ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರುತಿನಗರದ ಬಳಿ ಪ್ಲಾಸ್ಟಿಕ್ ಚೀಲ, ಹರಿದ ಬಟ್ಟೆ, ಗೋಣಿ ತಾಟುಗಳಿಂದ ಟೆಂಟು ಹಾಕಿಕೊಂಡು ಬದುಕುತ್ತಿರುವ ಅಲೆಮಾರಿ ಕುಟುಂಬವೊಂದು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊರಚಾರ್ ದುರ್ಗಪ್ಪ ಮತ್ತು ಜ್ಯೋತಿ ಕುಟುಂಬಕ್ಕೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ರೇಷನ್ ಕಾರ್ಡು, ವೋಟರ್ ಕಾರ್ಡು ಮಾತೆಲ್ಲಿ!
ದುರ್ಗಪ್ಪ ಮತ್ತು ಜ್ಯೋತಿ ದಂಪತಿಗೆ ನಾಲ್ಕು ಹೆಣ್ಣುಮಕ್ಕಳು ಮತ್ತು ಒಂದು ಗಂಡುಮಗು ಇದೆ. ಯಾರ ಬಳಿಯೂ ಆಧಾರ್ ಕಾರ್ಡ್ ಇಲ್ಲ. ಮಕ್ಕಳ ಭವಿಷ್ಯ ಏನೋ ಎಂತೋ ಎಂದು ಕೊರಗುವ ಇವರ ದನಿ ಇಂಗಿಹೋಗಿದೆ.
ಅಲೆಮಾರಿಗಳು ಅಸ್ಪೃಶ್ಯರಿಗೇ ಅಸ್ಪೃಶ್ಯರು!
ಇವರಿಗೆ ಸರ್ಕಾರದ ಯಾವುದೇ ಕನಿಷ್ಠ ಸವಲತ್ತು ಸಿಗಬೇಕಾದರೂ ಆಧಾರ್ ಕಾರ್ಡ್ ಅನಿವಾರ್ಯ. ಇವರ ಬಳಿ ಆಧಾರ್ ಕಾರ್ಡೇ ಇಲ್ಲ. ಆಧಾರ್ ಕಾರ್ಡ್ ಮಾಡಿಸಲೆಂದು ಅರ್ಜಿ ಹಾಕಲು ಹೋದರೆ ವೋಟರ್ ಐಡಿ ಕೇಳುತ್ತಾರೆ! ಇವರ ಬಳಿ ವೋಟರ್ ಕಾರ್ಡೂ ಇಲ್ಲ. ವೋಟರ್ ಕಾರ್ಡ್ಗೆ ಅರ್ಜಿ ಹಾಕಲು ಹೋದರೆ ರೇಷನ್ ಕಾರ್ಡ್ ಅಥವಾ ವಿಳಾಸದ ದಾಖಲೆ ಕೇಳುತ್ತಾರೆ. ವಿಳಾಸವೇ ಇಲ್ಲದ ಈ ಜನ ಎಲ್ಲಿಂದ ವಿಳಾಸ ತಂದಾರು?

ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ಬಳಿ ಈ ಕುರಿತು ವಿವರ ಕೇಳಿದಾಗ, ತಡಬಡಾಯಿಸಿದ ಅಧಿಕಾರಿಗಳು ಅಲೆಮಾರಿಗಳ ಟೆಂಟು-ಡೇರೆ ಬಿಡಾರ ಹುಡುಕಿಕೊಂಡು ಹೋಗಿ ಜಿಪಿಎಸ್ ಫೋಟೋ ಕ್ಲಿಕ್ಕಿಸಿಕೊಂಡು ಬರುತ್ತಾರೆ! ಅಷ್ಟೆ. ತಾಲೂಕು ಆಡಳಿತ ಈ ದುರ್ಗಪ್ಪ ಮತ್ತು ಜ್ಯೋತಿ ದಂಪತಿಗಳಿಗೆ ನಾಳೆ ಬನ್ನಿ, ನಾಳೆ ಬನ್ನಿ ಎಂದು ಹೇಳಿ ಹೇಳಿಯೇ ಸಾಗಹಾಕುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಹೀಗೆ ಆಧಾರ್ ಕಾರ್ಡ್ ಇಲ್ಲದೆ, ರೇಷನ್ ಕಾರ್ಡ್ ಇಲ್ಲದೆ, ವೋಟರ್ ಕಾರ್ಡ್ ಇಲ್ಲದೆ ಹಲವಾರು ವರ್ಷಗಳಿಂದ ದಿನದೂಡುತ್ತಿರುವ ಹಲವು ಕುಟುಂಬಗಳು ಚಿಕ್ಕನಾಯಕನಹಳ್ಳಿ ಪಟ್ಟಣ ಮತ್ತು ತಾಲೂಕಿನಲ್ಲಿ ಇವೆ. ಅಕ್ಷರ, ಅರಿವು ಎರಡೂ ಇಲ್ಲದ ಈ ಸಮುದಾಯಗಳ ಕಷ್ಟಗಳಿಗೆ ಅಧಿಕಾರಿಗಳೇ ಮುತುವರ್ಜಿ ವಹಿಸಿ, ಸ್ಪಂದಿಸಬೇಕಿದೆ ಎಂದು ಅಲೆಮಾರಿ ದಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿ ಶಾಂತರಾಮು ಮನವಿ ಮಾಡುತ್ತಾರೆ.

