ಚಿಕ್ಕನಾಯಕನಹಳ್ಳಿ ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ ನವೋದಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆಸಲಾದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, “ಪ್ರತಿಯೊಬ್ಬ ವಿದ್ಯಾರ್ಥಿಗೂ ಹಳ್ಳಿ ಬದುಕಿನ ಅನುಭವ ಇರಬೇಕು” ಎಂದು ಹೇಳಿದರು.
“ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ ಹಾಗೂ ಪಠ್ಯೇತರ ವಿಷಯಗಳು ಎಷ್ಟು ಮುಖ್ಯವೋ ಹಾಗೇ ಜೀವನಾನುಭವ ಕೂಡ ಅಷ್ಟೇ ಮುಖ್ಯ. ಜನ, ಜಮೀನು, ಜಲ, ಜಾನುವಾರು, ಸಮಾಜ, ಪರಿಸರ, ಗ್ರಾಮ ಎಲ್ಲ ಎಲ್ಲದರ ಅನುಭವವೂ ವಿದ್ಯಾರ್ಥಿಯ ಬದುಕಿನಲ್ಲಿ ಉತ್ತಮವಾದ ಪಾತ್ರ ನಿರ್ವಹಿಸುತ್ತದೆ. ವಿದ್ಯಾರ್ಥಿ ತನ್ನ ಭವಿಷ್ಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಆತ ಅಥವಾ ಆಕೆ ಗಳಿಸಿದ ಈಯೆಲ್ಲ ಅನುಭವವೇ ಸರ್ವಶ್ರೇಷ್ಠವಾದ ಮಾರ್ಗದರ್ಶನ ನೀಡುತ್ತದೆ” ಎಂದರು.
“ಗ್ರಾಮೀಣ ಬದುಕನ್ನು ಕಂಡುಂಡ ವಿದ್ಯಾರ್ಥಿ ಮುಂದೆ ತಾನು ದೊಡ್ಡ ಅಧಿಕಾರಿಯಾಗಿ ಆಡಳಿತ ಸೇವೆ ಮಾಡುವಾಗಲೋ, ಸಾರ್ವಜನಿಕ ಸೇವೆ ಮಾಡುವಾಗಲೋ ನೆರವಿಗೆ ಬರುತ್ತದೆ. ಭವಿಷ್ಯದ ರಾಷ್ಟ್ರ ಚಿಂತಕರಾದ ನಿಮಗೆ ದೇಶದ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳಬೇಕಾದಲ್ಲಿ ಈ ಹಳ್ಳಿ ಬದುಕಿನ ಅನುಭವವೇ ಅತ್ತ್ಯುತ್ತಮ ಮಾರ್ಗದರ್ಶಕನಾಗಿ ಒದಗುತ್ತದೆ ಎಂಬುದನ್ನು ನೆನಪಿಡಬೇಕು” ಎಂದು ಮಾಧುಸ್ವಾಮಿ ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿಯವರ ‘ಹಳ್ಳಿಗಳ ಉದ್ಧಾರದಿಂದ ದೇಶದ ಉದ್ಧಾರ’ ಎಂಬ ಧ್ಯೇಯವಾಕ್ಯದಿಂದ ಪ್ರೇರಿತವಾಗಿ ಪ್ರಾರಂಭಗೊಂಡ ಈ ‘ರಾಷ್ಟ್ರೀಯ ಸೇವಾ ಯೋಜನೆ ಶಿಬಿರ’ಗಳು ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯಕ್ಕೆ ನೀಡಿದ ಕೊಡುಗೆ ಶ್ಲಾಘನೀಯವಾದುದು. ಗಾಂಧೀಜಿಯವರ ಕನಸಿನ ಈ ರಾಷ್ಟ್ರೀಯ ಸೇವಾ ಯೋಜನೆಯೇ ಈಗ ಹೊಸ ಹೊಸ ಆಯಾಮಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಅಭಿಯಾನಗಳಾಗಿ ಮುಂದುವರೆಯುತ್ತಿವೆ. ಇದು, ರಾಷ್ಟ್ರ ನಿರ್ಮಾಣದ ದಿಕ್ಕು ದೆಸೆಗಳನ್ನು ಅಂದೇ ನಿರ್ಣಯಿಸಲು ಶ್ರಮಿಸಿದ್ದ ಮಹಾತ್ಮರ ದೂರದೃಷ್ಟಿಯ ಫಲ. ಸ್ವರಾಜ್ಯ ಪರಿಕಲ್ಪನೆಯ, ಸ್ವಾವಲಂಬಿ ಗ್ರಾಮಭಾರತ ಆಶಯದ ಗಾಂಧೀಭಾರತಕ್ಕೆ ಆಗಿನ ಕಾಲದಲ್ಲೇ ಬರೆಯಲ್ಪಟ್ಟ ಮುನ್ನುಡಿ ಎಂದರು.
