ಚಿಕ್ಕನಾಯಕನಹಳ್ಳಿ | ಸೌಲಭ್ಯಗಳಿಂದ ನಮ್ಮನ್ನು ವಂಚಿತರನ್ನಾಗಿಸಲಾಗುತ್ತಿದೆ: ಪೌರ ಕಾರ್ಮಿಕರ ಆರೋಪ

Date:

Advertisements

ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪುರಸಭಾ ವ್ಯಾಪ್ತಿಯ ಪೌರ ಕಾರ್ಮಿಕರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಪುರಸಭಾ ಆರೋಗ್ಯಾಧಿಕಾರಿ ನರಸಿಂಹರಾಜು ಅವರಲ್ಲಿ “ಸಫಾಯಿ ಕರ್ಮಚಾರಿಗಳ ಹೆಲ್ತ್ ಪ್ರೊಫೈಲ್” ಹಾಗೂ ಪೌರ ಕಾರ್ಮಿಕ ಹಕ್ಕು-ಸೌಲಭ್ಯಗಳ ಬಗ್ಗೆ ಪತ್ರಿಕೆ ವಿಚಾರಿಸಿದಾಗ ಸ್ಪಷ್ಟ ಉತ್ತರ ಸಿಗಲಿಲ್ಲ. ಆದರೆ, ಅಲ್ಲಿದ್ದ ಪೌರ ಕಾರ್ಮಿಕರ ಬಾಯಿಂದ ಅನೇಕ ವಿಷಾದನೀಯ ಸಂಗತಿಗಳು ಹೊರಬಂದಿದ್ದು, “ಸೌಲಭ್ಯಗಳಿಂದ ನಮ್ಮನ್ನು ವಂಚಿತರನ್ನಾಗಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದ ಪೌರ ಕಾರ್ಮಿಕರು, ತಮಗೆ ಪುರಸಭೆ ಮತ್ತು ಪುರಸಭೆ ಅಧಿಕಾರಿಗಳಿಂದ ತೊಂದರೆ ಆಗುತ್ತಿರುವ ಬಗ್ಗೆ ಆರೋಪಿಸಿದರು.

Advertisements

ಚಿಕ್ಕನಾಯಕನಹಳ್ಳಿ 3

ಪೌರ ಕಾರ್ಮಿಕರಲ್ಲಿರುವ ಆಶ್ರಯ ವಂಚಿತರಿಗೆ ಮನೆ ನಿರ್ಮಾಣ, ಸಫಾಯಿ ಕರ್ಮಚಾರಿಗಳ ಪುನರ್ವಸತಿ, ಶೌಚಾಲಯ ನಿರ್ಮಾಣ, ಮನೆ ದುರಸ್ತಿಗೆ ಧನಸಹಾಯ, ಇಎಸ್ಐ ಸೌಲಭ್ಯಗಳು, ಇತ್ಯಾದಿ ಯಾವುದೇ ಸೌಕರ್ಯಗಳನ್ನು ಅಧಿಕಾರಿಗಳು ಕೊಡಿಸುತ್ತಿಲ್ಲ. ಕಡೇಪಕ್ಷ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡುತ್ತಿಲ್ಲ. ಎಲ್ಲಿ ಹೋಗಬೇಕು, ಯಾವ ಇಲಾಖೆಯ ಅಧಿಕಾರಿಗಳನ್ನು ಕಾಣಬೇಕು, ಹೇಗೆ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂಬುದನ್ನೂ ತಿಳಿಸಿಕೊಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಪ್ರತಿದಿನ ಕೊಡಬೇಕಾದ ಶುಚಿಯಾದ ಮತ್ತು ಪೌಷ್ಟಿಕ ಆಹಾರ, ತಿಂಡಿಯ ಜೊತೆಗೆ ಪ್ರತಿ ಪೌರ ಕಾರ್ಮಿಕರಿಗೂ ಕೊಡಬೇಕಾಗಿರುವ ಮೊಟ್ಟೆ, ಸಫಾಯಿ ಕೆಲಸದ ಮುಂಜಾಗ್ರತಾ ಸಲಕರಣೆಗಳು, ಕೈಗಚಕ ಗಮ್ ಬೂಟು, ಮಾಸ್ಕ್‌ ಮುಂತಾದ ಸುರಕ್ಷಾ ಕವಚಗಳನ್ನೂ ಸಕಾಲಕ್ಕೆ ನೀಡುತ್ತಿಲ್ಲ. ಕೆಲವೊಮ್ಮೆ ಕೊಟ್ಟರೂ ಉತ್ತಮ ಗುಣಮಟ್ಟದ ಸುರಕ್ಷಾ ಕವಚಗಳು ಮತ್ತು ಸಲಕರಣೆಗಳನ್ನು ನೀಡದೇ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬಹುತೇಕ ಎಲ್ಲ ಪೌರಕಾರ್ಮಿಕರು ಆರೋಪಿಸಿದ್ದಾರೆ.

