ಲಾರಿ ಹಾಗೂ ಟಾಟಾ ಸುಮೊ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ 12 ಮಂದಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಸಂಚಾರ ಪೊಲೀಸ್ ಠಾಣೆಯ ಎದುರೇ ದುರ್ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಾಟಾ ಸುಮೋ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಟಾಟಾ ಸುಮೋದಲ್ಲಿದ್ದ 13 ಮಂದಿ ಪೈಕಿ, 12 ಮಂದಿ ಮೃತಪಟ್ಟಿದ್ದಾರೆ. ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದೆ.
ಟಾಟಾ ಸುಮೊ ಬಾಗೇಪಲ್ಲಿಯಿಂದ ಬೆಂಗಳೂರು ಕಡೆ ಸಾಗುತ್ತಿತ್ತು. ಮುಂಜಾನೆ ದಟ್ಟ ಮಂಜು ಕವಿದಿದ್ದ ಕಾರಣ, ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸಿಲ್ಲ. ಹೀಗಾಗಿ, ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಟಾಟಾ ಸುಮೋ ಆಂಧ್ರದ ಗೋರಂಟ್ಲದಿಂದ ಬೆಂಗಳೂರಿಗೆ ತೆರಳುತ್ತಿತ್ತು. 7 ಸೀಟಿನ ಸಾಮರ್ಥ್ಯದ ಟಾಟಾ ಸುಮೊದಲ್ಲಿ 13 ಜನ ಪ್ರಯಾಣ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗಿದೆ.
“ಘಟನೆಯಲ್ಲಿ ಓರ್ವ ಮಗು, ಮೂವರು ಮಹಿಳೆಯರು ಸೇರಿ 12 ಜನರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ಪ್ರದೇಶಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಒಬ್ಬೊಬ್ಬರು ಒಂದೊಂದು ಊರಿನವರಾಗಿದ್ದಾರೆ” ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್ ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.