- ‘ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ’
- ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು: ಆಗ್ರಹ
ಕಾವೇರಿ ಸಮಿತಿಯ ಯಾವ ಸದಸ್ಯನೂ ಸ್ಥಳಕ್ಕೆ ಬಂದು ವಸ್ತುಸ್ಥಿತಿ ಅಧ್ಯಯನ ಮಾಡಿಲ್ಲ. ಆದರೂ ಕರ್ನಾಟಕದ ವಿರುದ್ದ ತೀರ್ಪು ನೀಡಿದ್ದಾರೆ. ಕರ್ನಾಟಕದ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರು ಹಿನ್ನಡೆಯಾಗಿದ್ದು, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿದರು.
ಕೆಪಿಸಿಸಿ ಕಚೇರಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ನ್ಯಾಯಲಯವು ನೀರಿನ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸಂವಿಧಾನದ ಅರ್ಟಿಕಲ್ 262ರಲ್ಲಿ ಉಲ್ಲೇಖವಿದೆ. ಸಂವಿಧಾನದಲ್ಲಿ ಲೋಪವಿದ್ದಾಗ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬಹುದು ಎನ್ನುವ ಉಲ್ಲೇಖವಿದೆ” ಎಂದರು.
“ಕಾವೇರಿ ನೀರಾವರಿ ನಿರ್ವಹಣಾ ಸಮಿತಿ ಹಾಗು ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಅಧ್ಯಕ್ಷರೂ ಸೇರಿ 9 ಜನ ಸದಸ್ಯರು ಇರುತ್ತಾರೆ. ಇವರಲ್ಲಿ ಅಧ್ಯಕ್ಷರನ್ನು ಸೇರಿ 5 ಜನರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ. ಈ ಸಮಿತಿಯ ಕೆಲಸ ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆ ಬೀಳುತ್ತದೆ, ಒಳಹರಿವು, ಹೊರ ಹರಿವು ಎಷ್ಟಿದೆ ಎಂಬುದನ್ನು ಪ್ರತಿದಿನ ಮಾಹಿತಿ ಕಲೆ ಹಾಕಬೇಕು. ಆದರೆ ಇದನ್ನು ಮಾಡದೆ ನಮಗೆ ಮಾರಕವಾದ ತೀರ್ಪು ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರಿಗಾಗಿಯಾದರೂ ಸರ್ಕಾರ ಹೋರಾಟ ಮಾಡಲಿ: ಬೊಮ್ಮಾಯಿ ಆಗ್ರಹ
“ಕೂಡಲೇ ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. 4 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ನಡುವೆ ಸಂಧಾನ ಮಾಡಬೇಕು. ಬಿಜೆಪಿಯ ಯಾವ ಸಂಸದನಿಗೂ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ನಮ್ಮನ್ನು ಕೇಳಿ ನೀರು ಬಿಟ್ಟಿದ್ದೀರಾ ಎನ್ನುವ ಉಡಾಫೆಯ ಮಾತುಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಡಿದ್ದಾರೆ” ಎಂದು ಹರಿಹಾಯ್ದರು.
“ಸುಪ್ರೀಂ ಕೋರ್ಟಿಗೆ ಮೊದಲೇ ಅರ್ಜಿ ಹಾಕಬೇಕಿತ್ತು ಎಂದು ಬೊಮ್ಮಾಯಿ ಅವರು ಹೇಳುತ್ತಾರೆ, ಆದರೆ ಸುಪ್ರೀಂ ಕೋರ್ಟಿಗೆ ಈ ವಿಚಾರದಲ್ಲಿ ಸೀಮಿತ ಅಧಿಕಾರ ಮಾತ್ರವಿದೆ. ಇದು ಕಾನೂನಿನ ವಿರುದ್ದವಾಗಿ ಸಲಹೆ ನೀಡುವ ಕೆಲಸ. ಬೊಮ್ಮಾಯಿ ಅವರು ಸ್ವಲ್ಪ ಅಧ್ಯಯನ ಮಾಡಲಿ. ಮುಖ್ಯಮಂತ್ರಿಗಳಾಗಿದ್ದಾಗ ತರಾತುರಿಯಲ್ಲಿ ಎಸ್ಸಿ- ಎಸ್ಟಿ ಮೀಸಲಾತಿ ತಂದರು, ಅದೇ ರೀತಿ ಮಹಿಳಾ ಮೀಸಲಾತಿಯನ್ನು ತರಾತುರಿಯಲ್ಲಿ ತರುವುದಕ್ಕೆ ಮೋದಿಯವರಿಗೆ ಬೊಮ್ಮಾಯಿ ಅವರ ಪ್ರಭಾವ ತಟ್ಟಿದೆ” ಎಂದು ಲೇವಡಿ ಮಾಡಿದರು.