ಆರೋಗ್ಯಾಧಿಕಾರಿ ನರಸಿಂಹರಾಜು
ಆರೋಗ್ಯಾಧಿಕಾರಿ ನರಸಿಂಹರಾಜು

ಇದರ ಕುರಿತು ಆರೋಗ್ಯಾಧಿಕಾರಿ ನರಸಿಂಹರಾಜು ಅವರನ್ನು ಸಂಪರ್ಕಿಸಿದಾಗ, “ಪುರಸಭೆ ವತಿಯಿಂದ ನೀಡಬೇಕಾದ ಎಲ್ಲ ಸೌಕರ್ಯಗಳನ್ನು ಕಾಲಕಾಲಕ್ಕೆ ಪೌರ ಕಾರ್ಮಿಕರಿಗೆ ನಾವು ಒದಗಿಸಿ ಕೊಡುತ್ತಿದ್ದೇವೆ. ನಮ್ಮ ಬಳಿ ಎಲ್ಲದಕ್ಕೂ ದಾಖಲೆಗಳಿವೆ. ಆದರೆ, ನಮ್ಮ ಕರ್ಮಚಾರಿಗಳು ತಾವು ಪಡೆದ ಸೌಲಭ್ಯಗಳನ್ನು ಮರೆತಿದ್ದಾರೆ” ಎಂದು ಪ್ರತಿದೂರನ್ನು ಹೇಳುತ್ತಾರೆ.

ಪುರಸಭೆಯಲ್ಲಿ ವಿಷಯ ನಿರ್ವಾಹಕ ಹುದ್ದೆಯಲ್ಲಿರುವ ಮಧುಸೂದನ್ ಅವರನ್ನು ಈ ಬಗ್ಗೆ ವಿಚಾರಿಸಿದರೆ, ಅವರು ಸೂಕ್ತ ಉತ್ತರ ನೀಡಲಾಗದೆ ಪೌರ ಕಾರ್ಮಿಕರನ್ನೇ ಜೋರು ಮಾಡಿ ದಬಾಯಿಸುತ್ತಾರೆ. ಪ್ರಶ್ನಿಸಿದ ಸ್ಥಳೀಯ ಮಾಧ್ಯಮ ಪ್ರತಿನಿಧಿಯ ಎದುರಲ್ಲೇ ಪೌರಕಾರ್ಮಿಕರ ಮೇಲೆ ಅವರು ತಮ್ಮ ದುಂಡಾವರ್ತನೆ ತೋರಿದ್ದಾರೆ.

ಚಿಕ್ಕನಾಯಕನಹಳ್ಳಿ ಪುರಸಭೆ
ಚಿಕ್ಕನಾಯಕನಹಳ್ಳಿ ಪುರಸಭೆ

ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಅನುಷ್ಠಾನಗೊಳ್ಳಬೇಕಾದಂತಹ ಯೋಜನೆಗಳನ್ನು ‌ರೂಪಿಸುವ ಸಫಾಯಿ ಕರ್ಮಚಾರಿ ನಿಗಮ ವತಿಯಿಂದ 1 ಲಕ್ಷದವರೆಗಿನ ನೇರ ಸಾಲ ಸೌಲಭ್ಯ, 2 ಲಕ್ಷದವರೆಗಿನ ಐಎಸ್‌ಬಿ ಸಾಲ ಸೌಲಭ್ಯ, ವಾಹನ ಖರೀದಿಗಾಗಿ 4 ಲಕ್ಷದವರೆಗಿನ(ಸಬ್ಸಿಡಿ) ಸಾಲ ಸೌಲಭ್ಯಗಳಿಗಾಗಿ ಬಹುತೇಕ ಇನ್ನೊಂದೆರಡು ತಿಂಗಳಲ್ಲಿ ಆನ್‌ಲೈನ್ ಅರ್ಜಿ ಕರೆಯುವ ಸಾಧ್ಯತೆಯಿದೆ. ಆದರೆ, ಈ ಎಲ್ಲ ಸಾಲ ಸೌಲಭ್ಯಗಳನ್ನು ಪಡೆಯಬೇಕಾದ ಅರ್ಹ ಫಲಾಕಾಂಕ್ಷಿಗಳ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಸಕಾಲದಲ್ಲಿ ಕ್ರಮ ವಹಿಸುತ್ತಿಲ್ಲ ಎಂದು ಪೌರ ಕಾರ್ಮಿಕರು ದೂರುತ್ತಾರೆ. ಅಧಿಕಾರಿಗಳು ಮಾತ್ರ ಇದಕ್ಕೂ ಮುಗುಮ್ಮಾಗಿ ನುಣುಚಿಕೊಳ್ಳಲು ಯತ್ನಿಸುತ್ತಾರೆ.

