ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕರಾಗಿ ದುಡಿಯುತ್ತಿರುವ ಸಿಬ್ಬಂದಿಯೊಬ್ಬರ ಮಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸಂಸ್ಥೆಯ ನಿರ್ದೇಶಕಿ ಅಭಿನಂದಿಸಿ, ಗೌರವ ಸಲ್ಲಿಸಿದರು.
ಸಂಸ್ಥೆಯ ಘಟಕ-3ರ ಚಾಲಕ ಉಮೇಶ್ ಎಂಬವರ ಮಗಳು ಕುಮಾರಿ ರೋಹಿಣಿ ಎಂಬಾಕೆ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಪರಿಸರ ವಿಜ್ಞಾನ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದರು. ಇದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ದೇಶಕಿ ಜಿ.ಸತ್ಯವತಿಯವರು ಅಭಿನಂದಿಸಿ, ಗೌರವ ಸಲ್ಲಿಸಿದರು.

ರೋಹಿಣಿಯವರ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಸಂಸ್ಥೆಯ ವತಿಯಿಂದ ₹5000 ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.
ಈ ಸಂದರ್ಭ ಸಂಸ್ಥೆಯ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.