ತಾಲೂಕಿನ ನಂದಿ ಹೋಬಳಿಯ ಸಿಂಗಾಡಿಕದಿರೇನಹಳ್ಳಿ ಭೂ ವಿವಾದವನ್ನು ಶೀಘ್ರ ಬಗೆಹರಿಸದ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಟಸ್ಥ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.
ಚಿಕ್ಕಬಳ್ಳಾಪುರ ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪ ಇರುವ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಆರ್ಸಿಇ) ಕಚೇರಿ ಎದುರು ಶುಕ್ರವಾರ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಂಗಾಡಿ–ಕದರೆನಹಳ್ಳಿ ಗ್ರಾಮದ ದಲಿತ ಕುಟುಂಬಗಳ ಭೂ ಸಮಸ್ಯೆ ಕಳೆದ 33ದಿನಗಳಿಂದ ಮುಂದುವರಿದಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ ದಲಿತರ ಜೀವ, ಮಾನ ಮತ್ತು ಆಸ್ತಿಗೆ ಧಕ್ಕೆಯಾದ ಸಂದರ್ಭದಲ್ಲಿ ರಕ್ಷಣೆ ನೀಡುವುದು ಹಾಗೂ ನ್ಯಾಯ ಒದಗಿಸುವುದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಕರ್ತವ್ಯವಾಗಿದೆ.ಲಿಖಿತ ದೂರು ನೀಡಿ 5ದಿನಗಳಾಗಿದೆ. ವಾಸ್ತವವಾಗಿ ಈ ಇಲಾಖೆ ಸುಮೊಟೋ ಪ್ರಕರಣ ದಾಖಲಿಸಿಕೊಂಡು ನ್ಯಾಯಕೊಡುವಷ್ಟು ಬಲಿಷ್ಟವಾಗಿದೆ.ಆದರೂ ಕೂಡ ಯಾವುದೋ ಒತ್ತಡಕ್ಕೆ ಮಣಿದು ಈ ಪ್ರಕರಣದಲ್ಲಿ ಕ್ರಮವಹಿಸದೆ ಕಾಲಹರಣ ಮಾಡುತ್ತಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕ್ರಮಜರುಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶದಿಂದ ನುಡಿದರು. ಅಧಿಕಾರಿಗಳು ತಟಸ್ಥ ಧೋರಣೆ ಅನುಸರಿಸುತ್ತಿದ್ದು, ಇದು ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ |ಸಮಾಜದ ಮುಖ್ಯವಾಹಿನಿಗೆ ತರಲು ಬಲಗೈ ಜನ ಜಾಗೃತಿ ಸಮಾವೇಶ
ರಾಜ್ಯ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ ಸಿಂಗಾಡಿ ಕದಿರೇನಹಳ್ಳಿ ಗ್ರಾಮದ ಸರ್ವೆ ನಂಬರ್ 67ರಲ್ಲಿ ಬೇಸಾಯ ಮಾಡುತ್ತಿದ್ದ ಅಮಾಯಕ ದಲಿತ ಸಮುದಾಯದ 10ಕ್ಕೂ ಹೆಚ್ಚು ಕುಟುಂಬಗಳನ್ನು ಒಕ್ಕಲೆಬ್ಬಿಸಿ ಅವರ ಶಾಂತಿಯುತ ಬದುಕಿಗೆ ಮುಳುವಾಗಿರುವ ತಪ್ಪಿತಸ್ಥ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.ಅಲ್ಲಿಯವರೆಗೆ ಏನೇ ಆಗಲಿ ಹೋರಾಟ ನಿಲ್ಲಿಸುವ ಮಾತೇ ಇಲ್ಲ.ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಆಯುಕ್ತರು ಸ್ಥಳಕ್ಕೆ ಬಂದು ಸಮಸ್ಯೆಗೆ ಪರಿಹಾರ ಕಾಣಿಸಬೇಕು.ತಾವೇ ಮುಂದೆ ನಿಂತು ಸಿಂಗಾಡಿಕದಿರೇನಹಳ್ಳಿ ದಲಿತ ರೈತರನ್ನು ಬೇಸಾಯ ಮಾಡಲು ಭೂಮಿಗೆ ಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಪರಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ಎನ್. ವೆಂಕಟೇಶ್,ಬಿ.ವಿ.ವೆoಕಟರಮಣ,ಜಿ.ವಿ.ಗoಗಪ್ಪ ಕಲಾಮಂಡಳಿ ಜಿಲ್ಲಾ ಸಂಚಾಲಕ ಇಸ್ಕೂಲಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ | ಭೂ ವಿವಾದಕ್ಕೆ ಕಾರಣವಾದ ಕಂದಾಯ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ
- Advertisement -
ಪೋಸ್ಟ್ ಹಂಚಿಕೊಳ್ಳಿ:





