ಹಾಸನ ಜಿಲ್ಲೆಯ ಸಕಲೇಶಪುರದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಟ್ಲ ಬೆಟ್ಟದಲ್ಲಿ ಬೈಕ್‌ನಲ್ಲಿ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ನಾಲ್ವರು ಪಿಕಪ್ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟದಲ್ಲಿ ಜೂನ್ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೊಕ್ಕೊಟ್ಟಿನ ಪ್ರವಾಸಿಗರಾದ ಭುವಿತ್ ಪೂಜಾರಿ ಹಾಗೂ ಎಂಟು ಸಂಗಡಿಗರು ತಮ್ಮ ಬೈಕ್ ಗಳಲ್ಲಿ ಪಟ್ಲ ಬೆಟ್ಟಕ್ಕೆ ಹೋಗಿ, ಹಿಂದಿರುಗಿ ಬರುವಾಗ ಈ ಘಟನೆ ನಡೆದಿದೆ.
This is horrible.
There is no safety for travelers in Chikkamagaluru?@112chikkmagalur @ckmpolice Please take immediate action.@alokkumar6994 @DgpKarnataka @KarnatakaCops pic.twitter.com/kmOuvhdz7K— The Tuluve🚩 (@TheTuluve) June 24, 2024
ಬೈಕ್ ಸವಾರರಿಗೆ ಬಾಡಿಗೆ ಜೀಪುಗಳ ಚಾಲಕರು ಹಾಗೂ ಮಾಲೀಕರ ತಂಡ ಬೈಕ್‌ಗಳಲ್ಲಿ ಹೋಗಬೇಡಿ ಅಂದಿದ್ದಾರೆ. ಬೆಟ್ಟಕ್ಕೆ ತೆರಳಬೇಕಾದರೆ ಬಾಡಿಗೆ ಜೀಪಿನಲ್ಲೇ ಹೋಗಬೇಕು. ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವರು ಏಕಾಏಕಿ ಬೈಕ್ ಸವಾರ ಭುವಿತ್ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಘಟನೆಯು ಭುವಿತ್ ಪೂಜಾರಿಯವರು ಹೆಲ್ಮೆಟ್‌ನಲ್ಲಿ ಧರಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ವೈರಲಾಗಿದೆ.
ಹಲ್ಲೆಗೊಳಗಾದ ಭುವಿತ್ ಪೂಜಾರಿಯವರು ನೀಡಿದ ದೂರಿನ ಆಧಾರದಲ್ಲಿ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಪತ್ರಕರ್ತರು ಪಟ್ಲ ಬೆಟ್ಟ ನೋಡಲು ವಾಹನ ನಿಲ್ಲಿಸಿ, ಬೆಟ್ಟ ನೋಡಿ ಹಿಂದಿರುಗಿ ಬರುವಷ್ಟರಲ್ಲಿ ಎರಡು ವಾಹನದ ಚಕ್ರವನ್ನು ಆಯುಧದಿಂದ ಕತ್ತರಿಸಿ ವಾಹನವನ್ನು ಜಖಂ ಮಾಡಲಾಗಿತ್ತು.
ಈ ಊರಿನ ಕೆಲವು ಕಿಡಿಗೇಡಿಗಳು ನಿರಂತರವಾಗಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸದಿದ್ದರೆ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವುದು ಖಂಡಿತ ಎಂಬ ಮಾತುಗಳು ಕೇಳಿಬಂದಿವೆ.
ಹೊರಗಿನ ವಾಹನ ಬಳಸದಂತೆ ಬೋರ್ಡ್ ಹಾಕಿರುವ ಗ್ರಾಮ ಪಂಚಾಯತ್
ವನಗೂರು ಗ್ರಾಮ ಪಂಚಾಯತ್‌ನ ಪಿಡಿಓ ಹಾಗೂ ಅಧ್ಯಕ್ಷರ ಹೆಸರಿನಲ್ಲಿ ಪಟ್ಲ ಬೆಟ್ಟಕ್ಕೆ ತೆರಳುವ ರಸ್ತೆಯ ಪ್ರವೇಶದ್ವಾರದಲ್ಲಿ ಹೊರಗಿನ ವಾಹನ ಬಳಸದಂತೆ ಬೋರ್ಡ್ ಹಾಕಲಾಗಿದೆ.
