಾವವೇ ನಿಜವಾದ ಮಾನವೀಯತೆ. ಅದಕ್ಕಾಗಿಯೇ ಶರಣರ ಚಿಂತನೆಗಳಲ್ಲಿ ʼದಯವೇ ಧರ್ಮದ ಮೂಲʼ ಎಂಬ ಆಶಯಕ್ಕೆ ವಿಶೇಷ ಸ್ಥಾನ ದೊರೆತಿದೆ. ಅಲ್ಲದೆ ತನ್ನ ಧರ್ಮವೇ ಶ್ರೇಷ್ಠ, ಉಳಿದ ಧರ್ಮಗಳು ಕನಿಷ್ಠ ಎಂಬ ವ್ಯಸನದಿಂದಲೂ ಹೊರಬರಬೇಕಿದೆ. ʼಕೊಂದವರುಳಿವರೆ ಕೂಡಲಸಂಗಮದೇವಾʼ ಎಂಬ ಬಸವಣ್ಣನವರ ಪ್ರಶ್ನೆ ಜಗತ್ತಿನ ಪರಮಸತ್ಯದ ನುಡಿಯಾಗಿದೆ. ಇಲ್ಲಿ ʼಕೊಂದವರುʼ ಎಂದರೆ ವ್ಯಕ್ತಿ ಕೊಲೆ ಅಲ್ಲದೆ ವಿಚಾರದ ಕೊಲೆಯನ್ನು ಶರಣರು ತೀವ್ರವಾಗಿ ಖಂಡಿಸಿದರು ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ.

ಧರ್ಮ ಎಂದರೆ ಕೇವಲ ಆಚರಣೆ, ಸಂಪ್ರದಾಯ ಅಥವಾ ವಿಧಿವಿಧಾನವಲ್ಲ. ಅದು ಜೀವದ ಬಗ್ಗೆ ಕಾಳಜಿ ಹೊಂದಿರುವ ಮನಸ್ಸಾಗಿರಬೇಕು. ಮತ್ತೊಂದು ಜೀವಕ್ಕೆ ನೋವುಂಟುಮಾಡದಿರುವುದು, ಹಿಂಸೆಯಿಂದ ದೂರವಿರುವುದು ಮತ್ತು ಎಲ್ಲ ಜೀವಿಗಳನ್ನೂ ಸಮಾನವಾಗಿ ಕಾಣುವುದು ಧರ್ಮದ ನಿಜವಾದ ಅರ್ಥ. ಅಲ್ಲದೆ ಅನ್ಯಾಯ, ವಂಚನೆ, ಶೋಷಣೆ ಅಥವಾ ಅಧರ್ಮದ ಮೂಲಕ ದೊರೆತ ಸಂಪತ್ತು, ಅಧಿಕಾರ ಮತ್ತು ಸೌಲಭ್ಯಗಳನ್ನು ಒಪ್ಪಿಕೊಳ್ಳದಿರುವುದೇ ನಿಜವಾದ ನಿಯಮವಾಗಿದೆ ಎಂದು ಸೊಡ್ಡಳ ಬಾಚರಸ ‘ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ’ ಎಂದು ಹೇಳುತ್ತಾನೆ.

ವ್ರತವೆಂದರೆ ಕೇವಲ ದೇಹಕ್ಕೆ ವಿಧಿಸುವ ನಿಯಮವಲ್ಲ. ಮನಸ್ಸಿನ ಆಸೆ-ಆಮಿಷಗಳನ್ನು ನಿಯಂತ್ರಿಸಿ, ಸತ್ಯ ಮತ್ತು ಸದಾಚಾರದ ಹಾದಿಯಲ್ಲಿ ನಡೆಯುವುದು ಅದರ ನಿಜವಾದ ಆಶಯ. ಧರ್ಮ, ನೇಮ ಮತ್ತು ವ್ರತಗಳ ನಿಜವಾದ ಅರ್ಥವನ್ನು ಬದುಕಿನ ನಡವಳಿಕೆಯೊಂದಿಗೆ ಜೋಡಿಸುತ್ತದೆ. ಕೊಲ್ಲದಿರುವುದು ಧರ್ಮ, ಅಧರ್ಮವನ್ನು ತಿರಸ್ಕರಿಸುವುದು ನೇಮ, ಆಸೆ-ಆಮಿಷಗಳಿಂದ ಮುಕ್ತವಾಗಿರುವುದು ವ್ರತ. ಇವೆಲ್ಲವನ್ನು ಅಳವಡಿಸಿಕೊಂಡ ಬದುಕೇ ಸತ್ಯದ ಮಾರ್ಗವಾಗಿದೆ.

ಮನುಷ್ಯನು ಸತ್ಯದ ಹಾದಿಯಲ್ಲಿ ನಡೆದರೆ ತನ್ನ ಬದುಕನ್ನು ಮಾತ್ರವಲ್ಲ, ಸಮಾಜವನ್ನೂ ಬದಲಾಯಿಸಬಲ್ಲ. ಅನ್ಯಾಯದ ಮೂಲಕ ಬಂದ ಸಂಪತ್ತು ಬದುಕಿನ ಕೇಡಿಗೆ ಕಾರಣವಾಗುವುದು, ಹೀಗಾಗಿ ಅದನ್ನು ತಿರಸ್ಕರಿಸಬೇಕು ಎನ್ನುತ್ತಾರೆ. ಧರ್ಮ ಆಚರಣೆಯಲ್ಲಿ ಅಲ್ಲ, ದಯೆ, ಕರುಣೆ, ಪ್ರೀತಿಯಲ್ಲಿದೆ. ನೇಮ ಮಾತಿನಲ್ಲಿ ಇಲ್ಲ, ನಡೆ-ನುಡಿಯಲ್ಲಿ ಇರಬೇಕು. ವ್ರತ ಎಂಬುದು ಬಾಹ್ಯ ಪ್ರದರ್ಶನವಾಗಬಾರದು, ಅಂತರಂಗ ಶುದ್ಧಿಯಾಗಿರಬೇಕು. ದಯೆ ಮತ್ತು ಮಾನವೀಯತೆ ಬದುಕಿನ ಭಾಗವಾಗಿಸಿಕೊಂಡಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ.

