ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಕಶೆಟ್ಟಿಪಲ್ಲಿ ಗ್ರಾಮ ಹಾಗು ಅಲ್ಯುಮಿನಿ ಅಸೋಷಿಯನ್ ಯು.ಎ.ಎಸ್ ಬೆಂಗಳೂರು ಇವರ ಆಶ್ರಯದಲ್ಲಿ ಜಾನುವಾರು ಆರೋಗ್ಯ ಶಿಬಿರ ಹಾಗು ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಿ ರೈತರಿಗೆ ಅನುಕೂಲ ಮಾಡಲಾಯಿತು.
ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದಡಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಆಯೋಜಿಸಿದ ಜಾನುವಾರು ತಪಾಸಣಾ ಕಾರ್ಯಕ್ರಮ ಹಾಗು ಲಸಿಕಾ ಶಿಬಿರವನ್ನು ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಆದ ಡಾ.ರಾಮಕೃಷ್ಣ ನಾಯಕ್ ಉದ್ಘಾಟಿಸಿ,ಜಾನುವಾರುಗಳಿಗೆ ತಗುಲುವ ಖಾಯಿಲೆಗಳಿಗೆ ಅಗತ್ಯವಾದ ಚಿಕಿತ್ಸೆ ಕೊಡಿಸಿ. ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸುವಂತೆ ಹಾಗು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಪಶುವೈದೈರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಲು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಶ್ರೀನಿವಾಸರೆಡ್ಡಿ ರವರು ಮಾತನಾಡಿ, ಜಾನುವಾರಗಳ ರೋಗಗಳಿಗೆ ಸರಿಯಾದ ಚಿಕಿತ್ಸೆ, ಪೋಷಕಾಂಶಗಳನ್ನು ಒದಗಿಸುವುದರಿಂದ ಹಾಲಿನ ಪ್ರಮಾಣ ಹಾಗು ಗುಣಮಟ್ಟ ಹೆಚ್ಚಿಸಬಹುದೆಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ.ಕೆ.ವಿ. ಸುಬ್ರಮಣಿ ರವರು ಮಾತನಾಡಿ, ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರ ಹಾಗು ಚರ್ಮಗಂಟು ರೋಗ,ಅದರ ಲಕ್ಷಣಗಳು,ತಡೆಗಟ್ಟುವಿಕೆ, ಕುರಿ ಮತ್ತು ಮೇಕೆಗಳಲ್ಲಿ ಕರುಳಬೇನೆ, ಪಿಪಿಆರ್ ರೋಗದ ಕುರಿತು ಅರಿವು ನೀಡಿ, ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸಿ ಕ್ರಮ ವಹಿಸುವಂತೆ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕ್ಯಾಂಪ್ ವೈದ್ಯಾಧಿಕಾರಿಗಳಾದ ಡಾ.ಡಿ.ನಾಗೇಂದ್ರ ರವರು ಹಸುಗಳ ಜಂತುಹುಳ ನಿವಾರಣಾ,ಪದೇ ಪದೇ ಗರ್ಭಪಾತವಾಗುವ ಜಾನುವಾರುಗಳಿಗೆ ಅವಶ್ಯಕವಾದ ಚಿಕಿತ್ಸೆ ಪಡೆದು ಅವುಗಳ ನೈರ್ಮಲ್ಯದ ಕುರಿತು ಅರಿವು ನೀಡಿ ಚಿಕಿತ್ಸೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ವೈದ್ಯಾಧಿಕಾರಿಗಳಾದ ಡಾ. ವೆಂಕಟೇಶ್ ರವರು ಭಾಗವಹಿಸಿ ಉತ್ತಮ ಸಹಕಾರ ನೀಡುವುದರ ಜೊತೆಗೆ ರೈತರಿಗೆ ಜಾನುವಾರುಗಳ ಪಾಲನೆಯ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.ಎಲ್ಲ ಜಾನುವಾರಗಳಿಗೆ ಅವಶ್ಯಕವಾದ ಚಿಕಿತ್ಸೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.
ಡಾ.ಶುಭಶ್ರೀ,ಡಾ.ರಾಜೇಶ್,ಶ್ರೀನಿವಾಸ್,ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.





