ಬಸವಕಲ್ಯಾಣ ತಾಲೂಕಿನಲ್ಲಿ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರ ಕೂಲಿ ಹಣ ಹಾಗೂ ಬಾಕಿ ಉಳಿದ ಸಾಮಗ್ರಿ ಬಿಲ್ ಕೂಡಲೇ ಬಿಡುಗಡೆ ಮಾಡುವಂತೆ ಬಹುಜನ ಸಮಾಜ ಪಕ್ಷ ತಾಲೂಕು ಘಟಕ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಾಲೂಕು ಪಂಚಾಯಿತಿ ಇಒ ಮಹಾದೇವ ಬಾಬಳಗಿ ಅವರಿಗೆ ಸಲ್ಲಿಸಿದರು.
“ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಿ ಎರಡು ತಿಂಗಳು ಕಳೆದರೂ ಹಣ ನೀಡಿಲ್ಲ ಹಾಗೂ ಎರಡು ವರ್ಷದಿಂದ ಸಾಮಗ್ರಿ ಬಿಲ್ ಸಹ ನೀಡಿಲ್ಲ. ಆದರೆ, ಬೀದರ ಹಾಗೂ ಭಾಲ್ಕಿ ತಾಲೂಕಿನಲ್ಲಿ ಯಾವುದೇ ತೊಂದರೆಯಾಗದಂತೆ ಮನರೇಗಾ ಕೂಲಿ ಹಣ ಹಾಗೂ ಸಾಮಗ್ರಿ ಬಿಲ್ ಪಾವತಿಸಿದ್ದಾರೆ. ಇನ್ನು ಮುಂದೆ ವಿಳಂಬ ಮಾಡದೆ ತಾಲೂಕಿನ ಮನರೇಗಾ ಬಾಕಿ ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಮನರೇಗಾ ದಿನಗೂಲಿ ಕಾರ್ಮಿಕರಿಗೆ ಎಮ್‌ಐಎಸ್ ಆದ ವಾರದೊಳಗೆ ಹಣ ಜಮೆ ಆಗುತ್ತಿತ್ತು. ಆದರೆ ಹೊಸ ಸರ್ಕಾರ ಬಂದ ನಂತರ ಎರಡು ತಿಂಗಳಾದರೂ ಕೂಲಿ ಹಣ ಖಾತೆಗೆ ಜಮೆ ಆಗುತ್ತಿಲ್ಲ. ಇದರಿಂದ ದಿನಗೂಲಿ ಕಾರ್ಮಿಕರು ಹಾಗೂ ಸಾಮಗ್ರಿ ನೀಡಿದ ಏಜೆನ್ಸಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಒಂದು ವಾರದೊಳಗೆ ನರೇಗಾ ಯೋಜನೆಯ ಕಾರ್ಮಿಕರ ಬಾಕಿ ಬಿಲ್ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಕಛೇರಿ ಮುಂಭಾಗ ಧರಣಿ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರವೇನೋ ಬದಲಾಯಿತು, ಕೋಮುವಾದಿಗಳ ಅಟಾಟೋಪಗಳಿಗೆ ಅಂಕುಶ ಯಾವಾಗ?
ಈ ಸಂದರ್ಭದಲ್ಲಿ ಬಿಎಸ್ಪಿಯ ತಾಲೂಕಾಧ್ಯಕ್ಷ ಶಂಕರ ಫುಲೆ, ಕಾರ್ಯದರ್ಶಿ ಮಾಹಾದೇವ ಗಾಯಕವಾಡ, ಜಿಲ್ಲಾ ಉಪಾಧ್ಯಕ್ಷ ಅಶೋಕ ಮಂಠಾಳಕರ್, ತಾಲ್ಲೂಕು ಉಪಾಧ್ಯಕ್ಷ ಸಚಿನ ಕಾಂಬಳೆ ಹಾಗೂ ಶಿವರಾಜ ಕಾಂಬಳೆ, ಅಶೋಕ ಶಿಂಧೆ, ದಿಲೀಪ ಕಾಂಬಳೆ ಇದ್ದರು.