ಇನ್ನು ಸಫಾಯಿ ಕರ್ಮಚಾರಿಗಳ ಆಯೋಗದ ಜಾರಿ ಮತ್ತು ಉಸ್ತುವಾರಿ ಹೊಣೆಯಿರುವ ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರ ಮೂರ್ತಿಯವರ ಬಳಿ ಯಾವುದೇ ಮಾಹಿತಿಯಿಲ್ಲ. ಅವರ ಇಲಾಖಾ ಅಧೀಕ್ಷಕ ಕುಮಾರಸ್ವಾಮಿ ಬಳಿಯೂ ಯಾವುದೇ ಕನಿಷ್ಠ ಮಾಹಿತಿ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಪುರಸಭೆಯಿಂದ ಮಾಹಿತಿ ಪಡೆದು ತಿಳಿಸುವುದಾಗಿ ಪ್ರಶ್ನಿಸಿದಾಗ ಹೇಳುತ್ತಾರೆ.

ಕಸ ಎತ್ತುವವರ ಬಗ್ಗೆ ಸಮಾಜ ಕಸದಂತೆಯೇ ನಡೆದುಕೊಳ್ಳುತ್ತಿದೆ: ಮುಖಂಡ ಸೈಯದ್ ಮುಜೀಬ್

ಅಸಂಘಟಿತ ಕಾರ್ಮಿಕರು ಹಾಗೂ ಪೌರ ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಕಳೆದ ಮೂವತ್ತು ವರ್ಷಗಳಿಂದ ತುಮಕೂರಿನ ಸುಬ್ರಮಣ್ಯ ಹಾಗೂ ಸೈಯದ್ ಮುಜೀಬ್ ಇಬ್ಬರೂ ನಿರಂತರವಾಗಿ ಹೋರಾಡುತ್ತಾ ಬಂದಿರುವವರು. ಈ ಪೌರ ಕಾರ್ಮಿಕರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲ ಸೈಯದ್ ಮುಜೀಬ್ ಇದರ ಬಗ್ಗೆ ಸವಿಸ್ತಾರವಾಗಿ ಹೇಳಿದ್ದು ಹೀಗೆ;

ಮುಜೀಬ್
ಸೈಯದ್ ಮುಜೀಬ್

“ಕಸ ಎತ್ತುವವರ ಬಗ್ಗೆ ಸಮಾಜ ಕಸದಂತೆಯೇ ನಡೆದುಕೊಳ್ಳುತ್ತಿದೆ. ಊರಿಗೇ ಡಾಕ್ಟರುಗಳಾಗಿರೋ ನಮ್ಮ ಪೌರ ಕಾರ್ಮಿಕರು ಬಹುತೇಕ ನಿರ್ದಿಷ್ಟವಾದ ಒಂದೇ ವರ್ಗದಿಂದ ಬಂದವರಾಗಿರುವ ಕಾರಣ ಈ ತಾರತಮ್ಯದ ಧೋರಣೆ ಇದ್ದೇ ಇದೆ. ಇದು ತಲೆತಲಾಂತರದಿಂದಲೂ ಸಮಾಜದೊಳಗೆ ಇನ್’ಬಿಲ್ಟ್ ಆಗಿಬಿಟ್ಟಿರುವ ದುಷ್ಟ ಮನಃಸ್ಥಿತಿ. ಸ್ಥಳೀಯ ಸಂಸ್ಥೆಗಳು, ಇಲಾಖೆಗಳು ಹಾಗೂ ಇಲಾಖಾ ಅಧಿಕಾರಿಗಳು ಕೂಡ ಪೌರ ಕಾರ್ಮಿಕರ ಜೊತೆ ಕನಿಷ್ಠ ಸಂವೇದನೆಯಿಂದ ವರ್ತಿಸುವುದಿಲ್ಲ. ಇಡೀ ನಗರವನ್ನು ಸ್ವಚ್ಛಗೊಳಿಸಿ, ನಾಗರಿಕರನ್ನು ರೋಗ-ರುಜಿನಗಳಿಂದ ರಕ್ಷಿಸುವ, ಸಾಂಕ್ರಾಮಿಕ ಹರಡದಂತೆ ವಸತಿಪ್ರದೇಶ ಮತ್ತು ಸಮಾಜವನ್ನು ಕಾಪಾಡುವ ಸಫಾಯಿ ಕರ್ಮಚಾರಿಗಳ ಬಗ್ಗೆ ಸಮಾಜವೇ ಆಗಲಿ, ಸರ್ಕಾರಿ ಅಧಿಕಾರಿಗಳೇ ಆಗಲಿ ಕನಿಷ್ಠ ಸೂಕ್ಷ್ಮತೆ ಹಾಗೂ ಪ್ರಬುದ್ಧತೆಯನ್ನು ತೋರುತ್ತಿಲ್ಲ. ಇದು ನಾಗರಿಕ ವ್ಯವಸ್ಥೆ ತಲೆತಗ್ಗಿಸುವಂಥದ್ದು” ಎಂದಿದ್ದಾರೆ.

