ಕೆ.ಆರ್.ಪೇಟೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವರ್ತಮಾನದಲ್ಲಿ ಜಾತಿ, ಬೇಧಗಳಿಂದ ಮುಕ್ತರಾಗಿ, ಉನ್ನತ ಜೀವನವನ್ನು ನಡೆಸುವ ಆಧ್ಯಾತ್ಮಿಕತೆಯ ಮಾರ್ಗವನ್ನು ಕಲಿಸುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರಲ್ಲಿರುವ ಮೌಲ್ಯಗಳು ಮರೆಯಾದಂತೆ ಭೂಮಂಡಲದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಆದ್ದರಿಂದ, ಮೌಲ್ಯಗಳ ಉಳಿವಿಗಾಗಿ ಶಾಂತಿಯನ್ನು ಸ್ಥಾಪಿಸಲು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್.ಟಿ ಮಂಜು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಯೋಜಿಸಿದ್ದ ತನ್ನ ನೂತನ ಸೇವಕೇಂದ್ರ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವರ್ತಮಾನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸಲು ರಾಜಯೋಗವನ್ನು ಅಭ್ಯಾಸಿಸಿದಾಗ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಪರಮಾತ್ಮನ ರಕ್ಷಣೆಯ ಕವಚದ ಅನುಭೂತಿಯಾಗುತ್ತದೆ. ಇಲ್ಲಿ ನೀಡಲಾಗುವ ರಾಜಯೋಗ ಶಿಕ್ಷಣವನ್ನ ಪಡೆದು, ತಮ್ಮ ಬದುಕಿನಲ್ಲಿ ಆಧ್ಯಾತ್ಮಿಕತೆಯ ಅನುಭೂತಿಯನ್ನು ಮಾಡಿಕೊಳ್ಳಬೇಕು” ಎಂದು ಶಾಸಕರು ಕರೆ ನೀಡಿದರು.
ಅಕ್ಕಿಹೆಬ್ಬಾಳು ರಘು ಮಾತನಾಡಿ, “ವಿಶ್ವವಿದ್ಯಾಲಯು ಹಲವು ವರ್ಷಗಳಿಂದ ಜಾತಿ, ಧರ್ಮ, ಭೇದವಿಲ್ಲದೆ ಸರ್ವರನ್ನು ಸಮಾನವಾಗಿ ಕಂಡು, ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಮಾಜದ ಒಳಿತಿಗಾಗಿ, ಸರ್ವರ ಹಿತವನ್ನೇ ಬಯಸುವ ಕೆಲಸ ಮಾಡುತ್ತಿದ್ದಾರೆ. ದೇಶ, ವಿದೇಶಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಸರ್ವರ ಕಲ್ಯಾಣವನ್ನು ಬಯಸುವ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ, ಸಮಾಜಮುಖಿ ಕಾರ್ಯಕ್ಕೆ ವಿಶ್ವಸಂಸ್ಥೆಯಿಂದ ಏಳು ಶಾಂತಿ ಪ್ರಶಸ್ತಿ ಲಭಿಸಿದೆ” ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪವಲಯ ಮುಖ್ಯ ಸಂಚಾಲಕ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮಿ ಜಿ ಮಾತನಾಡಿ, “ಸಮಾಜದ ಪ್ರತಿಯೊಬ್ಬರೂ ಉಲ್ಲಾಸದಿಂದ ಈ ಲೋಕದಲ್ಲಿ ಬದುಕಿ ಬಾಳಬೇಕು. ನಮ್ಮ ಮಾತುಗಳು ಇನ್ನೊಬ್ಬರನ್ನು ಸಂತೋಷದ ಕಡೆಗೆ ಕೊಂಡೊಯ್ಯಬೇಕು ಎಂದು ಆಶೀರ್ವಚನ” ನೀಡಿದರು.
ಕಾರ್ಯಕ್ರಮದಲ್ಲಿ, ಪ್ರಾಂಶುಪಾಲ ಬಾಲಕೃಷ್ಣ, ಶಾರದ, ಸೇವಾ ಕೇಂದ್ರ ಪ್ರತಿನಿಧಿ ರಾಮಚಂದ್ರು, ಮೋಹನ್, ರಾಧಮ್ಮ, ಬಿ. ಕೆ ಪ್ರಾಣೇಶ್, ಬಿ.ಕೆ. ಶಿವಲೀಲಾ, ಸವಿತಾ, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಬಲದೇವ್, ವಾಸು, ಎ.ಜೆ. ಶಂಕರ್, ರಂಗನಾಥನ್, ಜಯಂತಿ, ರಾಮಚಂದ್ರ ರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.