ಅಂಬೇಡ್ಕರ್ವಾದಿಗಳು ಯಾರ ಮುಂದೆಯೂ ಕೈಚಾಚಿ ಗುಲಾಮಗಿರಿ ಮಾಡುವವರಲ್ಲ. ಸ್ವಾಭಿಮಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಅಂಬೇಡ್ಕರ್ವಾದಿಗಳ ಆದ್ಯ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ. ಹೆಚ್.ಸಿ.ಮಹಾದೇವಪ್ಪ ಹೇಳಿದರು.
ನಗರದ ಅಂಬಾರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಜನಾಂಗ ಜಾಗೃತಿ ಮತ್ತು ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಸಂವಿಧಾನವನ್ನು ನೀಡಿದ್ದಾರೆ ಆದರೂ ಇಂದಿಗೂ ಸಮಾಜದಲ್ಲಿ ಜಾತಿ, ವರ್ಗ ಸೇರಿದಂತೆ ವಿವಿಧ ರೀತಿಯ ತಾರತಮ್ಯಗಳು ಮುಂದುವರಿದಿರುವುದು ವಿಷಾದನೀಯ. ಇಂತಹ ತಾರತಮ್ಯಗಳ ವಿರುದ್ಧ ಸಂಘಟನಾತ್ಮಕವಾಗಿ ಹೋರಾಡಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು 1924ರಲ್ಲಿ ಬಹಿಷ್ಕೃತ ಹಿತಕಾರಿಣಿ ಸಭೆಯನ್ನು ಸ್ಥಾಪಿಸಿ, ಶೋಷಿತ ಸಮುದಾಯಗಳು ಸಂಘಟನಾತ್ಮಕವಾಗಿ ತಮ್ಮ ಹಕ್ಕು ಹಾಗೂ ಅವಕಾಶಗಳನ್ನು ಪಡೆಯಲು ಶಕ್ತರಾಗಬೇಕು ಎಂಬ ಉದ್ದೇಶ ಹೊಂದಿದ್ದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ಸಂದೇಶವನ್ನು ಜನಸಾಮಾನ್ಯರಲ್ಲಿ ಬಿತ್ತುವ ಮೂಲಕ ಸಂಘಟನಾತ್ಮಕ ಹೋರಾಟದ ಮೂಲಕ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಮತೀಯವಾದ ಹಾಗೂ ಕೋಮುವಾದವು ದೇಶದಲ್ಲಿ ಸಂವಿಧಾನಬದ್ಧ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ವಿರುದ್ಧವಾಗಿವೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವ ಶಕ್ತಿಗಳ ವಿರುದ್ಧ ಜಾಗೃತರಾಗಬೇಕು. ಇಲ್ಲವಾದರೆ ಮತ್ತೆ ಗುಲಾಮಗಿರಿಯತ್ತ ತಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸಿಕೊಂಡು ಅವರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಹುನ್ನಾರಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದರು.ದೇಶದಲ್ಲಿ ಕೋಮುವಾದ ಹಾಗೂ ಜಾತೀಯತೆಯನ್ನು ಎದುರಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನವೇ ಪ್ರಮುಖ ಅಸ್ತ್ರಗಳಾಗಿವೆ ಎಂದು ಡಾ. ಹೆಚ್.ಸಿ. ಮಹಾದೇವಪ್ಪ ತಿಳಿಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಲಗೈ ಜಾತಿಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಡಾ. ಟಿ. ಶ್ರೀನಿವಾಸಪ್ಪ,ಸಮುದಾಯದ ಬಲ ಒಗ್ಗಟ್ಟಿನಿಂದ ಮಾತ್ರ ಸಾಧ್ಯ.