ಚಿಕ್ಕಮಗಳೂರು ತಾಲೂಕು ರೈತ ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಮ ಬಾಹಿರವಾಗಿದ್ದು, ಸಂಘಟನೆಯಲ್ಲಿ ಇಂತಹ ಅಶಿಸ್ತನ್ನು ‘ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ತಾಲೂಕು ಅಧ್ಯಕ್ಷ ವೈ.ಸಿ. ಸುನಿಲ್ ಕುಮಾರ್ ವಿರುದ್ಧ ಕೇಳಿಬಂದಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಸಮಿತಿಯು ನೋಟಿಸ್ ಜಾರಿ ಮಾಡಿತ್ತು. ಆದರೆ, ಈ ನೋಟಿಸ್ಗೆ ಉತ್ತರಿಸಲು ಸಾಧ್ಯವಾಗದೆ, ಮುಖಭಂಗದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ನೆಪ ಹೇಳಿ ರಾಜೀನಾಮೆ ನಾಟಕವಾಡಿದ್ದಾರೆ ಎಂದು ಮಹೇಶ್ ಕಿಡಿಕಾರಿದ್ದಾರೆ.
ತಾಲೂಕು ಸಮಿತಿಗೆ ತಿಳಿಸದೆ, ನಿಯಮಾವಳಿಗಳನ್ನು ಗಾಳಿಗೆ ತೂರಿ ಕೇವಲ ಬೆರಳಣಿಕೆಯಷ್ಟು ಜನರ ಸಮ್ಮುಖದಲ್ಲಿ ಡಿ. ರಾಮೇಗೌಡ ಅವರನ್ನು ಅಧ್ಯಕ್ಷರೆಂದು ಘೋಷಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ. ರಾಜ್ಯ ಸಮಿತಿಯ ಗಮನಕ್ಕೆ ಬಂದಿರುವ ಈ ಗಂಭೀರ ಶಿಸ್ತು ಉಲ್ಲಂಘನೆಯನ್ನು ಪರಿಗಣಿಸಿ, ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ಇಡೀ ಚಿಕ್ಕಮಗಳೂರು ತಾಲೂಕು ಸಮಿತಿಯನ್ನೇ ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಸಂಘಟನೆಯ ಬೈಲಾಗೆ ವಿರುದ್ಧವಾಗಿ ನಡೆದಿರುವ ಈ ನೂತನ ಅಧ್ಯಕ್ಷರ ಆಯ್ಕೆಗೂ, ರೈತ ಸಂಘದ ತಾಲೂಕು ಮತ್ತು ಜಿಲ್ಲಾ ಸಮಿತಿಗೂ ಯಾವುದೇ ಸಂಬಂಧವಿಲ್ಲ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಮತ್ತಾವರ ಜಯರಾಮ್ ಅವರನ್ನು ತಾಲೂಕು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ತಾಲೂಕಿನ ರೈತರ ಸಭೆ ಕರೆದು ನಿಯಮಾನುಸಾರ ಹೊಸ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ರೈತ ಮುಖಂಡ ಡಿ. ಮಹೇಶ್ ತಿಳಿಸಿದಾರೆ.
ಇದನ್ನೂ ಓದಿದ್ದೀರಾ?ಹಾಸನ | ಕಾಂಗ್ರೆಸ್ ಸರ್ಕಾರ: ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯ ; ಶಾಸಕ ಹೆಚ್. ಪಿ ಸ್ವರೂಪ್ ಪ್ರಕಾಶ್
ಈ ವೇಳೆ ಬಸವರಾಜು, ಶಿವಕುಮಾರ್, ಜಯರಾಮ್, ಕುಮಾರಸ್ವಾಮಿ, ದೇವರಾಜು, ಶಿವಣ್ಣ, ಯುವರಾಜು, ಸುನೀಲ್ ಕುಮಾರ್ ಕೆ. ಟಿ, ಸಿದ್ದೇಗೌಡ, ಮಾದೇಗೌಡ, ಚಂದ್ರುಶೇಖರ್, ಆನಂದ್, ಗುರುಶಾಂತಪ್ಪ ಹಾಗೂ ಇನ್ನಿತರರಿದ್ದರು.




