ಪೋಷಕರ ವಿರುದ್ಧ ಸೇಡು ತೀರಿಸಿಕ್ಕೊಳ್ಳಲು ಅಪ್ರಾಪ್ತ ಬಾಲಕಿಯ ಮೇಲೆ ತನ್ನ ನಾಯಿಯನ್ನು ಛೂ ಬಿಟ್ಟ ಕೋಳಿ ಫಾರಂ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ನಾಗರಾಜ್ ಎಂಬುವವರು ಮಾಗಡಿ ಬಳಿ ಕೋಳಿ ಫಾರಂ ಹೊಂದಿದ್ದಾರೆ. ಬಾಲಕಿಯ ತಂದೆ-ತಾಯಿ ದಿನಗೂಲಿ ನೌಕರರಾಗಿದ್ದಾರೆ.
“ಕೋಳಿ ಫಾರಂನಲ್ಲಿ ದಿನಗೂಲಿ ಕೆಲಸ ಮಾಡಲು ನಾಗರಾಜ್ ಬಾಲಕಿಯ ಪೋಷಕರನ್ನು ಕರೆದಿದ್ದಾನೆ. ಆದರೆ, ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಕೋಳಿ ಫಾರಂ ಮಾಲೀಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಕೋಪಗೊಂಡ ನಾಗರಾಜ್ ದಂಪತಿಯ 15 ವರ್ಷದ ಮಗಳ ಮೇಲೆ ಸೇಡು ತೀರಿಸಿಕೊಳ್ಳಲು ಯೋಜಿಸಿದ್ದನು” ಎಂದು ಪೊಲೀಸರು ಹೇಳಿದ್ದಾರೆ.
“ಅಕ್ಟೋಬರ್ 9 ರಂದು ಬಾಲಕಿ ಶಾಲೆಯಿಂದ ಬರುತ್ತಿದ್ದಾಗ ನಾಗರಾಜ್‌ನ ಮನೆ ಸಮೀಪಿಸುತ್ತಿದ್ದಂತೆ ಆತ ತನ್ನ ಸಾಕುನಾಯಿಯನ್ನು ಛೂ ಬಿಟ್ಟಿದ್ದಾನೆ. ಬಾಲಕಿ ನಾಯಿಯಿಂದ ಭಯಗೊಂಡು ಸಹಾಯಕ್ಕಾಗಿ ಕೂಗಿದ್ದಾಳೆ. ಈ ವೇಳೆ, ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬಾಲಕಿಯನ್ನು ನಾಯಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ” ಎಂದು ತಿಳಿಸಿದ್ದಾರೆ.
“ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 5 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!
ಸಂತ್ರಸ್ತೆಯ ಪೋಷಕರು ಕೋಳಿ ಫಾರಂ ಮಾಲೀಕರ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.