ಒಂದೇ ಕರೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನರು ಆಗಮಿಸಿರುವುದು ನಮ್ಮ ಜನಾಂಗದ ಬಲ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಈಗಾಗಲೇ ಸಮಿತಿಗಳನ್ನು ರಚಿಸಲಾಗಿದ್ದು,ಈ ಮೂಲಕ ಸಮುದಾಯದ ಜನರಿಗೆ ಶೈಕ್ಷಣಿಕ,ಆರೋಗ್ಯ ಸೇರಿದಂತೆ ವಿವಿಧ ಸೇವೆಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲೂ ಸಮುದಾಯದ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜನರನ್ನು ಹಣ ನೀಡಿ ಕರೆ ತರಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಕಾರ್ಯಕರ್ತರ ಪರಿಶ್ರಮದಿಂದಲೇ ಜನಸಾಗರ ಸೇರಿದೆ ಎಂದು ಸ್ಪಷ್ಟಪಡಿಸಿದರು. ಸಮಾಜವನ್ನು ಸ್ವಾರ್ಥಕ್ಕೆ ಬಳಸುವುದಿಲ್ಲ; ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲಗೊಳಿಸು ವುದೇ ತಮ್ಮ ಗುರಿ ಎಂದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಅವರು,ಇಂದಿನ ಸಮಾವೇಶವು ಸಮುದಾಯದಲ್ಲಿ ಬಲವೂ ಇದೆ,ಒಗ್ಗಟ್ಟೂ ಇದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಮಾಜಿ ಸಚಿವ ಟಿ. ಚೆನ್ನಯ್ಯ, ಬಿ. ಬಸವಲಿಂಗಪ್ಪ, ವಿಜ್ಞಾನಿ ರಾಗಿ ಲಕ್ಷಣಯ್ಯ, ಸಾಹಿತಿಗಳಾದ ಸಿದ್ಧಲಿಂಗಯ್ಯ, ದೇವನೂರು ಮಹದೇವ ಅವರಂತಹ ನಾಯಕರ ಕೊಡುಗೆಗಳನ್ನು ಸ್ಮರಿಸಲಾಯಿತು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂತು. ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಬಳಿಕ ವಿವಿಧ ಕ್ಷೇತ್ರಗಳ ಸಾಧಕರು, ಅತಿಥಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಏಡುಕೊಂಡಲ ಶ್ರೀನಿವಾಸ್ ದಂಪತಿಗಳನ್ನು ಸನ್ಮಾನಿಸಲಾಯಿತು.ಅಪ್ಪಗೆರೆ ತಿಮ್ಮರಾಜು ಅವರ ತಂಡ ನಡೆಸಿಕೊಟ್ಟ ಕ್ರಾಂತಿಗೀತೆಗಳ ಕಾರ್ಯಕ್ರಮ ಸಮಾವೇಶಕ್ಕೆ ಮೆರಗು ತಂದಿತು.ಒಟ್ಟಾರೆ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ಜಾಗೃತಿ ಸಮಾವೇಶದಲ್ಲಿ ಸ್ವಾಭಿಮಾನ, ಸಂಘಟನೆ ಮತ್ತು ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಯೊಂದಿಗೆ ಬಲಗೈ ಸಮುದಾಯದ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಯ ಹೊಸ ಶಕ್ತಿ ಪ್ರದರ್ಶನವಾಗಿ ಗಮನ ಸೆಳೆಯಿತು.
ಇದನ್ನು ಓದಿದ್ದೀರಾ..?ಕೋಲಾರ | ಜು.22 ರಂದು ನೀಟ್ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಛಾತ್ರೋಂಕಿ ಗುಂಜ್ ಕಾರ್ಯಕ್ರಮ
ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಕೃಷ್ಣ,ಜಿಲ್ಲೆಯ ಎಂಟು ತಾಲೂಕುಗಳ ಅಧ್ಯಕ್ಷರಾದ ವೆಂಕಟಕೃಷ್ಣ, ನಾಗರಾಜ್,ರಾಮಚಂದ್ರ,ಚಿನ್ನಪ್ಪ, ತುಳಸಿಕೃಷ್ಣ,ಚಂದ್ರಶೇಖರ್,ಶಂಕರಪ್ಪ ಹಾಗೂ ಗೌರೀಶ್, ಜಿಲ್ಲಾ ಸಂಯೋಜಕ ಕಳವಾರ ಶ್ರೀಧರ್,ಸುಧೀರ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ | ಬಲಗೈ ಜಾತಿಗಳ ಒಕ್ಕೂಟದ ಜನಾಂಗ ಜಾಗೃತಿ ಮತ್ತು ಸ್ವಾಭಿಮಾನಿ ಬೃಹತ್ ಸಮಾವೇಶ
ಪೋಸ್ಟ್ ಹಂಚಿಕೊಳ್ಳಿ:





