ಗ್ರಾಮಗಳು ದೇಶದ ಅಭಿವೃದ್ಧಿಯ ಅಡಿಪಾಯವಾಗಿದ್ದು, ಗ್ರಾಮೀಣ ಭಾಗದ ಸಮಗ್ರ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಮಂಗಳವಾರ ನಡೆದ ವಿಶ್ವ ಯುವ ಸಮಾವೇಶ–2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪಿಸಿ, ಉಚಿತ ಉನ್ನತ ಶಿಕ್ಷಣ ಒದಗಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ಅವಕಾಶವಂಚಿತ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕ್ಷೇತ್ರಗಳಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಮೆಚ್ಚುವಂಥದ್ದು ಎಂದರು.
ಯುವಜನರಿಗೆ ಚಾರಿತ್ರ್ಯದ ಕಿವಿಮಾತು!!
‘ಹಣ ಕಳೆದುಕೊಂಡರೆ ಏನೂ ನಷ್ಟವಿಲ್ಲ, ಆರೋಗ್ಯ ಕಳೆದುಕೊಂಡರೆ ಸ್ವಲ್ಪ ನಷ್ಟ. ಆದರೆ ಚಾರಿತ್ರ್ಯ ಕಳೆದುಕೊಂಡರೆ ಸರ್ವಸ್ವವನ್ನೂ ಕಳೆದುಕೊಂಡಂತೆ’ ಎಂಬ ಮಾತನ್ನು ಉಲ್ಲೇಖಿಸಿದ ಅವರು, ಯುವಜನರು ಉತ್ತಮ ಚಾರಿತ್ರ್ಯ ರೂಪಿಸಿಕೊಳ್ಳುವುದರ ಜತೆಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ವಿವಿಧ ದೇಶಗಳು ಮತ್ತು ಸಂಸ್ಕೃತಿಗಳಿಂದ ಬಂದಿರುವ ಯುವಕರು ತಮ್ಮ ಸಂಸ್ಕೃತಿಯ ಉತ್ತಮ ಅಂಶಗಳನ್ನು ಇತರರಿಗೆ ಪರಿಚಯಿಸುವುದರ ಜತೆಗೆ, ಇತರ ಸಂಸ್ಕೃತಿಗಳಲ್ಲಿರುವ ಉತ್ತಮ ವಿಚಾರಗಳನ್ನೂ ಅಳವಡಿಸಿಕೊಳ್ಳಬೇಕು. ಯುವಜನರು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಶಕ್ತರಾದಾಗ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
100 ಸಾಯಿ ಸ್ವಾಸ್ಥ್ಯ ಕೇಂದ್ರಗಳ ಸೇವಾ ಪಯಣ!!
ಕಾರ್ಯಕ್ರಮದಲ್ಲಿ 100 ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಕೇಂದ್ರಗಳ ಒಂದು ವರ್ಷದ ಸೇವಾ ಪಯಣದ ವಿಡಿಯೊ ಪ್ರದರ್ಶಿಸಲಾಯಿತು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಭಾರತ ಆರೋಗ್ಯ ಸೇವಾ ವಿಭಾಗದ ಮುಖ್ಯಸ್ಥ ಸುಭಜಿತ್ ರಾಯ್ ಮುಖರ್ಜಿ ಅವರು ಕೇಂದ್ರಗಳ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ನಿಸ್ವಾರ್ಥ ಸೇವೆಯ ಮಹತ್ವ ಸಾರಿದ ಸದ್ಗುರು!!
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ರಂತಿದೇವನ ಕಥೆಯ ಮೂಲಕ ನಿಸ್ವಾರ್ಥ ಸೇವೆ ಮತ್ತು ಸತ್ಯದ ಮಹತ್ವವನ್ನು ವಿವರಿಸಿದರು.
‘ಸತ್ಯಮೇವ ಜಯತೇ. ಸತ್ಯದ ಹಾದಿಯೇ ದೇವರೆಡೆಗೆ ಸಾಗುವ ಮಾರ್ಗ. ಅದಕ್ಕಾಗಿ ಮನಸ್ಸಿನಲ್ಲಿರುವ ಬಯಕೆಗಳನ್ನು ತ್ಯಜಿಸಬೇಕು. ಸತ್ಯದ ಮಾರ್ಗದಿಂದ ಎಂದಿಗೂ ವಿಮುಖರಾಗಬಾರದು. ಭಯ ಮತ್ತು ಬಯಕೆಗಳಿಂದ ಮುಕ್ತರಾದಾಗ ಮಾತ್ರ ದೈವತ್ವದತ್ತ ಸಾಗಲು ಸಾಧ್ಯ’ ಎಂದು ಹೇಳಿದರು.
ಇದಕ್ಕೂ ಮುನ್ನ ಸಚಿವ ಈಶ್ವರ ಖಂಡ್ರೆ ಅವರನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಶಾಲು ಹೊದಿಸಿ, ಸ್ಫಟಿಕದ ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ನಾದ ಗುರುಕುಲಂ ತಂಡದಿಂದ ‘ಭಕ್ತಿ ಸಂಪ್ರದಾಯ’ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್
ವೇದಿಕೆಯಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಡಾ.ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.




