ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವಕೀಲ ಕೆ ಎನ್ ಜಗದೀಶ್ ಅವರನ್ನು ಬೆಂಗಳೂರು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸ್ವತಃ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ವಕೀಲ ಜಗದೀಶ್, “ಇಂದು ಕೊಡಿಗೇಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಹತ್ಯಾಖಂಡ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ? ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಾಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ” ಎಂದು ತಿಳಿಸಿದ್ದಾರೆ.
ಜಾತಿ ನಿಂದನೆ ಪ್ರಕರಣ ಸಂಬಂಧ ವಕೀಲ ಜಗದೀಶ್ ವಿರುದ್ಧ ಮಂಜುನಾಥ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಅವರ ಮನೆಯಿಂದಲೇ ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!
ಇದೇ ಪ್ರಕರಣದ ಸಂಬಂಧ ಬೆಂಗಳೂರು ಪೊಲೀಸರು ಆಗಸ್ಟ್ 21ರಂದು ಜಗದೀಶ್ ಮನೆಗೆ ತೆರಳಿ ಬರಿಗೈಯಲ್ಲಿ ವಾಪಾಸ್ಸಾಗಿದ್ದರು. ಮನೆ ಬಾಗಿಲು ತೆರೆಯದೇ ಸತಾಯಿಸಿದ್ದ ಜಗದೀಶ್ ಅವರನ್ನು ಇಂದು ಬಂಧಿಸಲಾಗಿದೆ. ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿದ್ದ ನಂತರ ವಕೀಲ ಜಗದೀಶ್ ಅವರು, ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಲ್ಲದೇ, ಸೌಜನ್ಯಳಿಗೆ ನ್ಯಾಯ ಬೇಕು. ಧರ್ಮಸ್ಥಳದಲ್ಲಿ ಹತ್ಯಾಕಾಂಡವೇ ನಡೆದಿದೆ ಎಂದು ಆರೋಪಿಸುತ್ತಾ, ವಿಡಿಯೋಗಳನ್ನು ಹರಿಯಬಿಡುತ್ತಿದ್ದರು. ಸದ್ಯ ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರು ಕೊಡಿಗೇಹಳ್ಳಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಅವರು ಇತ್ತೀಚೆಗೆ ವಿಧಾನಸಭೆಯಲ್ಲಿ ಲಾಯರ್ ಜಗದೀಶ್ ವಿರುದ್ದ ಹಕ್ಕುಚ್ಯುತಿ ಮಂಡಿಸಿದ್ದರು. ಧರ್ಮಸ್ಥಳ ಸೇರಿದಂತೆ ಇತರ ಕೆಲ ಪ್ರಕರಣಗಳಲ್ಲಿ ಲಾಯರ್ ಜಗದೀಶ್ ತನ್ನ ವಿರುದ್ದ ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರವಾಗುತ್ತಿದೆ ಎಂದು ಮಾತನಾಡುವುದು ನನ್ನ ಹಕ್ಕು. ಆದರೆ ವಕೀಲ ಜಗದೀಶ್ ಆಧಾರ ರಹಿತ ಆರೋಪ, ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಸ್ಆರ್ ವಿಶ್ವನಾಥ್ ಹಕ್ಕುಚ್ಯುತಿ ಮಂಡಿಸಿದ್ದರು.
