- ತಮ್ಮ ಒಡೆತನದ ಪಿಆರ್‌ಎಫ್ ಫೌಂಡೇಶನ್ ವತಿಯಿಂದ ಕೊಡುಗೆ
- ಕಾಮಗೆರೆ ಹೋಲಿಕ್ರಾಸ್ ಬಳಿ ಇರುವ ಆಸ್ಪತ್ರೆಗೂ ಆಂಬ್ಯುಲೆನ್ಸ್ ನೀಡಿಕೆ
ಬಹುಭಾಷಾ ನಟ ಪ್ರಕಾಶ್ ರೈ ಅವರು ತಮ್ಮ ಒಡೆತನದ ಪಿಆರ್‌ಎಫ್ ಫೌಂಡೇಶನ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಹೋಲಿಕ್ರಾಸ್ ಬಳಿ ಇರುವ ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ಗಳನ್ನು ಕೊಡುಗೆ ನೀಡುವ ಮೂಲಕ ತಮ್ಮ ಸಮಾಜಮುಖಿ ಸೇವೆಗಳನ್ನು ಮುಂದುವರೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಅಪ್ಪು ಹೆಸರಿನ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದು, ರಾಜ್ಯದ ಪ್ರತೀ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆಯನ್ನು ಪ್ರಕಾಶ್ ರೈ ಒಡೆತನದ ಪಿಆರ್‌ಎಫ್ ಫೌಂಡೇಶನ್ ಹಮ್ಮಿಕೊಂಡಿದೆ.
ನಟ ಪ್ರಕಾಶ್ ರೈ ಮಾತನಾಡಿ, “ನಾನು ಪುನೀತ್ ರಾಜ್‌ಕುಮಾರ್ ಅವರ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೆ. ಕೋವಿಡ್-19 ವೇಳೆಯಲ್ಲಿ ಅವರು ನನಗೆ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ ಸಹಾಯ ಮಾಡಿದ್ದರು” ಎಂದು ನೆನಪಿಸಿಕೊಂಡರು.
“ಪುನೀತ್ ರಾಜ್‌ಕುಮಾರ್ ಮೃತಪಡುವ ವೇಳೆ ಅವರಿಗೆ ಸಕಾಲದಲ್ಲಿ ಆಂಬ್ಯುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುವ ಉದ್ದೇಶದಿಂದ ಅವರ ಹೆಸರಿನಲ್ಲಿ ಆಂಬ್ಯುಲೆನ್ಸ್ ನೀಡಲಾಗುತ್ತಿದೆ” ಎಂದು ತಿಳಿಸಿದರು.

ಹೋಲಿಕ್ರಾಸ್ ಆಸ್ಪತ್ರೆಗೂ ಕೊಡುಗೆ
ಕಳೆದ ಕೆಲ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಕಿಚ್ಚಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿತರಿಸಿದ್ದ ವಿಷ ಪ್ರಸಾದ ದುರಂತ ಪ್ರಕರಣದ ವೇಳೆ ಹೋಲಿಕ್ರಾಸ್ ಆಸ್ಪತ್ರೆಯು ಗಣನೀಯ ಆರೋಗ್ಯ ಸೇವೆ ಒದಗಿಸಿತ್ತು. ಇಲ್ಲಿನ ಆಸ್ಪತ್ರೆಗೂ ಪ್ರಕಾಶ್ ರೈ ಆ್ಯಂಬುಲೆನ್ಸ್ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೋಲಿಕ್ರಾಸ್ ಆಸ್ಪತ್ರೆಯು ಹಲವು ವರ್ಷಗಳಿಂದ ಬಡಜನರಿಗೆ ಆರೋಗ್ಯ ಸೇವೆ ಒದಗಿಸುತ್ತಾ ಬಂದಿದೆ. ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಆ್ಯಂಬುಲೆನ್ಸ್ ಕೊಡುಗೆ ನೀಡಿದ್ದೇನೆ” ಎಂದು ಹೇಳಿದರು.
ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೆಲಿನಾ ಮಾತನಾಡಿ, “ನಮ್ಮ ಆಸ್ಪತ್ರೆ ಸೇವೆಯನ್ನು ಗುರುತಿಸಿ ಆ್ಯಂಬುಲೆನ್ಸ್‌ಗಳನ್ನು ಕೊಡುಗೆ ನೀಡಿರುವ ಪ್ರಕಾಶ್ ರೈ ಅವರಿಗೆ ನಮ್ಮ ಸಿಬ್ಬಂದಿಗಳ ವತಿಯಿಂದ ಧನ್ಯವಾದಗಳನ್ನು ತಿಳಿಸಿ, ಇಂತಹ ಅವಕಾಶವನ್ನು ಬಳಸಿಕೊಂಡು ಕಾಡಂಚಿನ ಗುಡ್ಡ ಪ್ರದೇಶದ ಜನರಿಗೆ ಇನಷ್ಟು ಸೇವೆ ಸಲ್ಲಿಸುತ್ತೇವೆ” ಎಂದರು.