ಎರಡೂವರೆ ವರ್ಷ ಅಧಿಕಾರ ವಿಸ್ತರಣೆ ಮಾಡಿಕೊಂಡಾಗ ಇವರ ಬದ್ಧತೆ ಎಲ್ಲಿತ್ತು? ಕೆ ವಿ ನಾಗರಾಜ್ ಅವರಿಗೆ ನೈತಿಕತೆ ಇಲ್ಲ. ಚುನಾವಣೆ ಬೇಕಾ? ವಿಭಜನೆ ಬೇಕಾ ಎನ್ನುವುದನ್ನು ನಾಗರಾಜ್ ಸ್ಪಷ್ಟಪಡಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್ ಸಿ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “1989ರಿಂದ 1992ರವರೆಗೆ ಶಿವಾರೆಡ್ಡಿ ಕೋಚಿಮುಲ್ ಅಧ್ಯಕ್ಷರಾಗಿದ್ದರು. ಆ ವೇಳೆಯಲ್ಲಿ ಕೆ ವಿ ನಾಗರಾಜ್ ಚಿಕ್ಕಬಳ್ಳಾಪುರದಿಂದ ನಿರ್ದೇಶಕರಾಗಿದ್ದರು. ಆಗ 121ರ ಕಾಯ್ದೆಯ ಪ್ರಕಾರ ಎರಡು ವರ್ಷಗಳ ಕಾಲ ಆಡಳಿತ ಮಂಡಳಿಯ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿತ್ತು” ಎಂದರು.
“ಕಾಡೇನಹಳ್ಳಿ ನಾಗರಾಜ್ ಅಧ್ಯಕ್ಷರಾಗಿದ್ದ ವೇಳೆಯೂ ಕೆ ವಿ ನಾಗರಾಜ್ ನಿರ್ದೇಶಕರಾಗಿದ್ದರು. ಆಗಲೂ ಆರು ತಿಂಗಳು ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ನಮ್ಮ ಅವಧಿಯಲ್ಲಿ ಕೇವಲ ಎರಡೇ ತಿಂಗಳು ಅಧಿಕಾರ ವಿಸ್ತರಿಸಲಾಗಿದೆ. ಈಗ ಅಧಿಕಾರ ವಿಸ್ತರಿಸಬಾರದು ಎನ್ನುತ್ತಾರೆ. ಈ ಹಿಂದೆ ಎರಡು ಬಾರಿ ವಿಸ್ತರಣೆ ಆದಾಗ ಇವರ ನೈತಿಕತೆ ಎಲ್ಲಿ ಹೋಗಿತ್ತು” ಎಂದು ಟೀಕಿಸಿದರು.
“ಐದು ಬಾರಿ ನಿರ್ದೇಶಕರಾಗಿದ್ದಾರೆ, ಅನುಭವಸ್ಥರು. ಆದರೂ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣ ಮಾಡಲಿಲ್ಲ. ಚುನಾವಣೆಯಲ್ಲಿ ಸೋತ ಕೂಡಲೇ ವಿಭಜನೆ ಬೇಕು ಎನ್ನುತ್ತಿದ್ದಾರೆ. ಜನರನ್ನು ಮತ್ತು ಡೆಲಿಗೇಷನ್‌ಗಳನ್ನು ದಾರಿತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಚಿಂತಾಮಣಿ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಮಾತನಾಡಿ, “ಕೋಚಿಮುಲ್ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ವಿಸ್ತರಣೆಗೆ ಸಹಕಾರಿ ವಲಯದ ಕಾನೂನಿನಲ್ಲಿ ಅವಕಾಶವಿದೆ” ಎಂದು ಹೇಳಿದರು.
“ಕೋಚಿಮುಲ್‌ಗೆ ಆಡಳಿತಾಧಿಕಾರಿ ನೇಮಕ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಬಿಜೆಪಿ ಸರ್ಕಾರವು ಕೋಚಿಮಲ್ ವಿಭಜನೆಯಲ್ಲಿ ಅವೈಜ್ಞಾನಿಕವಾಗಿ ಮಾಡಿದ ಕಾರಣ ನಾವು ನ್ಯಾಯಾಲಯದ ಮೆಟ್ಟಿಲೇರಿದೆವು. ನಿರ್ದೇಶಕರ ಅಧಿಕಾರದ ಅವಧಿ ಐದು ವರ್ಷ. ಆದರೆ ಆ ಅವಧಿಯನ್ನೇ ಮೊಟಕುಗೊಳಿಸಲು ಮುಂದಾಗಿದ್ದರು” ಎಂದು ದೂರಿದರು.