ಅಲೆಮಾರಿ ಆಯೋಗ ರಚನೆಗೆ ಒತ್ತಾಯ
ಐಡೆಂಟಿಟಿ ‘ಅಸ್ಮಿತೆ’ಯ ಇಂತಹ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿಕ್ಕಾಗಿಯೇ ಒಂದು “ಅಲೆಮಾರಿ ಆಯೋಗ” ರಚಿಸಿ ಕೊಡಬೇಕೆಂದು ಅಲೆಮಾರಿಗಳು, ಪ್ರಗತಿಪರರು, ಜನಪರ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಳ್ಳುತಿದ್ದಾರೆ. ಇದರಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಿ ಎಸ್ ದ್ವಾರಕನಾಥ್ ಪ್ರಮುಖರು.
ಅಲೆಮಾರಿಗಳ ಐಡೆಂಟಿಟಿ ಅಸ್ಮಿತೆ, ಜಾತಿ ಅಸ್ಮಿತೆ, ಕುಲ ಮೂಲ ಮತ್ತು ಇತರೆ ಎಲ್ಲ ಗೊಂದಲಗಳನ್ನು ಗುರುತಿಸಿ ಪರಿಹಾರಗಳನ್ನು ಕಂಡುಕೊಳ್ಳಲು ‘ಅಲೆಮಾರಿ ಆಯೋಗ’ದ ರಚನೆ ಅತ್ಯಗತ್ಯ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಒಂದು ತಿಂಗಳ ಒಳಗೇ ಮೂವತ್ತೆರಡು ಅಲೆಮಾರಿ ಸಮುದಾಯಗಳ ಮುಖಂಡರು ಅವರನ್ನು ಭೇಟಿ ಮಾಡಿ “ಅಲೆಮಾರಿ ಆಯೋಗ” ರಚಿಸಿಕೊಡುವಂತೆ ವಿನಂತಿಸಿದ್ದರು. “ಖಂಡಿತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭರವಸೆ ನೀಡಿದ್ದರು. ಆದರೀಗ ಆರೇಳು ತಿಂಗಳುಗಳು ಕಳೆದರೂ ಇದರ ಕಡೆ ಅವರು ಗಮನ ನೀಡುತ್ತಿಲ್ಲ. ಬಹುತೇಕ ಇದನ್ನು ಮರೆತೇ ಹೋದಂತಿದೆ ಎಂದು ಸಿ ಎಸ್ ದ್ವಾರಕನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

“ಕಿತ್ತು ತಿನ್ನುವ ಬಡತನ, ಹಸಿವು, ರೋಗ ರುಜಿನ, ಮಾರಣಾಂತಿಕ ಕಾಯಿಲೆ, ವಸತಿ ಹೀನತೆ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದಾಗಿ ಕೊರಗ, ಜೇನು ಕುರುಬ, ದಕ್ಕಲಿಗ ಮುಂತಾದ ಅನೇಕ ಸಮುದಾಯಗಳಲ್ಲಿ ಸಾವುಗಳು ಹೆಚ್ಚು. ಜನನ ಪ್ರಮಾಣಗಳು ತೀರಾ ಕಡಿಮೆಯಾಗುತ್ತಾ ಬರುತ್ತಿವೆ. ಮುಂಬರುವ ಇನ್ನೊಂದು ದಶಕದಲ್ಲಿ ನಮ್ಮಲ್ಲಿನ ಅನೇಕ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳು ನಶಿಸಿಹೋಗುವ ಸಾಧ್ಯತೆಗಳು ಹೆಚ್ಚುತ್ತಿದೆ. ಸರ್ಕಾರಿ ಭಾಷೆ ಗೊತ್ತಿಲ್ಲದೆ, ಬಾಯಿ ಇಲ್ಲದವರಂತೆ ಎಲ್ಲ ಕಷ್ಟಗಳನ್ನೂ ಸಹಿಸಿಕೊಳ್ಳುತ್ತಿರುವ ಇವರು ಯಾರ ಮುಂದೆ ತಮ್ಮ ಸಂಕಟವನ್ನು ಹೇಗೆ ಹೇಳಿಕೊಳ್ಳಬೇಕೋ ಏನೋ” ಎಂದು ಡಾ.ಸಿ.ಎಸ್.ದ್ವಾರಕಾನಾಥ್ ಪ್ರತಿಕ್ರಿಯಿಸಿದ್ದಾರೆ.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