ಎನ್ನನೆತ್ತಿಕೊಂಡನಯ್ಯಾ ಸಂಗನಬಸವಣ್ಣನು.ಎನ್ನ ಮುದ್ದಾಡಿಸಿದನಯ್ಯಾ ಚನ್ನಬಸವಣ್ಣನು.ಎನಗೆ ಪ್ರಸಾದವನುಣಕಲಿಸಿದನಯ್ಯಾ ಮರುಳಶಂಕರದೇವರು.ಎನ್ನ ಸಲಹಿದನಯ್ಯಾ ಪ್ರಭುದೇವರು.ಎನಗೆ ಅರುಹಕೊಟ್ಟನಯ್ಯಾ ಸಿದ್ಧರಾಮಯ್ಯನು.ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯಾ,ಏಕಾಂತವೀರ ಸೊಡ್ಡಳಾ.

ಸೊಡ್ಡಳ ಬಾಚರಸ ಬಸವಣ್ಣ,ಅಲ್ಲಮ, ಸಿದ್ಧರಾಮ, ಚನ್ನಬಸವಣ್ಣನವರ ಸಮಕಾಲೀನ ಶರಣನಾಗಿದ್ದನು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿ ನೋಡಬಹುದು. ಸಕಲ ಶರಣ ಸಂಕುಲದಲ್ಲಿ ಅನುಭಾವಿಯಾಗಿ ಬದುಕಿರುವ ಬಗ್ಗೆ ಆತನ ಎಲ್ಲ ಶರಣರನ್ನು ಹೀಗೆ ಸ್ಮರಿಸುತ್ತಾನೆ.

ಶರಣರು ಪರಧನ, ಪರದೈವ ಹಾಗೂ ಪರಸ್ತ್ರೀ ಎಂಬ ಮೋಹದಿಂದ ಮುಕ್ತಿಯಾಗುವಂತೆ ಕರೆ ನೀಡಿದ್ದಾರೆ. ಅಂದರೆ ಭಕ್ತಿ, ಕಾಯಕ ಹಾಗೂ ದಾಸೋಹಗೈಯುವ ಮನಸ್ಸು ನಿರ್ಮಲವಾಗಿರಬೇಕು. ʼಭಕ್ತನಾದಡೆ ತನುಮನದಾಸೆಯಳಿದುಳಿದಿರಬೇಕು.ಮಹೇಶ್ವರನಾದಡೆ ಪರಧನ ಪರಚಿಂತೆ ಪರಾಂಗನೆಯರೆಡೆಯಳಿದಿರಬೇಕುʼ ಎಂದು ಸೊಡ್ಡಳ ಬಾಚರಸ ನಿರ್ದೇಶಿಸುತ್ತಾರೆ. ತನುಮನದಾಸೆ, ಪರಧನ, ಪರಚಿಂತೆ, ಪರಾಂಗನೆಯಿಂದ ಮುಕ್ತಿ ಹೊಂದಿ ಕಾಯಕ ಜೀವಿಯಾಗಿ ಬದುಕು ಎಂಬುದು ಸೊಡ್ಡಳ ಬಾಚರಸರ ತತ್ವ.

ಮನುಷ್ಯನೊಳಗೆ ಕೆಟ್ಟ-ಒಳ್ಳೆಯ ಗುಣಗಳು ಇರುವುದು ಸಹಜ. ಆದರೆ, ಕೆಟ್ಟದನ್ನೇ ಬದುಕಿನ ವೃತ್ತಿಯಾಗಿಸಿಕೊಂಡರೆ ಬದುಕು ವಿನಾಶದ ಹಾದಿ ಹಿಡಿಯುತ್ತದೆ. ಇಲ್ಲಿ ಪಾಪ ಎಂಬುದು ಸಮಾಜವಿರೋಧಿ ಎಂಬರ್ಥ. ಪಾಪದ ಬೀಜ ಬಿತ್ತುತ್ತಾ, ಕೋಪ ಬೆಳೆಸುತ್ತಲೇ ಹೋದರೆ ಉತ್ತಮ ಬದುಕು ಎನಿಸಿಕೊಳ್ಳುವುದಿಲ್ಲ ಎನ್ನುವ ಸೊಡ್ಡಳ ʼಪಾಪವನೆ ಬಿತ್ತಿ, ಕೋಪವನೆ ಬೆಳೆದು, ಈ ಪರಿಯಲಿ ದಿನಂಗಳು ಹೋದವಲ್ಲ. ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ? ಎಂದು ಪ್ರಶ್ನಿಸುತ್ತಾರೆ.

ಇದನ್ನೂ ಓದಿ : ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

“ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು? ಪುರಾತನರ ವಚನ ವಚಿಸಿದಲ್ಲಿ ಫಲವೇನು ? ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ. ಮೂಗಿಲ್ಲದವರು ಕನ್ನಡಿಯ ನೋಡಿದಡೆ, ಶೃಂಗಾರ ಮೆರೆವುದೆ, ದೇವರಾಯ ಸೊಡ್ಡಳಾ ? ಎನ್ನವುದರಲ್ಲಿ ಮನುಷ್ಯನ ನಡೆ-ನುಡಿ ಭಾವ ಶುದ್ಧಿಯಾಗಿರಬೇಕು ಎಂದು ತಿಳಿಸುತ್ತಾರೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...