“ಬಿಜೆಪಿಗರಿಗೆ ವಿಭಜನೆ ಮಾಡಬೇಕು ಎನ್ನುವ ಸದುದ್ದೇಶ ಇದ್ದಿದ್ದರೆ ಐದು ವರ್ಷದ ಅವಧಿಗೆ ನಿರ್ದೇಶಕರನ್ನಾಗಿ ನಮ್ಮನ್ನು ಮುಂದುವರಿಸಬಹುದಿತ್ತು. ಮಾಜಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಈ ವಿಚಾರವಾಗಿ ಒಕ್ಕೂಟದ ಮಾಜಿ ಅಧ್ಯಕ್ಷ ಕೆ ವಿ ನಾಗರಾಜ್ ತಿರುಚಿ ಹೇಳಿದ್ದಾರೆ” ಎಂದು ಆರೋಪಿಸಿದರು.
“ಕೆ ವಿ ನಾಗರಾಜ್ ಅವರಿಗೆ ಅಧಿಕಾರದಾಹ. ಒಕ್ಕೂಟ ವಿಭಜನೆ ಆಗಬೇಕು. ತಾನು ಅಧ್ಯಕ್ಷ ಆಗಬೇಕು ಎನ್ನುವುದಷ್ಟೇ ಅವರ ಗುರಿ. ತಾನು ಅಧಿಕಾರಕ್ಕೆ ಬರುವವರೆಗೂ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕಕ್ಕೆ ಡಿಪಿಆರ್ ಮಾಡಿರಲಿಲ್ಲ” ಎಂದರು.
“ಪನ್ನೀರ್ ಘಟಕ, ಟೆಟ್ರಾ ಪ್ಯಾಕ್ ಘಟಕ ಬಿಟ್ಟರೆ ಲಾಭದಾಯಕ ಉತ್ಪನ್ನಗಳ ತಯಾರಿಕೆಗೆ ಯಾವುದೇ ಘಟಕವನ್ನೂ ಮಾಡಲಿಲ್ಲ. ಇದರಿಂದ ಮೆಗಾ ಡೇರಿಯಲ್ಲಿ ಒಂದು ಲೀಟರ್ ಹಾಲಿಗೆ ₹5 ನಷ್ಟವಾಗುತ್ತಿದೆ. ಹಾಲಿನ ಪ್ಯಾಕೆಟ್ ಘಟಕ ಮಾಡಿದ್ದರೆ ಅನುಕೂಲವಾಗುತ್ತಿತ್ತು” ಎಂದು ಹೇಳಿದರು.
“ಈಗ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ₹130 ಕೋಟಿ ವೆಚ್ಚದ ಡಿಪಿಆರ್‌ಗೆ ಅನುಮೋದನೆ ದೊರೆತಿದೆ. ಸರ್ಕಾರ, ಸಹಕಾರ ಇಲಖೆಯಿಂದ ಅನುಮತಿ ಪಡೆದು ಟೆಂಡರ್ ಆರಂಭಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಘಟಕ ನಿರ್ಮಾಣವಾಗಲಿದೆ. ಇದರಿಂದ ಒಕ್ಕೂಟ ಆರ್ಥಿಕವಾಗಿ ಬಲಿಷ್ಠವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ತೆಂಗಿನ ಬೆಳೆಗೂ ಸರಿಯಾದ ಪೋಷಕಾಂಶ ಒದಗಿಸಿ: ಟಿ ಬಿ ಜಯಚಂದ್ರ
“ಸಚಿವ ಡಾ. ಎಂ ಸಿ ಸುಧಾಕರ್ ಅವರು ಕೋಚಿಮುಲ್ ವಿಭಜನೆಯ ಬಗ್ಗೆ ಒಲವು ಮತ್ತು ಬದ್ಧತೆ ಹೊಂದಿದ್ದಾರೆ. ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ. ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಾದ ಮೇಲೆ ಅಕ್ರಮ ನಡೆದಿದೆಯೊ ಇಲ್ಲವೋ ಎನ್ನುವುದು ತಿಳಿಯಲಿದೆ” ಎಂದರು.
ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಮುಖಂಡರಾದ ಸು ಧಾ ವೆಂಕಟೇಶ್, ಕೆ ಎಂ ಮುನೇಗೌಡ, ವೆಂಕಟ್ ಇದ್ದರು.
