ದಟ್ಟವಾಗಿ ಕಾಡನ್ನು ಆವರಿಸಿಕೊಂಡಿರುವ ಕಳಸ ತಾಲೂಕು ನೋಡುಗರಿಗೆ ಪ್ರವಾಸಿ ತಾಣವಾಗಿ ಕಂಗೊಳಿಸುತ್ತದೆ. ಕಳಸ ತಾಲೂಕು ಕುದುರೆಮುಖ ವ್ಯಾಪ್ತಿಯಲ್ಲಿ ಬರುವ ವಿನೋಬ ನಗರ ಅಥವಾ ಕಂಪನಿಯ ಲಾಬಿಗೋಸ್ಕರ ಕೂಲಿ ಕೆಲಸ ಮಾಡಲು ಬಂದಂತಹ ಜನರು ಉಳಿದಿದ್ದರಿಂದ ಲೇಬರ್ ಕಾಲೋನಿ ಎಂಬ ಹೆಸರಿನ ಗ್ರಾಮವಾಗಿದೆ.
ಇಲ್ಲಿ ವಾಸಿಸುವ ಜನರು ಈ ಗ್ರಾಮಕ್ಕೆ ಬಂದು ಸುಮಾರು ಅರ್ಧ ಶತಕಗಳು ಕಳೆದಿವೆ. ಆದರೂ ಈ ಲೇಬರ್ ಕಾಲೋನಿಗೆ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. 1975ರಲ್ಲಿ ಕಂಪನಿಯೊಂದು ಗುಡ್ಡಗಳನ್ನು ಅಗೆದು ಗಣಿಗಾರಿಕೆ ಮಾಡುವುದಕ್ಕೆ ಶುರು ಮಾಡಿತ್ತು. ಆ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಲು ವಲಸೆ ಬಂದಿರುವ ಅರ್ಧ ಜನರು ಇದ್ದಾರೆ ಹಾಗೂ ಇಲ್ಲೇ ಪೂರ್ವಜರ ಕಾಲದಿಂದಲೂ ವಾಸ ಮಾಡುತ್ತಿದ್ದ ಜನರೂ ಕೂಡ ಇಲ್ಲಿ ವಾಸ ಮಾಡುತ್ತಿದ್ದಾರೆ.
ಕಂಪನಿ ಶುರುವಾದಾಗ ಜನರಿಗೆ ಅಲ್ಪ ಸ್ವಲ್ಪ ವ್ಯವಸ್ಥೆ ಇತ್ತು. ಕಂಪನಿಯನ್ನು ಮುಚ್ಚಿದಾಗ ಆ ವ್ಯವಸ್ಥೆ ಕೂಡ ಇಲ್ಲದಾಗಿದೆ. ಸುಮಾರು 150 ಕುಟುಂಬದವರು ಮೂಲನಿವಾಸಿಗಳು ವಾಸವಾಗಿದ್ದರೂ ಅಂದಿನಿಂದಲೂ ಮೂಲಸೌಕರ್ಯವಿಲ್ಲದೆ ಜನರು ಬದುಕು ಅಸ್ತವ್ಯಸ್ತವಾಗಿದೆ.
ಕುಡಿಯಲು ನೀರಿಗಾಗಿ ಗುಡ್ಡಗಳಿಂದ ಝರಿಯ ಮೂಲವಾಗಿ ಹರಿದು ಬರುವ ನೀರನ್ನು ಶೇಖರಣೆ ಮಾಡಿಕೊಂಡು ಕುಡಿದು ಬದುಕುತ್ತಿದ್ದರು. ಈವರೆಗೂ ವಿದ್ಯುತ್ ಬೆಳಕನ್ನು ಕಾಣದೆ ಪರದಾಡುವ ಪರಿಸ್ಥಿತಿ ಇಲ್ಲಿಯ ಜನರ ಪಾಡಾಗಿದೆ. 45-50 ವರ್ಷಗಳ ಹಿಂದೆಲ್ಲ ತುಂಬ ಮಂದಿ ವಾಸ ಮಾಡುತ್ತಿದ್ದರು. ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಇಲ್ಲದೆ ಅದೆಷ್ಟೋ ಜನರು ಊರು ತೊರೆದು ಹೋಗಿದ್ದಾರೆ.
ಕಲ್ಲು ಮುಳ್ಳು ಹಾಗೂ ರಸ್ತೆ ಮಾರ್ಗ ಹೊಂಡದ ರೀತಿಯಲ್ಲಿ ತುಂಬಿರುವ ರಸ್ತೆಗಳೇ ಕಾಣಸಿಗುತ್ತವೆ. ಇದೀಗ ಇಲ್ಲಿ ಸುಮಾರು 35 ರಿಂದ 40 ಕುಟುಂಬದವರು ಮಾತ್ರ ವಾಸ ಮಾಡುತ್ತಿದ್ದಾರೆ. ಇಲ್ಲಿ ವಾಸಿಸುವ ಜನರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದು, ಎಲ್ಲ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ.
ಕಾಡಂಚಿನಲ್ಲಿ ಸಿಗುವ ಸೊಪ್ಪು ಸೆದೆ ಕಾಡಿನ ಆಹಾರೋತ್ಪತ್ತಿಗಳನ್ನು ಬಳಸುತ್ತಾ ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಆದರೆ ಹಕ್ಕುಪತ್ರವಿಲ್ಲ, ಸರಿಯಾದ ಸೌಲಭ್ಯವಿಲ್ಲ. ಮಳೆ ಬಂದಾಗ ಮನೆಗಳು ಕುಸಿದು ನೀರು ಸೋರುತ್ತದೆ.
ಲೇಬರ್ ಕಾಲೋನಿಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾಭ್ಯಾಸಗಳಿಂದ ಅದೆಷ್ಟೋ ಮಕ್ಕಳು ವಂಚಿತರಾಗಿದ್ದಾರೆ. ಮತ ಹಾಕಿಸಿಕೊಳ್ಳುವಾಗ ಮಾತ್ರ ನಾವು ನೆನಪಾಗುತ್ತೇವೆ. ಇಲ್ಲಾಂದ್ರೆ ನಾವು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅದು ಕೇವಲ ಭರವಸೆಯಾಗದೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತಾಗಬೇಕು” ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸಾಮಾಜಿಕ ಭದ್ರತೆ ಯೋಜನೆಗಳ ನಿಯಮ ಸಡಿಲಿಸಿ ಮಾಸಿಕ ₹5,000ಕ್ಕೆ ಹೆಚ್ಚಿಸುವಂತೆ ಆಗ್ರಹ
“ಶಾಸಕರ ಜತೆಗೆ ಸಂಬಂದ ಪಟ್ಟ ಅಧಿಕಾರಿಗಳೂ ಕೂಡ ಇತ್ತ ಗಮನ ಹರಿಸಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.