“ಪೌರ ಕಾರ್ಮಿಕರಿಗೆ ಕೊಡಲಾಗುವ ಊಟ-ತಿಂಡಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಸರ್ಕಾರ ನೀಡುವ 35 ರೂ.ಗಳ ಜೊತೆಗೆ ಸ್ಥಳೀಯ ಸಂಸ್ಥೆಗಳು ಹೆಚ್ಚುವರಿ ಹಣ ಹಾಕಿ ಉತ್ತಮವಾದ ಊಟ-ತಿಂಡಿ ವ್ಯವಸ್ಥೆ ಮಾಡಬೇಕು ಎಂಬ ಆದೇಶವಿದೆ. ಕಾರ್ಮಿಕರಿಗೆ ನೀಡುವ ಆಹಾರವನ್ನು ಪರೀಕ್ಷೆ ಮಾಡಿದ ನಂತರ ಅವರಿಗೆ ಉಣಬಡಿಸಬೇಕು. ಅದಕ್ಕಂತಲೇ ಒಬ್ಬ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಿ ಅವರ ಮೂಲಕ ಪರೀಕ್ಷಿಸಿ, ಗುಣಮಟ್ಟವನ್ನು ಅವರು ದೃಢಪಡಿಸಿದ ನಂತರವಷ್ಟೇ ಆ ಆಹಾರವನ್ನು ಕೊಡಬೇಕು. ಆದರೆ, ಬಹಳಷ್ಟು ಕಡೆ ಪೌರ ಕಾರ್ಮಿಕರಿಗೆ ಕೊಡಬೇಕಾದ ಒಂದೊಂದು ಕೋಳಿ ಮೊಟ್ಟೆಯನ್ನೇ ಕೊಡುತ್ತಿಲ್ಲ. ಕೇಳಿದರೆ, ಊಟ-ತಿಂಡಿಗೆ ಬಜೆಟ್‌ ಇಲ್ಲ ಎಂಬ ಹೊಣೆಗೇಡಿ ಉತ್ತರ ಕೊಡುತ್ತಾರೆ. ಇದು ಅಕ್ಷಮ್ಯವಾದುದು” ಎಂದಿದ್ದಾರೆ.

ಇದನ್ನು ಓದಿದ್ದೀರಾ? ಧಾರವಾಡ | ದಲಿತ ಯುವಕನ ಕೈ ಕತ್ತರಿಸಿದವರನ್ನು ಕೂಡಲೇ ಗಡಿಪಾರು ಮಾಡಲು ದಸಂಸ ಆಗ್ರಹ

ಪೌರ ಕಾರ್ಮಿಕ, ಸಫಾಯಿ ಕರ್ಮಚಾರಿಗಳ ಆರೋಗ್ಯ ಉತ್ತಮವಾಗಿದ್ದರೇ ತಾನೆ ಊರಿನ ಆರೋಗ್ಯ ಕಾಪಾಡಿಕೊಳ್ಳುವುದು. ಆದರೆ, ಗರಿಷ್ಟ 50’ರ ಆಯಸ್ಸನ್ನೂ ದಾಟಲಾಗದೆ ತೀರಿಹೋಗುತ್ತಿರುವುದು ಪೌರ ಕಾರ್ಮಿಕರಲ್ಲಿ ಸಾಮಾನ್ಯ ಸಂಗತಿ ಆಗಿಹೋಗಿದೆ. ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಪೌರ ಕಾರ್ಮಿಕರ “ಹೆಲ್ತ್ ಪ್ರೊಫೈಲ್” ನಿರ್ವಹಣೆ ಮಾಡಬೇಕು. ಎಲ್ಲರಿಗೂ ಇಎಸ್ಐ ಕಾರ್ಡ್ ವಿತರಿಸಿ, ಹೆಚ್ವಿನ ಚಿಕಿತ್ಸೆಗೆ ದೊಡ್ಡಾಸ್ಪತ್ರೆಗಳಿಗೆ ಹೋಗುವ ಅನುಕೂಲಗಳನ್ನು ಮಾಡಿಕೊಡಬೇಕು. ಆದರೆ, ಗುತ್ತಿಗೆ ನೌಕರರಾದ ಇವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದೇ ಈ ಸಮಾಜ ಮತ್ತು ಈ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದರು.

ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

Download Eedina App Android / iOS

X