ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಪ್ರವಾಸಿಗರ ನೆಚ್ಚಿನ ತಾಣವಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಜ್ಯದ ಅತಿ ಎತ್ತರದ ಗಿರಿ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಭಾರೀ ಪ್ರವಾಸಿಗರ ಆಗಮನದಿಂದ ಗಿರಿ ತುದಿಯಲ್ಲಿ ಟ್ರಾಫಿಕ್ ಜಾಮ್ ನಡೆದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಕಿರಿದಾದ ರಸ್ತೆಯ ಮೂಲಕ ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪ್ರವಾಸಿಗರ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು.

ಹೋಗಿರುವ ವಾಹನಗಳು ವಾಪಸ್ ಬರುವುದಕ್ಕೆ ಜಾಗವೇ ಇಲ್ಲದಂತೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು, ಸ್ಥಳಿಯರ ಹರಸಾಹಸ ಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಶಿವಮೊಗ್ಗ | ಬಿಸಿ ಚಹಾ ಮೈಮೇಲೆ ಬಿದ್ದು ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ನಿಧನ
ನಿರಂತರ ಮಳೆಯಿಂದ ಇಮ್ಮಡಿಗೊಂಡಿರುವ ಮುಳ್ಳಯ್ಯನಗಿರಿ ಸೌಂದರ್ಯ, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರಕೃತಿ ಸೊಬಗನ್ನ ಕಂಡು ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ. ಸಿಂಗಲ್ ರಸ್ತೆಯ ಗಿರಿ ತುದಿಯಲ್ಲಿ ಟ್ರಾಫಿಕ್ ಡ್ರೈವಿಂಗ್ ಕಿರಿಕಿರಿ ಉಂಟು ಮಾಡಿದೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಲಿದೆ ಎಂದು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ.