ಈ ಬೋರ್ಡಿನಲ್ಲಿ, ಪಟ್ಲಬೆಟ್ಟವು ಪ್ರಕೃತಿ ರಮಣೀಯ ಸ್ಥಳವಾಗಿದ್ದು, ಬೆಟ್ಟಕ್ಕೆ ತೆರಳಬೇಕಾದರೆ ಸ್ಥಳೀಯರ ವಾಹನಗಳನ್ನು ಬಳಸಬೇಕೇ ಹೊರತು, ಹೊರಗಿನ ವಾಹನಗಳಿಗೆ ತೆರಳಲು ಅವಕಾಶವಿಲ್ಲ” ಎಂದು ಸೂಚನೆ ನೀಡಲಾಗಿದೆ.
ಪಿಕಪ್ ವಾಹನ ಚಾಲಕರು ಹೇಳೋದೇನು?
ಪಿಕಪ್ ವಾಹನ ಚಾಲಕರು, ಖಾಸಗಿ ಕಾರು ಬೈಕ್ ಅನ್ನು ಪಟ್ಲ ಬೆಟ್ಟಕ್ಕೆ ತೆರಳದಂತೆ ತಡೆಯುತ್ತಿರುವುದಕ್ಕೆ ಕಾರಣಗಳನ್ನು ನೀಡಿದ್ದು, “ಪಟ್ಲ ಬೆಟ್ಟ ಒಂದು ಸುಂದರ ವೀಕ್ಷಣೆಯ ಸ್ಥಳ ನಿಜ. ಆದರೆ ಅದು ಸರ್ಕಾರಿ ಜಾಗದಲ್ಲಿದೆ. ಅರಣ್ಯ ಇಲಾಖೆಗೆ ಸೇರಿದ್ದು, ಪಟ್ಲ ಬೆಟ್ಟಕ್ಕೆ ತೆರಳಲು ಸರಿಯಾದ ದಾರಿಯನ್ನು ಅರಣ್ಯ ಇಲಾಖೆಯವರು ಮಾಡಿಸಿಲ್ಲ. ಸುತ್ತಮುತ್ತಲಿನ ಜೀಪ್ ಮಾಲೀಕರೇ ಸೇರಿಕೊಂಡು ಗ್ರಾಮ ಪಂಚಾಯತಿಯವರ ಸಹಕಾರದೊಂದಿಗೆ ಹಣ ಖರ್ಚು ಮಾಡಿ ರಸ್ತೆ ಮಾಡಿಸಿದ್ದೇವೆ. ಪಟ್ಲ ಬೆಟ್ಟವನ್ನು ಯಾವುದೇ ಇಲಾಖೆಯವರು ಅಭಿವೃದ್ಧಿ ಪಡಿಸಿಲ್ಲ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಅರಣ್ಯ ಇಲಾಖೆಯವರು ಪಟ್ಲ ಬೆಟ್ಟಕ್ಕೆ ಸಾರ್ವಜನಿಕರು ಹೋಗದಂತೆ ನಿರ್ಬಂಧವಿಧಿಸಿದ್ದರು. ಆದರೆ ನಾವು ಸ್ಥಳೀಯ ಶಾಸಕರ ಬಳಿ ಮನವಿ ಮಾಡಿ, ಪಿಕಪ್ ವಾಹನ ಮಾಲೀಕರು ಹೊಟ್ಟೆಪಾಡಿಗೆ ದುಡಿಯಲು ಅವಕಾಶ ಸಿಕ್ಕಂತಾಗುತ್ತದೆ ಎಂದು ನಿರ್ಬಂಧ ತೆಗೆಸಿದ್ದೆವು. ಅಲ್ಲದೇ, ಪರಿಸರಕ್ಕೆ ಪ್ರವಾಸಿಗರಿಂದ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ಅರಣ್ಯ ಇಲಾಖೆಯವರಿಗೂ ಭರವಸೆ ಕೊಟ್ಟಿದ್ದೇವೆ. ಹಾಗಾಗಿ, ಅದನ್ನು ನಿರ್ವಹಿಸಲು ಅನುಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ವಾಹನಗಳನ್ನು ಬೆಟ್ಟಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.