ನವೋದಯ ಪ್ರಥಮ ದರ್ಜೆ ಕಾಲೇಜು ಸಂಸ್ಥೆಯ ಕಾರ್ಯದರ್ಶಿ ಬಿ ಕೆ ಚಂದ್ರಶೇಖರ್ ಮಾತನಾಡುತ್ತಾ, 1969’ರಲ್ಲಿ ಆರಂಭಗೊಂಡ ಎನ್ ಎಸ್ ಎಸ್ ಶಿಬಿರ ಯೋಜನೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ಮಹತ್ತರವಾದುದು. ನಗರ ಜೀವನದತ್ತ ವಲಸೆ ಬಯಸುವ ವಿದ್ಯಾರ್ಥಿಗಳ ಮನಸ್ಸನ್ನು ಹಳ್ಳಿಗಳತ್ತ ಸೆಳೆಯುವಂತೆ ಮಾಡುವ ಗುರುತ್ವಾಕರ್ಷಣೆ ಈ ಎನ್ ಎಸ್ ಎಸ್ ಶಿಬಿರಗಳಿಗಿದೆ. ಹಳ್ಳಿಗಳು ಇಂದಿಗೂ ನಮ ನೆಲ ಸಂಸ್ಕೃತಿ ಮತ್ತು ಶ್ರಮ ಸಂಸ್ಕೃತಿಯನ್ನು ಜೀವಂತವಾಗಿ ಸಾಕ್ಷೀಕರಿಸುತ್ತವೆ. ಇದು ವಿದ್ಯಾರ್ಥಿ ಬದುಕಿನಲ್ಲಿ ಅತಿದೊಡ್ಡ ಜೀವನಾನುಭವವನ್ನು ಗಳಿಸಿ ಕೊಡುತ್ತದೆ ಎಂದರು.
ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಮಾತನಾಡಿ, “ಎನ್‌ಎಸ್‌ಎಸ್ ಶಿಬಿರದ ಸಮುದಾಯ ಸೇವೆಯ ಕಾರ್ಯಗಳಲ್ಲಿ ಸ್ವಚ್ಛತೆ, ಆರೋಗ್ಯ, ಪರಿಸರ ನೈರ್ಮಲ್ಯ ಅಷ್ಟೇ ಅಲ್ಲದೆ ಗ್ರಾಮದ 32 ಜನರಿಗೆ ಎಸ್ ಬಿ ಐ ಬ್ಯಾಂಕ್’ನಲ್ಲಿ ಉಚಿತವಾಗಿ ಉಳಿತಾಯ ಖಾತೆಗಳನ್ನು ಮಾಡಿಸಿಕೊಡಲಾಗಿದೆ. ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಪಶು ತಪಾಸಣೆ ಶಿಬಿರಗಳನ್ನು ನಡೆಸಲಾಗಿದೆ. ಕಳೆದ 43 ವರ್ಷಗಳಿಂದ ನವೋದಯ ಪ್ರಥಮ ದರ್ಜೆ ಕಾಲೇಜು ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳ ಮೂಲಕ ಗ್ರಾಮ ಹಾಗೂ ಸಮುದಾಯ ಸೇವೆಯಲ್ಲಿ ಅನೇಕ ಜನೋಪಯೋಗಿ ಕಾರ್ಯಗಳನ್ನು ಸಾಕಾರಗೊಳಿಸಿರುವ ಸಾರ್ಥಕತೆ ಹೊಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಮ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್, ನವೋದಯ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಯುವಕ-ಯುವತಿಯರು ಪಾಲ್ಗೊಂಡಿದ್ದರು.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ
